ಕರ್ನಾಟಕ

ಮೋದಿ ಮತ್ತೆ ಪ್ರಧಾನಿಯಾಗಲ್ಲ, 'ರಾಗಾ ಫಾರ್ ಪಿಎಂ' ಮಿಷನ್ ಗೆ ದೇವೇಗೌಡರ ಮುಂದಾಳತ್ವ: ಕುಮಾರಸ್ವಾಮಿ

Shilpa D
ಬೆಂಗಳೂರು/ ಕಲಬುರಗಿ:  ಮೇ 23 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತಿತರರು  ಒಟ್ಟಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿಸಲು ರಾಗಾ ಫಾರ್ ಪಿಎಂ ಮಿಷನ್ ಆರಂಭಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದೇಶವನ್ನು ಮುನ್ನಡೆಸಲು ರಾಹುಲ್ ಗಾಂಧಿ ಸಮರ್ಥರಾಗಿದ್ದು ಅವರನ್ನು ಬೆಂಬಲಿಸಲು ಪ್ರಾದೇಶಿಕ ಪಕ್ಷಗಳೆಲ್ಲವೂ ಒಂದಾಗಿವೆ. ಫಲಿತಾಂಶ ಪ್ರಕಟವಾದ ನಂತರ ದೇವೇಗೌಡರು ಎಲ್ಲಾ ವಿರೋಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ರಾಹುಲ್ ಪ್ರಧಾನಿಯಾಗಲು ಬೆಂಬಲಿಸುವಂತೆ ಮನವೊಲಿಸಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಿಎಂ ಆಗಲು ಜೆಡಿಎಸ್ ಸಂಪೂರ್ಣ ಬೆಂಬಲವಿದೆ, ಮೋದಿ ನೇತೃತ್ವದ ಎನ್ ಡಿಎ ಮಿತ್ರ ಕೂಟ ಸದ್ಯ ಇರುವ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ  ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ಅವರ ಹತಾಶೆಯನ್ನು ತೋರಿಸುತ್ತಿವೆ. ಜನರಿಗೆ ಅವರ ಬಗ್ಗೆ ಸಂಶಯ ಮೂಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎಲ್ಲಾ ಪ್ರಾದೇಶಿಕ ಪಕ್ಷಗಳು  ಒಟ್ಟಿಗೆ ಸೇರಿ ಚುನಾವಣಾ  ಪೂರ್ವ ಮೈತ್ರಿ ಮಾಡಿಕೊಳ್ಳಬೇಕಾದ ಅವಶ್ಯಕತೆಯಿತ್ತು, ಹೀಗಾಗಿ ದೇವೇಗೌಡರು ಆ ಕೆಲಸವನ್ನು ಮಾಡಿದ್ದಾರೆ, ಬಿಜೆಪಿ ಎಷ್ಟು ಸೀಟು ಗೆಲ್ಲುತ್ತದೆ ಹಾಗೂ ಕಾಂಗ್ರೆಸ್ ಮೈತ್ರಿ ಕೂಟ ಎಷ್ಟು ಸೀಟು ಪಡೆಯುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಪಕ್ಷಗಳು 16ರಿಂದ 18 ಸೀಟು ಗೆಲ್ಲಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಿಎಂ, ಒಂದು ವೇಳೆ ನಾವು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಿಗೆ ಪ್ರಚಾರ ಮಾಡಿದ್ದರೇ ರಾಜ್ಯದ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿದ್ದೇವು ಎಂದು ಹೇಳಿದ್ದಾರೆ.
SCROLL FOR NEXT