ಬೆಂಗಳೂರಿಗೆ ಬಂದ ಮೇಲೆ ಇಂಜಿನಿಯರಿಂಗ್ ಓದುತ್ತಿದ್ದ ಸಂದರ್ಭದಲ್ಲಿ ನನ್ನ ಸಂಬಂಧಿಕರ ಮನೆಯಿಂದ ಕಾಲೇಜಿಗೆ ದಿನವೂ ಹೋಗಿಬರುವುದು ಕಷ್ಟಸಾಧ್ಯ ಅಂತ ಅರಿವಾದ ಬಳಿಕ, ಕನಕಪುರ ರಸ್ತೆಯಲ್ಲಿ ಕಾಲೇಜಿಗೆ ಹತ್ತಿರ ಒಂದು ಸಣ್ಣ ರೂಮ್ ಬಾಡಿಗೆ ತೆಗೆದುಕೊಂಡು ವಾಸವಿದ್ದೆ. ಅನ್ನ ಮಾಡಿಕೊಂಡು ಹೋಟೆಲ್ಲಿನಿಂದ ತಂದ ಸಾಂಬಾರಿನಲ್ಲಿ ಊಟ ಮಾಡುವುದು, ಅಥವಾ ಪುಳಿಯೋಗರೆ, ಕೆಲವು ದಿನ ಬರೀ ಮೊಸರು.ಹೀಗೆಯೇ ನನ್ನ ದಿನನಿತ್ಯದ ಭೋಜನವಾಗಿರುತ್ತಿತ್ತು. ಊರಿನಲ್ಲಿ ನಾವು ಮುಂಚಿನಿಂದಲೂ ಅನುಕೂಲವಾಗೇನೂ ಇರಲಿಲ್ಲ. ನನಗೆ ಇಂಜಿನಿಯರಿಂಗ್ ಸೀಟು ಸಿಕ್ಕಿದ್ದೇ ಏನೋ ಪವಾಡವೆಂಬಂತೆ ಎಲ್ಲರೂ ಸದ್ಯದ ಎಲ್ಲ ಯೋಜನೆಗಳನ್ನು ಒತ್ತಟ್ಟಿಗಿಟ್ಟು ಒಂದೊಂದು ಪೈಸೆಯನ್ನೂ ಉಳಿಸಿ ತಿಂಗಳು ತಿಂಗಳಿಗೆ ನನಗೆ ಕಳುಹಿಸುತ್ತಿದ್ದರು. ಅಪ್ಪ ಊರಿನಿಂದ ಬರದ ಹೊರತು ಬಾಡಿಗೆಗೆ ಹಣವಿಲ್ಲ. ಬಾಡಿಗೆ ಕೊಡುವ ದಿನ ಬಂತೆಂದರೆ ನನಗೆ ರೂಮು ಬಾಡಿಗೆ ಕೊಟ್ಟ ಅಜ್ಜಿ ಇನ್ನೂ ಕೊಟ್ಟಿಲ್ಲವೆಂಬಂತೆ ಕಣ್ ಕಣ್ ಬಿಡುತ್ತಿದ್ದಳು. ನಾನೂ ಏನೂ ಮಾಡಲಾಗದೇ ಊರಿಂದ ಅಪ್ಪ ಬರುವುದನ್ನೇ ಕಾಯುತ್ತಿದ್ದೆ. ಆ ಅಜ್ಜಿಯ ಉರಿನೋಟವನ್ನು ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋಗುವುದು, ನಂತರ ಅಪ್ಪ ಏಳೆಂಟು ದಿನಗಳ ನಂತರ ಊರಿಂದ ಬಂದು ಸಣ್ಣ ಮೊತ್ತದ ಹಣವನ್ನು ಕೊಡುವುದು. ನಂತರ ಅಜ್ಜಿಗೆ ತಡವಾದದ್ದಕ್ಕೆ ಕಾರಣ ಕೊಟ್ಟು ಬಾಡಿಗೆ ಕೊಡುವುದು...ಇದೇ ವಾಡಿಕೆಯಾಗಿ ಹೋಗಿತ್ತು.
