ಸಮಾರಂಭಕ್ಕೆಂದು ಗುಲ್ಬರ್ಗದಲ್ಲಿ ಸಂಬಂಧಿಕರ ಮನೆಯಲ್ಲಿದ್ದ ನನ್ನ ತಾಯಿಗೆ ಸಂದೇಶವೊಂದು ಬಂದಿತ್ತು... "ನಿಮ ಯಜಮಾನ್ರು ಬೆಂಗ್ಳೂರಿನ ಜೈಲ್ನಲ್ಲಿ ಇದ್ದಾರೆ, ಹೋಗಿ ನೋಡಿ". ಅಮ್ಮ ತಕ್ಶಣವೇ ಹೊರಟು ಬಂದರು ಗಾಬರಿಯಾಗಿ. ೧೯೭೫ ರ ಸಮಯ. ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ ಹೊರಡಿಸಿದ್ದ ಎಮರ್ಜೆನ್ಸಿಯನ್ನು ಖಂಡಿಸಿ ಹೋರಾಟ ನಡೆಸಿದ್ದ ಪ್ರತಿಫಲ ಅಪ್ಪನಿಗೆ ಸೆರೆಮನೆ ವಾಸ. ಜೈಲ್ನಲ್ಲಿ ಒಂದು ವಾರದ ಮಟ್ಟಿಗೆ ಅಡ್ವಾನಿ ಮುಂತಾದ ಹಿರಿಯರನ್ನು ಬಹಳ ಸಾಮೀಪ್ಯದಲ್ಲಿ ನೋಡಿದ ದಿನಗಳನ್ನು ಆಗ್ಗಾಗ್ಗೆ ಸ್ಮರಿಸುವುದು ಅಪ್ಪನಿಗೆ ಬಲು ಖುಶಿ.
ಅಪ್ಪ ಸಾಹಿತಿ ಅಲ್ಲ, ದೊಡ್ದ ಕವಿಯಲ್ಲ, ಹತ್ತಾರು ಕಾರ್ಯಕ್ರಮಗಳಿಗೆ ಟೇಪು ಕತ್ತರಿಸಿಲ್ಲ. ತನ್ನ ಹತ್ತೊಂಬತ್ತನೇ ವಯಸ್ಸಿಗೇ ಭಾರತ ದೂರವಾಣಿಯಲ್ಲಿ ಕೆಲಸದ ನಿಮಿತ್ತ ಹುಟ್ಟೂರು ಕೆ. ಆರ್. ನಗರವನ್ನು ಬಿಟ್ಟು ಬೆಂಗ್ಳೂರು ಸೇರಿದವರು. ತನ್ನಲ್ಲಿರುವ ದೇಶದ ಬಗೆಗಿನ ಕಾಳಜಿ, ಯೋಗ, ಎಷ್ಟೆಷ್ಟೋ ದೂರ ನಡೆಯೋ ಅಭ್ಯಾಸ, ಗುಡ್ಡ ಬೆಟ್ಟಗಳನ್ನು ಹತ್ತೋದು, ದಿನಪತ್ರಿಕೆ ಓದೋ ಹುಚ್ಚು.. ಹೀಗೆ ಒಂದಲ್ಲ ಎರಡಲ್ಲ.. ಜೀವನದ ಬಗ್ಗೆ ಅವರಿಗಿರುವ ಒಲವನ್ನೆಲ್ಲ ಯಥಾವತ್ತಾಗಿ ನನಗೆ ವರ್ಗಾಯಿಸಿದ್ದಾರೆ. ಆಗಿನ ಕಾಲಕ್ಕೆ ಮೆಜೆಸ್ಟಿಕ್ ನಿಂದ ಚಾಮರಾಜಪೇಟೆಯಲ್ಲಿರುವ ಮನೆಗೆ ನಡೆದೇ ಹೋಗ್ತಿದ್ರಂತೆ. ಅಪ್ಪನಿಗೆ ರಾಜಕೀಯ ಬಲು ಇಷ್ಟವಾದ ವಿಷಯ. ನನಗೂ ನನ್ನ ಅಕ್ಕನಿಗೂ ರಾಜಕೀಯದ ಆಗು ಹೋಗುಗಳಲ್ಲಿ ಆಸಕ್ತಿ ಹುಟ್ಟುಹಾಕಿದ್ದೇ ಅಪ್ಪ. ಹೊಸ ದೇವಸ್ಥಾನಗಳ ಹುಂಡಿಗೆ ನೂರಾರು ರುಪಾಯಿ ದಕ್ಶಿಣೆ ಹಾಕುವುದಲ್ಲ.. ಹಳೆಯ ದೇವಸ್ಥಾನಗಳನ್ನು ಹುಡುಕಿಕೊಂಡು ಹೋಗಿ, ಅಲ್ಲಿಯ ಹುಂಡಿಗೆ ದಕ್ಶಿಣೆ ಹಾಕುವುದೇ ಅಪ್ಪನ ನಿಯಮ. ನಾನೂ ಹಾಗೆ. ಈ ಕೆತ್ತನೆ ನೋಡು, ಆ ಗೋಪುರ ನೋಡು, ಈ ಮರ, ಆ ಕಲ್ಲು.. ಹೀಗೆ ಅಪ್ಪನ ಜೊತೆ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಕನ್ನಡ ಪರವಾಗಿ, ಅಂದಿನ ದಿನಗಳಲ್ಲಿ ನಡೆದ್ ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಯಾವುದೇ ಬಂದ್, ಜನಪರ ಕಾರ್ಯಕ್ರಮವಿದ್ದರೆ.. ಅಪ್ಪ ಅಲ್ಲಿರ್ತಾರೆ. “ಬಂದ್ ಅಲ್ವ, ಏನ್ ಮಾಡ್ತಿದೀರಿ ಮನೇಲಿ” ಅಂತ ಫೋನ್ ಮಾಡಿದ್ರೆ, ಟೌನ್ ಹಾಲ್ ಮುಂದೆ ಇದೀನಿ ಅಂತಾರೆ. ಒಟ್ಟಿನಲ್ಲಿ ಅಪ್ಪನೇ ನಾನು..ನಾನೇ ಅಪ್ಪ.
ಮೈಸೂರಿನವರಾದ ಅಪ್ಪನಿಗೆ ಈಜು ಕಲಿಸಿದ್ದೇ ಕಾವೇರಿ. ಮದುವೆಯ ಹೊಸದರಲ್ಲಿ ಅಮ್ಮನಿಗೆ ತನ್ನ ಈಜು ತೋರಿಸಬೇಕೆಂದು ಕಾವೇರಿ ಹೊಳೆಯಲ್ಲಿ ಸುಮಾರು ದೂರ ಈಜಿಗಿಳಿದು, ಎಷ್ಟೊತ್ತಾದರೂ ನೀರಿಂದ ಮೇಲೆ ಬರದೆ, ಇನ್ನೊಂದು ದಂಡೆಗೆ ಸೇರಿ ಅಮ್ಮನಲ್ಲಿ ಆತಂಕ ಸೃಷ್ಟಿಸಿದ ಚಿಕ್ಕ ಚಿಕ್ಕ ಸಂತತಿಗಳು ಬಹಳ ಖುಶಿ ಕೊಡತ್ವೆ. ಕೇದಾರೇಶ್ವರ ಮತ್ತು ವೈಷ್ಣೊದೇವಿಯನ್ನು ನೋಡಲು (ಬೆಟ್ಟ ಹತ್ತುವ ಮಾರ್ಗ) ಸುಮಾರು ಹದಿನಾಲ್ಕು ಕಿ.ಮೀ, ಕಾಲ್ನಡಿಗೆಯಲ್ಲೇ ಹೋಗಿದ್ದು ಅಪ್ಪ ಅಮ್ಮನ ದೊಡ್ಡ ಸಾಧನೆಯೇ. ಅಮೇರಿಕ, ಥಾಯಿಲ್ಯಾಂಡನ್ನೂ ಸೇರಿ.. ಕಾಶಿ, ರಾಜಸ್ಥಾನದ ಜಯಪುರ, ದಕ್ಷಿಣ ಭಾರತ ಹೀಗೆ ದೇಶವೆಲ್ಲ ಸುತ್ತಿ ಕೋಶವನ್ನೆಲ್ಲಾ (ದಿನಪತ್ರಿಕೆ) ಓದೋ ನನ್ನಪ್ಪ ನನ್ನ ಜಗತ್ತಿನಲ್ಲಿ ಬೆಳಗೋ ಅದ್ಭುತ ಸೂರ್ಯ.
-ರೂಪ ಶ್ರೀನಿವಾಸನ್