ಕರ್ನಾಟಕ

ಮೂರಲ್ಲ, ಸುಮಲತಾ ಹೆಸರಿನ ನೂರು ಅಭ್ಯರ್ಥಿಗಳು ಬೇಕಾದರೆ ನಿಲ್ಲಲಿ: ಸುಮಲತಾ ಅಂಬರೀಷ್

Sumana Upadhyaya
ಮಂಡ್ಯ: ಸುಮಲತಾ ಹೆಸರಿನಲ್ಲಿ ಮೂರಲ್ಲ, ನೂರು ಜನ ಅಭ್ಯರ್ಥಿಗಳು ಸಿಕ್ಕಿದರೂ ಜಿಲ್ಲೆಯ ಬುದ್ಧಿವಂತ ಮತದಾರರು ತಮಗೆ ಇಚ್ಛೆಯುಳ್ಳವರಿಗೆ ಮತ ಹಾಕುತ್ತಾರೆ. ಕೆಲವರ ಕುತಂತ್ರ ರಾಜಕಾರಣಕ್ಕೆ ಜನರು ಏಪ್ರಿಲ್ 18ರಂದು ಉತ್ತರ ಕೊಡುತ್ತಾರೆ ಎಂದು ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಅವರು ನಿನ್ನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಮತದಾರರಲ್ಲಿ ಗೊಂದಲ ಸೃಷ್ಟಿಸಿ ನನಗೆ ಮತ ಕಡಿಮೆ ಬೀಳುವಂತೆ ಮಾಡಲು ನನ್ನದೇ ಹೆಸರಿನ ಮೂವರು ಮಹಿಳೆಯರನ್ನು ಹುಡುಕಿಕೊಂಡು ಬಂದು ಅವರ ಕೈಯಿಂದ ನಾಮಪತ್ರ ಹಾಕಿಸಿದ್ದಾರೆ. ಆದರೆ ಜಿಲ್ಲೆಯ ಜನರು ಮುಠ್ಠಾಳರಲ್ಲ, ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕುತಂತ್ರ ರಾಜಕಾರಣ ಮಾಡಿ ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ. ಬೇಕಿದ್ದರೆ ಅವರ ಅಭ್ಯರ್ಥಿಯ ಹೆಸರನ್ನು ಕೂಡ ಸುಮಲತಾ ಎಂದೇ ಬದಲಾಯಿಸಿಕೊಳ್ಳಲಿ ಎಂದು ಸುಮಲತಾ ಸವಾಲು ಹಾಕಿದರು.
ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ರಾಜಕೀಯ ನಾಯಕರು ಏನೇನು ಮಾಡುತ್ತಿದ್ದರು ಎಂದು ಈ ರಾಜ್ಯದ ಜನತೆ ನೋಡಿದ್ದಾರೆ. ಸಿಎಂ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ಹಾವು ಮುಂಗುಸಿಗಳಂತೆ ಕಿತ್ತಾಡುತ್ತಿದ್ದರು. ಈಗ ಪರಿಸ್ಥಿತಿಯ ಲಾಭ ಪಡೆಯಲು ನಾವು ನಿಜವಾದ ಜೋಡೆತ್ತುಗಳು ಅನ್ನುತ್ತಿದ್ದಾರೆ. ನನ್ನ ಬೆಂಬಲಕ್ಕೆ ನಿಂತಿರುವ ಮಕ್ಕಳ ಸಮಾನರಾದ ಯಶ್, ದರ್ಶನ್ ಅವರಿಗೆ ತಾವು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂಬ ಅರಿವಿದೆ. ಯಾರು ಎಷ್ಟೇ ಬೆದರಿಕೆ ಹಾಕಿದರೂ ಕೂಡ ಅವರು ನನ್ನೊಂದಿಗಿರುತ್ತಾರೆ. ನಾನು ಹೋದ ಕಡೆ ಪ್ರಚಾರ ಸಭೆಗಳಲ್ಲಿ ಜನರನ್ನು ದುಡ್ಡು ಕೊಟ್ಟು ಕರೆಸಿಕೊಂಡಿಲ್ಲ, ಜನರೇ ಪ್ರೀತಿಯಿಂದ, ಅಂಬರೀಷ್ ಮೇಲಿನ ಅಭಿಮಾನದಿಂದ ಬರುತ್ತಾರೆ. ನನ್ನ ಹೋರಾಟಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
SCROLL FOR NEXT