ಕರ್ನಾಟಕ

ಖರ್ಗೆಯಿಂದ ಸಿಎಂ ಹುದ್ದೆ ತ್ಯಾಗ, ಅವರು ಮುಖ್ಯಮಂತ್ರಿಯಾಗಲಿಲ್ಲ ಎಂಬ ನೋವು ನಮಗೂ ಇದೆ: ಎಚ್ ಡಿ ಕೆ

Shilpa D
ಕಲಬುರಗಿ: ಕೋಲಿ ಸಮಾಜದ ನಾಯಕರು ಎಂದು ಹೇಳಿಕೊಳ್ಳುತ್ತಿರುವವರು ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ದ ತೊಡೆತಟ್ಟಿ ಮೀಸೆ ತಿರುವುತ್ತಿರುವವರು ಕೋಲಿ ಸಮಾಜಕ್ಕೆ ಖರ್ಗೆ ಅವರ ಕೊಡುಗೆಯನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಪರ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಖರ್ಗೆ ಅವರ ರಾಜಕೀಯ ಅನುಭವ ಜನಪರ ಹೋರಾಟ ಹಾಗೂ ಹಿನ್ನೆಲೆ ನೋಡಿದರೆ ಅವರು ಯಾವೊತ್ತೋ ಸಿಎಂ ಆಗಬೇಕಿತ್ತು. ಆದರೆ ಕೆಲ ರಾಜಕೀಯ ನಿರ್ಧಾರಗಳಿಂದ ಅವರು ಸಿಎಂ ಆಗಲಿಲ್ಲ ಎನ್ನುವ ನೋವು ನಮಗೂ ಇದೆ ಎಂದು ಹೇಳಿದರು. 
ಬಿಜೆಪಿ ನಾಯಕರ ಟೀಕೆಗಳಿಗೆ ಈ ವೇದಿಕೆಯಿಂದ ಉತ್ತರ ಕೊಡುವುದಿಲ್ಲ. ಅವರಿಗೆ ಉತ್ತರ ಕೊಡುತ್ತಿದ್ದರೆ ಜನರ ಸಮಸ್ಯೆ ಗಳಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು. 
ಹೈಕ ಭಾಗದ ಜನರಿಗೆ ಅನುಕೂಲವಾಗಲು ಆರ್ಟಿಕಲ್ 371 (J) ಜಾರಿಗೆ ತಂದ ಖರ್ಗೆ ಅವರ ಪರಿಶ್ರಮವನ್ನು ಈ ಭಾಗದ ನೀವು ಮರೆಯಬಾರದು. ಇಂತಹ ನಾಯಕನ ಬಗ್ಗೆ ಹಗುರ ಮಾತುಗಳಿಂದ ಮನಸು ನೋಯಿಸಬೇಡಿ ಎಂದು ಕೈಮುಗಿದು ಕಳಕಳಿಯಿಂದ ವಿನಂತಿಸುತ್ತೇನೆ ಎಂದರು. 
ಪ್ರಿಯಾಂಕ್ ಖರ್ಗೆಯನ್ನು ಈ ಭಾಗದ ಕ್ರಿಯಾಶೀಲ ಹಾಗೂ ಬುದ್ದಿವಂತ ನಾಯಕ ಅವರನ್ನು ಈ ಭಾಗದ ನೀವು ನಾಯಕರನ್ನಾಗಿ‌ ರೂಪಿಸಿ ಅವರನ್ನು ಬೆಳೆಸಿದ್ದೀರಿ ಆದರೆ ಅವರನ್ನು ಟೀಕಿಸುವವರು, ಮಲ್ಲಿಕಾರ್ಜುನ ಖರ್ಗೆ ತಮ್ಮನ್ನು ತುಳಿದು ಪ್ರಿಯಾಂಕ್ ಅವರನ್ನು ಬೆಳೆಸಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು.
SCROLL FOR NEXT