ಕರ್ನಾಟಕ

ಬೆಂಗಳೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸಮಾವೇಶ; ಸಂಚಾರ ಮಾರ್ಗ ಬದಲಾವಣೆ

Sumana Upadhyaya
ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯನ್ನು ಮೈತ್ರಿಯಾಗಿ ಎದುರಿಸುತ್ತಿರುವ ಕಾಂಗ್ರೆಸ್​- ಜೆಡಿಎಸ್​ ಪಕ್ಷಗಳಿಂದ ಭಾನುವಾರ ಬೆಂಗಳೂರಿನ ನೆಲಮಂಗಲದಲ್ಲಿ  ಮೈತ್ರಿ ಪಕ್ಷದ ಬೃಹತ್ ಸಮಾವೇಶ ಏರ್ಪಡಿಸಿವೆ. ಸಮಾವೇಶದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಜೆಡಿಎಸ್​ ಮತ್ತು ಕಾಂಗ್ರೆಸ್​ ನಾಯಕರು ಪಾಲ್ಗೊಳ್ಳಲಿದ್ದಾರೆ.
ಇಂದು ಸಂಜೆ 4 ಗಂಟೆಗೆ ನೆಲಮಂಗಲ ಸಮೀಪದ ಮಾದಾವರದ ಬಿಐಇಸಿ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಹೆಲಿಪ್ಯಾಡ್ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಸಿಎಂ ಎಚ್​.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್​, ಎಚ್‌.ಡಿ. ರೇವಣ್ಣ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ,  ಶಾಸಕ ಎಸ್‌.ಟಿ. ಸೋಮಶೇಖರ್ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ.
ಸಮಾವೇಶಕ್ಕೆ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಇಂದು ಬೆಳಗ್ಗೆಯಿಂದಲೇ ಪೊಲೀಸರು, ಭದ್ರತಾ ತಂಡ ಸ್ಥಳಕ್ಕೆ ಆಗಮಿಸಿ ಭದ್ರತೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮೈತ್ರಿ ಪಕ್ಷಗಳ ಬೃಹತ್​ ಸಮಾವೇಶದಲ್ಲಿ ಸುಮಾರು 5 ಲಕ್ಷ ಕಾಂಗ್ರೆಸ್- ಜೆಡಿಎಸ್​ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಬೆಂಗಳೂರು ಗ್ರಾಮಾಂತರ ಎಸ್.ಪಿ. ರಾಮ್ ನಿವಾಸ್ ಸಪೆಟ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಭದ್ರತೆಗೆ ಸುಮಾರು 2,000 ಪೊಲೀಸರ ನಿಯೋಜನೆ ಮಾಡಲಾಗಿದೆ. 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಸಮಾವೇಶದ ಸುತ್ತ ಹಾಕಿರುವ ಫ್ಲೆಕ್ಸ್ ಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರ ಇಲ್ಲದಿರುವುದು ಕುತೂಹಲಕ್ಕೆ, ಚರ್ಚೆಗೆ ಎಡೆಮಾಡಿಕೊಟ್ಟಿತು. ಉದ್ದೇಶಪೂರ್ವಕವಾಗಿಯೇ ಅಥವಾ ಆಕಸ್ಮಿಕವಾಗಿ ಹೀಗೆ ಆಗಿದೆಯೇ ಎಂದು ಚರ್ಚೆ ಮಾಡುತ್ತಿದ್ದಾರೆ.
ಸಮಾವೇಶಕ್ಕೆ ಲಕ್ಷಾಂತರ ಕಾರ್ಯಕರ್ತರು ಸೇರುವ ಸಾಧ್ಯತೆ ಇರುವುದರಿಂದ ಸಂಚಾರ ದಟ್ಟಣೆಯಾಗಬಹುದು ಎಂದು ಭಾರೀ ವಾಹನಗಳ ಮಾರ್ಗ ಬದಲಾವಣೆಯಾಗಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವೆರೆಗೂ ಭಾರೀ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ.
ತುಮಕೂರು-ಬೆಂಗಳೂರು-ಹೊಸೂರು ಮಾರ್ಗದಲ್ಲಿ ಸಂಚರಿಸುವವರು ತುಮಕೂರು - ಡಾಬಸ್‌ಪೇಟೆ - ಮಾಗಡಿ - ಮಾಗಡಿರೋಡ್ - ಬೆಂಗಳೂರು, ತುಮಕೂರು - ಡಾಬಸ್‌ಪೇಟೆ - ಮಾಗಡಿ - ಮಾಗಡಿರೋಡ್ - ನೈಸ್ ರೋಡ್ - ಹೊಸೂರು ಮಾರ್ಗವಾಗಿ ತೆರಳಬೇಕು.
ಹೊಸೂರು - ಎಲೆಕ್ಟ್ರಾನಿಕ್ ಸಿಟಿ ನೈಸ್ ರೋಡ್ - ಮಾಗಡಿ ರೋಡ್ ನೈಸ್ ರೋಡ್ - ಮಾಗಡಿ - ಡಾಬಸ್‌ಪೇಟೆ - ತುಮಕೂರು ಮಾರ್ಗವಾಗಿ ಹೋಗಬೇಕು.
SCROLL FOR NEXT