ಮೈಸೂರು: ನಮ್ಮ ಕುಟುಂಬದ ಅಂಬಿ, ದರ್ಶನ್, ಯಶ್ ಹೆಸರನ್ನು ಬಳಸದೇ ಕೇವಲ ಎರಡು ದಿನಗಳ ಕಾಲ ಪ್ರಚಾರ ಮಾಡಿ ಎಂದು ಸುಮಲತಾ ಹಾಕಿರುವ ಸವಾಲಿಗೆ ಸಿಎಂ ತಿರುಗೇಟು ಕೊಟ್ಟಿದ್ದಾರೆ.
ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೆ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಹೆಸರನ್ನು ಬಳಸದೆ ಮಂಡ್ಯದಲ್ಲಿ ಮತ ಕೇಳುತ್ತೇನೆ. ಅವರ ಹೆಸರು ಹೇಳುವ ಅವಶ್ಯಕತೆ ನನಗಿಲ್ಲ, ನಾನು ಮಂಡ್ಯಗಾಗಿ ದುಡಿಮೆ ಮಾಡಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುತ್ತೇನೆ. ಯಾರು ಏನೇ ಹೇಳಿದರೂ, ಮಂಡ್ಯದಲ್ಲಿ ನಿಖಿಲ್ ಗೆಲವು ಖಚಿತ. ಸುಮಲತಾಗೆ ಅಂಬರೀಶ್ ಹೆಸರೊಂದೇ ಬಂಡವಾಳ ಎಂದು ತಿರುಗೇಟು ನೀಡಿದರು.
ಮಂಡ್ಯ ಜಿಲ್ಲೆಯಲ್ಲಿ ಈ ಹಿಂದೆ ನೂರಾರು ರೈತರು ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡು ಅವರ ಕುಟುಂಬ ಬೀದಿಗೆ ಬಂದಾಗ ಸುಮಲತಾ ಅವರು ಎಲ್ಲಿ ಸಹಾಯ ಮಾಡಲು ಹೋಗಿದ್ದರು?, ಅಂಬರೀಷ್ ಅವರು ಬದುಕಿದ್ದಾಗ ಅವರು ನನ್ನನ್ನು ಯಾವ ರೀತಿ ನೋಡಿಕೊಂಡಿದ್ದಾರೆ. ಅವರು ಯಾವ ರೀತಿ ನೋಡಿಕೊಂಡಿದ್ದಾರೆ ಎಂದು ನನಗೆ ಗೊತ್ತಿದೆ. ಅವರ ಹೆಸರು ಹೇಳಿಕೊಂಡು, ದುರುಪಯೋಗ ಮಾಡಿಕೊಂಡು ನಾನು ಅಧಿಕಾರಕ್ಕೆ ಬಂದಿಲ್ಲ, ಅವರ ಅಂತ್ಯಕ್ರಿಯೆ ವೇಳೆ ಅವರಿಗೆ ಸಲ್ಲಿಸಬೇಕಾದ ಗೌರವವನ್ನು ನಾನು ಮಾಡಿಯಾಗಿದೆ. ಈಗ ಅವರ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರ ಹೆಸರನ್ನು ಎರಡು ದಿನ ಅಲ್ಲ, ಎರಡು ಗಂಟೆ, ಎರಡು ನಿಮಿಷವೂ ಬಳಸುವುದಿಲ್ಲ ಎಂದರು.
ಬಿಜೆಪಿ ಸೋಲಿಸಿ ಮತ್ತು ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿಬೇಕಾದರೆ ಎರಡು ಪಕ್ಷಗಳ ನಾಯಕರು ಮೈತ್ರಿ ಧರ್ಮ ಪಾಲನೆ ಮಾಡಬೇಕು ಹೇಳಿದರು.ತಮ್ಮ ಪಕ್ಷವು ಮೈತ್ರಿ ಸಿದ್ಧಾಂತವನ್ನು ಪಾಲಿಸತ್ತಿದ್ದು, ಅದೇ ರೀತಿ ಕಾಂಗ್ರೆಸ್ ಕೂಡ ನಡೆದುಕೊಳ್ಳಬೇಕು ಎಂದು ಬಯಸುವುದಾಗಿ ಅವರು ಹೇಳಿದರು.
ಮಂಡ್ಯ, ಹಾಸನ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಕೆಲವು ಮೈತ್ರಿ ಸಿದ್ಧಾಂತದ ಸಮಸ್ಯೆಯಿದೆ. ಬಿಜೆಪಿಯನ್ನು ಸೋಲಿಸಲು ಬೆಂಗಳೂರು ಉತ್ತರ ಕ್ಷೇತ್ರ ಸೇರಿದಂತೆ 8 ಕ್ಷೇತ್ರಗಳಲ್ಲಿ ಬೆಂಬಲ ನೀಡಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics