ಭಾಷೆ, ಗಡಿ ವಿಷಯದಲ್ಲಿ ಬೆಳಗಾವಿ ಸದಾ ಸುದ್ದಿಯಲ್ಲಿರುತ್ತದೆ. ಮಹಾರಾಷ್ಟ್ರದ ಗಡಿಯಲ್ಲಿರುವುದರಿಂದ ಸಹಜವಾಗಿಯೇ ಮರಾಠಿ ಪ್ರಭಾವ ಹೆಚ್ಚಾಗಿದೆ. ಸದ್ಯ ಈ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎನಿಸಿದೆ. ಇದನ್ನು ಭೇದಿಸಲು ಕಾಂಗ್ರೆಸ್ ಇನ್ನಿಲ್ಲದ ಯತ್ನ ನಡೆಸುತ್ತಿದೆ. ಹಾಲಿ ಸಂಸದ ಸುರೇಶ್ ಅಂಗಡಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ನಿಂದ ಲಕ್ಷ್ಮಿ ಹೆಬ್ಬಾಳಕರ ಪ್ರಬಲ ಸ್ಪರ್ಧೆ ಒಡ್ಡಲು ಅಣಿಯಾಗಿದ್ದಾರೆ. ಜೆಡಿಎಸ್ನಿಂದ ನಾಸೀರ ಬಾಗವಾನ್ ಕಣದಲ್ಲಿದ್ದಾರೆ.
ಗೆಲುವಿನ ಬಗ್ಗೆ ವಿಶ್ವಾಸವಿದೆಯಾ?
ಈ ಚುನಾವಣೆಯಲ್ಲಿ ಗೆಲುವು ನನ್ನದೇ. ಅದರಲ್ಲಿ ಯಾವುದೇ ಅನುಮಾನವೇ ಇಲ್ಲ. ಹಲವು ವರ್ಷಗಳಿಂದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದೇನೆ. ಪಕ್ಷವನ್ನು ಸಂಘಟಿಸುವುದರೊಂದಿಗೆ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪರವಾಗಿ ಪ್ರಚಾರ ಮಾಡುವ ಮೂಲಕ ಕಾರ್ಯಕರ್ತರದಲ್ಲಿ ಹುಮ್ಮಸ್ಸು ತುಂಬಿದ್ದಾರೆ. ಕ್ಷೇತ್ರದ ಎಲ್ಲೆಡೆ ಮತದಾರರಿಂದ ನನಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಮೋದಿ ಆಲೆ ಬಗ್ಗೆ ಆತಂಕ ಇದೆಯಾ?
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಇಲ್ಲವೇ ಇಲ್ಲ. ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ. ಕಾಂಗ್ರೆಸ್ಗೆ ಪೂರಕ ವಾತಾವರಣವಿದೆ. ಮೋದಿ ಅಲೆ ಎಂಬುದು ಬಿಜೆಪಿಯವರ ಭ್ರಮೆ. ಮೋದಿ ಆಟ ಇಲ್ಲಿ ನಡೆಯುವುದೇ ಇಲ್ಲ ಎಂಬುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು. ಚುನಾವಣೆ ಬಂದಾಗಲೆಲ್ಲ ರಾಷ್ಟ್ರ ನಾಯಕರ ಹೆಸರು ಹೇಳಿ ಬಿಜೆಪಿಯವರು ಚುನಾವಣೆ ಎದುರಿಸುತ್ತಾರೆ.
ಮತದಾರರಿಗೆ ಯಾವ ಭರವಸೆ ನೀಡುತ್ತಿದ್ದೀರಿ?
ಬೆಳಗಾವಿ ಮಾದರಿ ಕ್ಷೇತ್ರವನ್ನಾಗಿಸುವುದು, ನಿರುದ್ಯೋಗ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ, ಸವದತ್ತಿ ಯಲ್ಲಮ್ಮ ದೇವಸ್ಥಾನವನ್ನು ಪಂಢರಾಪುರ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದು, ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳಿಗೆ ಉತ್ತೇಜನ. ಬೈಲಹೊಂಗಲದ ವೀರರಾಣಿ ಚನ್ನಮ್ಮನ ಸಮಾಧಿ ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡುವುದು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮ ಹೆಸರು, ರೇಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡಲಾಗುವುದು.
ನಿಮ್ಮ ಎದುರಾಳಿ ಯಾರು?
ಬಿಜೆಪಿಯೇ ನನ್ನ ನೇರ ಎದುರಾಳಿ. ಕಳೆದ 10 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿಜೆಪಿ ಸಂಸದರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರ ಸಾಧನೆ ಶೂನ್ಯವಾಗಿದೆ. ಇದು ಕ್ಷೇತ್ರದ ಜನರಿಗೂ ಗೊತ್ತಿದೆ. ಕಾಂಗ್ರೆಸ್ ಬಗ್ಗೆ ಕ್ಷೇತ್ರದ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಲೋಕಸಭೆಗೆ ಆಯ್ಕೆಯಾದಲ್ಲಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಏಕೈಕ ಗುರಿ. ಮಹಿಳೆಯರ ಏಳ್ಗೆಯೇ ನನ್ನ ಹೆಬ್ಬಯಕೆ.
- ಲಕ್ಷ್ಮಿ ಹೆಬ್ಬಾಳಕರ
ಈ ಚುನಾವಣೆಯಲ್ಲಿ ಯಾವುದು ಪ್ರಮುಖ ವಿಷಯ?
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದ ವೈಫಲ್ಯ, ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯೇ ಪ್ರಮುಖ ವಿಷಯ. ಭಯೋತ್ಪಾದನೆ ವಿಷಯವನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ. ಜನರು ಈ ಚುನಾವಣೆಯಲ್ಲಿ ಕಠಿಣ ತೀರ್ಪು ನೀಡಲಿದ್ದಾರೆ. ಭಯೋತ್ಪಾದನೆ ಜೊತೆಗೆ ನಿರುದ್ಯೋಗ ಮತ್ತು ಆರ್ಥಿಕ ಕುಸಿತವೂ ಮುಖ್ಯ ವಿಷಯವಾಗಲಿದೆ.
ನಿಮಗೇ ಏಕೆ ಮತ ಹಾಕಬೇಕು?
ಭಾರತೀಯ ಜನತಾ ಪಾರ್ಟಿ ದೇಶದಲ್ಲೇ ದೊಡ್ಡ ಪ್ರಜಾಪ್ರಭುತ್ವ ಪಕ್ಷ. ಇಲ್ಲಿ ವ್ಯಕ್ತಿ ಆಧಾರಿತವಲ್ಲ. ಪಕ್ಷಕ್ಕೆ ತನ್ನದೇ ತತ್ತ್ವ, ಸಿದ್ದಾಂತಗಳಿವೆ. ರಾಷ್ಟ್ರ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ. ಪಕ್ಷಕ್ಕೆ ರಾಷ್ಟ್ರೀಯ ಹಿತವೇ ಮುಖ್ಯ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಮತ್ತಿತರ ಪಕ್ಷಗಳಂತೆ ಇಲ್ಲಿ ಯಾರೂ ಸರ್ವಾಧಿಕಾರಿಯಲ್ಲ. ಮಾಲೀಕರೂ ಅಲ್ಲ. ಬಿಜೆಪಿ ಜನರ ಪಕ್ಷ, ಜನರೇ ನಮ್ಮ ಪ್ರಭುಗಳು. ಸದೃಢ, ಸ್ವಾಭಿಮಾನ, ಶ್ರೇಷ್ಠ ಭಾರತ ನಿರ್ಮಾಣ ಮಾಡಲು ಬಿಜೆಪಿಗೆ ಮತ ನೀಡಬೇಕು.
ಕ್ಷೇತ್ರದಲ್ಲಿ ನರೇಂದ್ರ ಮೋದಿ ಅಲೆ ಇದೆಯೇ?
ಖಂಡಿತವಾಗಿಯೂ ನರೇಂದ್ರ ಮೋದಿ ಅಲೆ ಇದೆ. ನಾವು ಮೋದಿ ಅಲೆ ಇದೆ ಎಂದು ಸುಖಾಸುಮ್ಮನೇ ಕುಳಿತುಕೊಂಡಿಲ್ಲ. ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಕಠಿಣ ಪರಿಶ್ರಮ ವಹಿಸಿ, ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಈ ಹಿಂದಿನ ಎನ್ಡಿಎ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ. ಈ ಅಲೆ ಚುನಾವಣೆಯಂದು ಮತಪಟ್ಟಿಗೆಯಲ್ಲಿ ಮತಗಳಾಗಿ ಪರಿವರ್ತನೆಯಾದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಬೆಲೆ ಬರುತ್ತದೆ.
ಹ್ಯಾಟ್ರಿಕ್ ಗೆಲುವಿನ ವಿಶ್ವಾಸವಿದೆಯಾ?
ಈ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ನಿಶ್ಚಿತ. ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ ಕಾಂಗ್ರೆಸ್ನವರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ನನ್ನ ಎರಡು ಅವಧಿಯ ಅಧಿಕಾರದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಮಂತ್ರಿಗಳು ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನರೇಂದ್ರ ಮೋದಿ ಅಲೆ ಜೊತೆಗೆ ನನ್ನ ವೈಯಕ್ತಿಕ ವರ್ಚಸ್ಸೂ ಇದೆ. ಈ ಬಾರಿಯೂ ಮತದಾರ ಪ್ರಭುಗಳು ಕೈಬಿಡುವುದಿಲ್ಲ.
ನನ್ನ ಎರಡು ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಆಗಲಿದ್ದು, ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಟಿತ.
ಟಿಸುರೇಶ್ ಅಂಗಡಿ
ಚುನಾವಣೆಯಲ್ಲಿ ಯಾವುದು ಪ್ರಮುಖ ವಿಷಯ?
ಕೇಂದ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ದುರಾಡಳಿತದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಿರುದ್ಯೋಗ ಸಮಸ್ಯೆಯೂ ಸೃಷ್ಟಿಯಾಗಿದೆ. ಸಾಮಾನ್ಯ ಜನರು ಜೀವನ ನಡೆಸುವುದೇ ದುಸ್ತರವಾಗಿದೆ. ಬಿಜೆಪಿಯ ಭ್ರಷ್ಟಾಚಾರ ವಿಚಾರ ಚುನಾವಣೆಯ ಪ್ರಮುಖ ವಿಷಯ. ಸ್ಥಳೀಯ ಮಟ್ಟದ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಲಾಗುವುದು.
ಮೋದಿ ಅಲೆ ಬಗ್ಗೆ ಆತಂಕ ಇದೆಯೇ?
ನರೇಂದ್ರ ಮೋದಿ ಅಲೆ ಎಂಬುದು ಬಿಜೆಪಿ ನಾಯಕರ ಭ್ರಮೆ. ಮೋದಿ ಅಲೆ ಕರ್ನಾಟಕದಲ್ಲಿ ಇಲ್ಲವೇ ಇಲ್ಲ. ಅದೇನಿದ್ದರೂ ಗುಜರಾತಿಗೆ ಮಾತ್ರ ಸೀಮಿತ. ನರೇಂದ್ರ ಮೋದಿ 12 ವರ್ಷಗಳ ಕಾಲ ಆಡಳಿತ ನಡೆಸಿ ಗುಜರಾತಿನಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೇವಲ 20 ತಿಂಗಳ ಅಧಿಕಾರವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮೋದಿ ಅಲೆ ಬಿಜೆಪಿ ನಾಯಕ ಸೃಷ್ಟಿಯಾಗಿದ್ದು, ಅದರ ಬಗ್ಗೆ ಆತಂಕ ಪಡುವ ಪ್ರಶ್ನೆಯೇ ಇಲ್ಲ.
ನಿಮ್ಮ ಪ್ರತಿಸ್ಪರ್ಧಿ ಯಾರು?
ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ನನ್ನ ಎದುರಾಳಿ. ನಾನು ಚುನಾವಣೆಗೆ ಸ್ಪರ್ಧಿಸಿರುವುದರಿಂದ ಕಾಂಗ್ರೆಸ್ ನಿರ್ನಾಮವಾಗಲಿದ್ದು, ಕಾಂಗ್ರೆಸ್ ನನ್ನ ಪ್ರತಿಸ್ಪರ್ಧಿಯಲ್ಲ. ಅಲ್ಪಸಂಖ್ಯಾತರ ಮತಗಳು ಸಹಜವಾಗಿಯೇ ತಮಗೆ ಬೀಳಲಿದ್ದು, ಕೋಮುವಾದಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ.
ನಿಮಗೆ ಗೆಲ್ಲುವ ವಿಶ್ವಾಸ ಇದೆಯೇ?
ಹೌದು, ಚುನಾವಣೆಯಲ್ಲಿ ಗೆಲ್ಲುವ ಅಚಲ ವಿಶ್ವಾಸ ನನ್ನದು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಗಡಿನಾಡು ಬೆಳಗಾವಿ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದರು. ಮೊಟ್ಟ ಮೊದಲ ಬಾರಿಗೆ ವಿಧಾನಮಂಡಲ ಅಧಿವೇಶನವನ್ನು ಗಡಿ ಭಾಗದಲ್ಲಿ ನಡೆಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಪ್ರತಿವರ್ಷ ಚಳಿಗಾಲದ ಅಧಿವೇಶನ ನಡೆಸಲು ಸುವರ್ಣ ವಿಧಾನಸೌಧ ಕಟ್ಟಡ ನಿರ್ಮಿಸಿದ್ದಾರೆ. ಅಲ್ಲದೇ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಿವೆ.
ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಬೆಳಗಾವಿ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಪಟ್ಟಿಲ್ಲ. ಲೋಕಸಭೆಗೆ ನಾನು ಆಯ್ಕೆಯಾದರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುತ್ತೇನೆ.
- ನಾಸೀರ ಬಾಗವಾನ್