ಕರ್ನಾಟಕ

ಬಿಎಸ್ ವೈ ಡೈರಿ ಕುರಿತು ಲೋಕಪಾಲ್‍ ನಿಂದ ತನಿಖೆಯಾಗಲಿ: ಸಿದ್ದರಾಮಯ್ಯ

Lingaraj Badiger
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ವರಿಷ್ಠರಿಗೆ ಕಪ್ಪ ಕಾಣಿಕೆ ಸಲ್ಲಿಸಿರುವ ಅಂಶಗಳನ್ನೊಳಗೊಂಡ ಡೈರಿಯಲ್ಲಿನ ಮಾಹಿತಿ ಅತ್ಯಂತ ಗಂಭೀರವಾಗಿದ್ದು, ಈ  ಬಗ್ಗೆ ಕೇಂದ್ರ ಸರ್ಕಾರ ರಚಿಸಿರುವ ಲೋಕಪಾಲ್ ವ್ಯವಸ್ಥೆಯ ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು  ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಒತ್ತಾಯಿಸಿದ್ದಾರೆ. 
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೈರಿಯಲ್ಲಿರುವ ಹಸ್ತಾಕ್ಷರ ಯಡಿಯೂರಪ್ಪ ಅವರದ್ದೇ ಆಗಿದೆ. ಆದರೆ ಅವರು ತಮ್ಮ ತಪ್ಪನ್ನು ಮಾತ್ರ ಒಪ್ಪಿಕೊಳ್ಳುತ್ತಿಲ್ಲ. ಸಮಗ್ರ ತನಿಖೆಯಿಂದ  ಮಾತ್ರ ಸತ್ಯ ಮತ್ತು ಅಸತ್ಯ ಯಾವುದು? ಎಂಬುದು ಬಹಿರಂಗಗೊಳ್ಳಲಿದೆ ಎಂದರು. 
ತಪ್ಪು ಮಾಡಿದವರು ಎಂದೂ ತಮ್ಮ ಲೋಪಗಳನ್ನು ಒಪ್ಪಿಕೊಳ್ಳುವುದಿಲ್ಲ. ಅದೇ ರೀತಿ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್‍ಗೆ ಕಪ್ಪ ಕೊಟ್ಟಿರುವುದನ್ನು ನಿರಾಕರಿಸುತ್ತಿದ್ದಾರೆ. ತಮ್ಮ ಬಗ್ಗೆ ಅಪಪ್ರಚಾರ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಯಡಿಯೂರಪ್ಪ ಬೆದರಿಸುತ್ತಿದ್ದಾರೆ. ಬೇಕಿದ್ದರೆ ಅವರು ಮಾನನಷ್ಟ ಮೊಕದ್ದಮೆ ಹೂಡಲಿ. ಬಳಿಕ ಕಾನೂನಿನ ಸುಳಿಗೆ  ಅವರೇ ಸಿಲುಕಿ ಹಾಕಿಕೊಳ್ಳುತ್ತಾರೆ. ಇಷ್ಟಾದರೂ ಡೈರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನಿಜ ಏನು ಎನ್ನುವುದು ಯಡಿಯೂರಪ್ಪ ಅವರಿಗೂ ಗೊತ್ತಿದೆ ಎಂದರು.
ಬಿಜೆಪಿಯವರು ಡೈರಿ ಕುರಿತು ಕಾಂಗ್ರೆಸ್ 10 ಪ್ರಶ್ನೆ ಕೇಳುವ ಬದಲು ಲೋಕಪಾಲ್ ಗೆ ದೂರು ನೀಡಲಿ. ಅವರಿಗೆ ಉತ್ತರ ಸಿಗುತ್ತದೆ ಎಂದು ಮಾಜಿ ತಿರುಗೇಟು ನೀಡಿದರು.
SCROLL FOR NEXT