ಕರ್ನಾಟಕ

ಲೋಕಸಭೆ ಮುಗೀತು; ಇದೀಗ ಕರ್ನಾಟಕದಲ್ಲಿ ವಿಧಾನಸಭೆ ಉಪ ಚುನಾವಣೆ ಪರ್ವ

Sumana Upadhyaya
ಕಲಬುರಗಿ: ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭೆ ಚುನಾವಣೆ ಮುಗಿದ ಕೂಡಲೇ ರಾಜಕೀಯ ನೇತಾರರು ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಎರಡೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮೇ 19ರಂದು ನಡೆಯಲಿದೆ.
ಇದೇ 29ರಂದು ಉಪ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಗಾಗಿ ಲಾಬಿ ನಡೆಯುತ್ತಿದೆ. ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಡಾ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದರಿಂದ ಮತ್ತು ಕುಂದಗೋಳದಲ್ಲಿ ಕಾಂಗ್ರೆಸ್ ಶಾಸಕ ಸಿ ಎಸ್ ಶಿವಳ್ಳಿ ನಿಧನದಿಂದ ಉಪ ಚುನಾವಣೆ ನಡೆಯುತ್ತಿದೆ.
ಕಳೆದ ಮಂಗಳವಾರ ಲೋಕಸಭೆ ಚುನಾವಣೆ ಮುಗಿದ ಕೂಡಲೇ ಬಿಜೆಪಿ ನಾಯಕ ಉಮೇಶ್ ಜಾಧವ್ ಬೆಂಗಳೂರಿಗೆ ದೌಡಾಯಿಸಿದ್ದರು. ಅಲ್ಲಿ ಬಿಜೆಪಿ ನಾಯಕರಿಗೆ ತಮ್ಮ ಇಷ್ಟನ ನಾಯಕನಿಗೆ ಟಿಕೆಟ್ ಕೊಡಿಸಲು ಒತ್ತಡ ಹಾಕಿದ್ದರು ಎನ್ನಲಾಗುತ್ತಿದೆ. ಗುಲ್ಬರ್ಗದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಾಗ ಈ ರೀತಿ ನಾಯಕರ ಮಧ್ಯೆ ಒಪ್ಪಂದವಾಗಿತ್ತು ಎಂದು ಹೇಳಲಾಗಿದೆ. ತನ್ನ ಪುತ್ರ ಅವಿನಾಶ್ ಜಾಧವ್ ನನ್ನು ಕಣಕ್ಕಿಳಿಸಲು ಉಮೇಶ್ ಜಾಧವ್ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈ ಹಿಂದೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ರಾಜಕೀಯವಾಗಿ ಬೆಳೆಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಹೀಗಾಗಿ ಇದೀಗ ಉಮೇಶ್ ಜಾಧವ್ ಪುತ್ರನಿಗೆ ಟಿಕೆಟ್ ಕೊಡಿಸಿದರೆ ಅದೇ ಅಪವಾದ ಬಿಜೆಪಿಗೆ ಬರುತ್ತದೆ. ಪುತ್ರ ಅವಿನಾಶ್ ಗೆ ಟಿಕೆಟ್ ಕೊಡದಿದ್ದರೆ ಸಹೋದರ ರಾಮಚಂದ್ರ ಜಾಧವ್ ಅಥವಾ ಸಂಬಂಧಿಕ ಅರುಣ್ ಪವರ್ ಗೆ ಕೊಡಿ ಎಂದು ಒತ್ತಡ ಹಾಕಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಕಾಂಗ್ರೆಸ್ ನಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಸುಭಾಷ್ ರಾಥೋಡ್ ಮತ್ತು ಬಾಬು ರಾವ್ ಚೌಹಾಣ್ ಹೆಸರು ಕೇಳಿಬರುತ್ತಿದೆ. ಅಂತಿಮ ನಿರ್ಧಾರ ಮಲ್ಲಿಕಾರ್ಜುನ ಖರ್ಗೆಯವರೇ ತೆಗೆದುಕೊಳ್ಳುವ ಸಾಧ್ಯತೆಯಿದೆ.
SCROLL FOR NEXT