ಕರ್ನಾಟಕ

ನಿಮ್ಮ ಜೊತೆ ಮಾತಾಡಲ್ಲ, ಬಹಿಷ್ಕಾರ ಹಾಕಿದ್ದೇನೆ; ಪತ್ರಕರ್ತರ ಮೇಲೆ ಮತ್ತೆ ಸಿಎಂ ಕುಮಾರಸ್ವಾಮಿ ಗರಂ

Sumana Upadhyaya
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ನಂತರ ಹೆಚ್ ಡಿ ಕುಮಾರಸ್ವಾಮಿಯವರಿಗೆ ಸುದ್ದಿವಾಹಿನಿಗಳ ಮೇಲೆ ಅಭಿಪ್ರಾಯ, ಸಂಬಂಧ ಅಷ್ಟಕಷ್ಟೆ. ತಮ್ಮ ಬಗ್ಗೆ ಇಲ್ಲಸಲ್ಲದ ಆರೋಪ, ಅಪಪ್ರಚಾರವನ್ನು ಮಾಧ್ಯಮಗಳು ಮಾಡುತ್ತವೆ ಎಂಬ ಅಸಮಾಧಾನ ಅವರಿಗೆ. ಹೀಗಾಗಿ ಮಾಧ್ಯಮಗಳ ವಿರುದ್ಧ ಬಹಿರಂಗವಾಗಿಯೇ ಸಿಎಂ ಗರಂ ಆಗಿದ್ದುಂಟು.
ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸಭೆ ನಡೆಯಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದರು. ರಮೇಶ್ ಜಾರಕಿಹೊಳಿ ರಾಜೀನಾಮೆ, ಶಾಸಕರ ಬಂಡಾಯ, ಬಿಜೆಪಿಯ ಆಪರೇಷನ್ ಕಮಲ, ಲೋಕಸಭಾ ಚುನಾವಣೆ ಕ್ಷೇತ್ರವಾರು ಫಲಿತಾಂಶ, ಆಪರೇಷನ್ ಕಮಲ ತಡೆಯಲು ರಚಿಸಬೇಕಾದ ತಂತ್ರಗಳು ಹಾಗೂ ಉಪ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಸಭೆ ಮುಗಿಸಿ ಹೊಟೇಲ್ ನಿಂದ ಹೊರಗೆ ಬರುವಾಗ ಸಿಎಂ ಬಳಿ ಸುದ್ದಿವಾಹಿನಿ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ ಸಿಎಂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಿಮ್ಮಲ್ಲಿನ ಚರ್ಚೆ ಹಾಗೂ ಸುದ್ದಿಗಳಿಂದ ನಾನು ಬಹಿಷ್ಕಾರ ಹಾಕಿದ್ದೇನೆ. ನಾನು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿದ್ದೇನೆ (ಐ ಆಮ್ ಬಾಯ್ಕಾಟಿಂಗ್ ಯುವರ್ ಸೆಲ್ಫ್) ಎಂದು ಹೇಳಿ ಸಿಟ್ಟಿನಿಂದಲೇ ಕಾರು ಹತ್ತಿ ಕುಳಿತರು.
SCROLL FOR NEXT