ಕರ್ನಾಟಕ

ಲೋಕಸಭೆ ಚುನಾವಣೆ: ಮಕಾಡೆ ಮಲಗಿದ ಕಾಂಗ್ರೆಸ್ -ಜೆಡಿಎಸ್ ಘಟಾನುಘಟಿ ನಾಯಕರು!

Shilpa D
ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಘಟಾನುಘಟಿ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿ ಮಕಾಡೆ ಮಲಗಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಂಸದ ಜಿ ಎಸ್ ಬಸವರಾಜು ವಿರುದ್ದ ಸೋಲನುಭವಿಸಿದ್ದಾರೆ, ಆರಂಭಿಕ ಎಣಿಕೆ ಪ್ರಕ್ರಿಯೆಯಲ್ಲಿ ಮುನ್ನಡೆ ಸಾಧಿಸಿದ್ದ ದೇವೇಗೌಡರು ನಂತರ ನಿರಂತರ ಹಿನ್ನಡೆಗೆ ಬಂದು ಸೋಲನುಭವಿಸಿದ್ದಾರೆ.
ಚಿಕ್ಕಬಳ್ಳಾಪುರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ  ಒಂದು ಬಾರಿಯೂ ಮುನ್ನಡೆ ಸಾಧಿಸದೇ ಎದುರಾಳಿ ಬಿಜೆಪಿಯ ಬಿ ಎನ್ ಬಚ್ಚೇಗೌಡ ವಿರುದ್ಧ ಪರಾಭವಗೊಂಡಿದ್ದಾರೆ, ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ 1,10,000 ಸಾವಿರ ಮತಗಳ ಅಂತರದಿಂದ, ಸತತವಾಗಿ 7ನೇ ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪಗೆ ಸೋಲುಣಿಸಿದ್ದಾರೆ.
ಇನ್ನೂ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯ ಡಾಕ್ಟರ್ ಉಮೇಶ್ ಜಾಧವ್ ಎದುರು ಸೋಲಿಗೆ ಶರಣಾಗಿದ್ದಾರೆ. ಇನ್ನೂ ಶಿವಮೊಗ್ಗ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. 
ಇನ್ನೂ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಕೆ ಹರಿಪ್ರಸಾದ್ ಮತ್ತು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವ ಕೃಷ್ಣ ಭೈರೇಗೌಡ ಹೀನಾಯವಾಗಿ ಸೋಲನುಭವಿಸಿದ್ದಾರೆ. 
ಇನ್ನೂ ಮೈಸೂರು-ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಕೂಡ ಬಿಜೆಪಿಯ ಪ್ರತಾಪ್ ಸಿಂಹ ಮುಂದೆ ಮಂಡಿಯೂರಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತವರಲ್ಲೇ ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ.
SCROLL FOR NEXT