ಕರ್ನಾಟಕ

ಚಿಂಚೋಳಿ ಉಪಚುನಾವಣೆ: ರಂಗಪ್ರವೇಶಕ್ಕೆ ಕಾಂಗ್ರೆಸ್‍ನಲ್ಲಿ ಪೈಪೋಟಿ

Nagaraja AB

ಬೆಂಗಳೂರು: ಲೋಕಸಭಾ ಚುನಾವಣೆಯ ಸದ್ದು ತಣ್ಣಗಾಗುತ್ತಿದ್ದಂತೆ ರಾಜ್ಯದಲ್ಲೀಗ ಉಪಚುನಾವಣೆಯ ಸಪ್ಪಳ ಹೆಚ್ಚಾಗುತ್ತಿದೆ. ಮೀಸಲು ಚಿಂಚೋಳಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಾಳಯದಲ್ಲಿ ಬಿ.ಫಾರಂ ಪಡೆಯಲು ಆಕಾಂಕ್ಷಿಗಳ ದಂಡು ಹೆಚ್ಚುತ್ತಿದೆ.

ಶಾಸಕ ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಕ್ಕೀಗ ಮೇ 19 ರಂದು ಉಪಚುನಾವಣೆ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಡಿದೆದ್ದು ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಜಾಧವ್, ಬಿಜೆಪಿಯಿಂದ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದಾರೆ.

ಮೈತ್ರಿ ಪಕ್ಷಗಳು ಒಟ್ಟಾಗಿ ಉಪಚುನಾವಣೆಯನ್ನು ಎದುರಿಸುತ್ತಿದ್ದು, ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಕಾಂಗ್ರೆಸ್ ಚಿಂಚೋಳಿಯನ್ನು ಮರುವಶಕ್ಕೆ ಪಡೆಯಲು ಸಮರ್ಥ ಅಭ್ಯರ್ಥಿಯ ಆಯ್ಕೆಗಾಗಿ ಹುಡುಕಾಟ ನಡೆಸಿದೆ.ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿ ಕಾಂಗ್ರೆಸ್‍ ನಾಯಕರಿದ್ದಾರೆ. ತಮ್ಮ ವಿರುದ್ಧ ತೊಡೆತಟ್ಟಿರುವ ಉಮೇಶ್ ಜಾಧವ್ ಬಣವನ್ನು ಹೇಗಾದರೂ ಮಾಡಿ ಮಣಿಸಬೇಕು. ಹಾಗೂ ಚಿಂಚೋಳಿಯನ್ನು ಮತ್ತೆ ವಶಕ್ಕೆ ಪಡೆಯಬೇಕೆಂಬ ಜಿದ್ದಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿದ್ದಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್‍ನಿಂದ  ಕಣಕ್ಕಿಳಿದಿದ್ದ  ಡಾ.ಉಮೇಶ್ ಜಾಧವ್  ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ದ್ವಿತೀಯ ಸ್ಥಾನದಲ್ಲಿದ್ದು, ಇಲ್ಲಿ ಜೆಡಿಎಸ್ ನಗಣ್ಯವಾಗಿತ್ತು. ಕ್ಷೇತ್ರದಲ್ಲಿ 1,93,782 ಕ್ಕೂ ಹೆಚ್ಚು ಮತದಾರರಿದ್ದು, ಇದರಲ್ಲಿ 1 ಲಕ್ಷಕ್ಕೂ ಹೆಚ್ಚಿನ ಲಿಂಗಾಯತ, 80 ಸಾವಿರಕ್ಕೂ ಅಧಿಕ ಬಂಜಾರ ಸಮುದಾಯದ ಮತಗಳಿವೆ.

ಈ ಬಾರಿ ಉಪಚುನಾವಣೆಗೆ ಕಾಂಗ್ರೆಸ್‍ನಿಂದ ಟಿಕೆಟ್ ಬಯಸಿದ್ದಾರೆ. ಇವರೊಂದಿಗೆ ಬಾಬು ಹೊನ್ನಾನಾಯಕ್ , ಜಿಲ್ಲಾಪಂಚಾಯತ್ ಸದಸ್ಯೆ ಜಯಶ್ರೀ ಅವರ ಪತಿ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕ ಜಯಸಿಂಗ್ ಧನಸಿಂಗ್ ರಾಠೋಡ್ ಸಹ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಬಾಬುರಾವ್ ಚವ್ಹಾಣ್ ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಬೇರೆ ಕ್ಷೇತ್ರದಿಂದ ಬಂದಿರುವ ಚವ್ಹಾಣ್ ಅವರಿಗೆ ಟಿಕೆಟ್ ನೀಡಬಾರದು ಎಂಬ ಒತ್ತಡವಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುಹೊನ್ನಾನಾಯಕ್, ತಾವು ಹಲವು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ, ಸಂಸದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. 2008 ರಲ್ಲಿ ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದು ತಮಗೆ ಟಿಕೆಟ್ ನೀಡಿರಲಿಲ್ಲ. ಈ ಬಾರಿಯಾದರೂ ಪಕ್ಷ ಉಪಚುನಾವಣೆಗೆ ಬಿ.ಫಾರಂ ನೀಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿಯನ್ನು ಅಖೈರುಗೊಳಿಸುವ ನಿಟ್ಟಿನಲ್ಲಿ  ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಥಳೀಯ ನಾಯಕರು ಹಾಗೂ ಆಕಾಂಕ್ಷಿಗಳ ಜೊತೆಗೆ ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಚಿಂಚೋಳಿ ಉಪಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸಿ ಪಕ್ಷದ ಗೆಲುವಿಗೆ ಅಗತ್ಯ ತಂತ್ರಗಾರಿಕೆ ರೂಪಿಸಲಾಗಿದೆ. ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುತ್ತೇವೆ ಎಂಬ ಒಗ್ಗಟ್ಟಿನ ಅಭಿಪ್ರಾಯಕ್ಕೆ ಪಕ್ಷದ ಕಾರ್ಯಕರ್ತರು ಬಂದಿದ್ದು, ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಆಕಾಂಕ್ಷಿಗಳ ಪಟ್ಟಿಯೊಂದಿಗೆ ಕಾರ್ಯಕರ್ತರ, ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿ ಅವರು ಸೂಚಿಸುವ ಅಭ್ಯರ್ಥಿಗೆ  ಬಿ.ಫಾರಂ ನೀಡಲಾಗುವುದು ಎಂದರು.
SCROLL FOR NEXT