ಮೂರನೇ ವರ್ಷದ ಆರಂಭ ಅನ್ನಿಸುತ್ತೆ. ಆಗ ಕಾಲೇಜಿನ ಫೀಸು ಒಂಭತ್ತು ಸಾವಿರ. ಫೀಸು ಕಟ್ಟಲು ಕೊನೆಯ ದಿನ ಇದು ಅಂತ ತಿಂಗಳ ಮುಂಚೆಯೇ ಅಪ್ಪ ಅಮ್ಮನಿಗೆ ಫೋನು ಮಾಡಿ ಹೇಳಿದ್ದೆ. ಜತೆಗೆ ನನ್ನ ಮನೆ ಬಾಡಿಗೆಯ ದಿನವೂ ಅದರ ಆಸುಪಾಸಿನಲ್ಲಿ ಇದ್ದದ್ದರಿಂದ ಅಪ್ಪ ಎರಡನ್ನೂ ಹೊಂದಿಸಿ ಒಟ್ಟಿಗೆ ತರುತ್ತೇನೆಂದರು. ಸರಿ ಎಂದು ಸುಮ್ಮನಾಗಿದ್ದೆ. ಫೀಸು ಕಟ್ಟುವ ದಿನ ಹತ್ತಿರ ಬಂದಿತ್ತು. ಅಪ್ಪನ ಸುಳಿವಿಲ್ಲ. ಊರಿಗೆ ಫೋನು ಮಾಡಿದರೆ ಅಮ್ಮ ಮಾತನಾಡಿ, ಅಪ್ಪ ಹಣ ಹೊಂದಿಸಲು ಎಲ್ಲೋ ಹೋಗಿದ್ದಾರೆ ಅಂತ ಹೇಳಿದರು. ನನಗೋ ಕೋಪ. ಇಲ್ಲಿ ಬಾಡಿಗೆ ಕೊಟ್ಟಿಲ್ಲ ಅನ್ನುವುದು ಒಂದಾದರೆ, ನನ್ನ ಖರ್ಚಿಗೂ ದುಡ್ಡಿಲ್ಲ. ಫೀಸು ಕಟ್ಟುವುದು ತಡವಾದರೆ ಅದಕ್ಕೆ ದಂಡ ಬೇರೆ. ಆ ದಂಡದ ಹಣದಲ್ಲೇ ನಾ ಒಂದು ತಿಂಗಳು ಸಂಭಾಳಿಸಬಹುದು. ಕೋಪದಲ್ಲಿ ಮತ್ತೆ ಊರಿಗೆ ಫೋನು ಕೂಡ ಮಾಡಲಿಲ್ಲ. ನಾಳೆ ಫೀಸು ಕಟ್ಟಲು ಕೊನೆಯ ದಿನ ಅಂದಾಗ ಅಪ್ಪ ರಾತ್ರಿ ಹನ್ನೊಂದು ಘಂಟೆಯ ಸಮಯದಲ್ಲಿ ಬಸ್ಸಿನಲ್ಲಿ ಬಂದಿಳಿದರು. ನಾನು ಮಾಡಿಕೊಂಡಿದ್ದ ಪುಳಿಯೊಗರೆಯನ್ನೇ ಅವರಿಗೂ ಬಡಿಸಿದೆ. ಅವರೂ ಜಾಸ್ತಿ ಮಾತನಾಡಲಿಲ್ಲ, ನಾನೂ ಅಷ್ಟೆ.
ಬೆಳಿಗ್ಗೆ ಅಪ್ಪ ಇನ್ನೂ ಮಲಗಿದ್ದರು. ನಾನು ಬೇಗನೆ ಎದ್ದು ಕಾಲೇಜಿಗೆ ಹೋಗುವ ತರಾತುರಿಯಲ್ಲಿದ್ದೆ. ಅಪ್ಪ ಎದ್ದು ಬಂದು ಹತ್ತು ಸಾವಿರ ಕೈಗೆ ಕೊಟ್ಟರು. ಅದೆಲ್ಲಿತ್ತೋ ಸಿಟ್ಟು. ಬಾಯಿಗೆ ಬಂದ ಹಾಗೆ ಬೈದುಬಿಟ್ಟೆ. ಫೀಸೇ ಒಂಭತ್ತು ಸಾವಿರ. ಇನ್ನೊಂದು ಸಾವಿರದಲ್ಲಿ ಬಾಡಿಗೆ ಕಟ್ಟಿ ತಿಂಗಳ ಪೂರ್ತಿ ಖರ್ಚು ಹೇಗೆ ನಿಭಾಯಿಸಲಿ. ಆದರೆ ಮಾಡಿ. ಇಲ್ಲಾಂದ್ರೆ ಈ ಇಂಜಿನಿಯರಿಂಗ್ ಬಾಯಿಗೆ ಮಣ್ಣು. ಊರಿಗೆ ವಾಪಸ್ ಬರ್ತೀನಿ. ಅಲ್ಲೇ ವ್ಯವಸಾಯ ಮಾಡ್ಕೊಂಡೋ ಅಥವಾ ಎಮ್ಮೆ ಮೇಯಿಸಿಕೊಂಡೋ ಇದ್ದುಬಿಡ್ತೀನಿ. ಹಾಗೆ ಹೀಗೆ ಅಂತ ಕೋಪದಲ್ಲಿ ಬಾಯಿಗೆ ಬಂದದ್ದನ್ನೆಲ್ಲ ಒಂದೇ ಸಮನೆ ಬೈದು ಕಾಲೇಜಿಗೆ ಹೊರಟೆ. ಸರಿಯಾಗಿ ಮುಖ ಕೊಟ್ಟು ಅಪ್ಪನೊಂದಿಗೆ ಮಾತಾಡಲೇ ಇಲ್ಲ. ನಾ ಕಾಲೇಜಿಗೆ ಹೋದ ನಂತರ ಅಪ್ಪ ಊರಿಗೆ ಹೋಗಿದ್ದರು. ಮುಂಗೋಪಿಯಾದ ಮತ್ತು ಯಾರಿಂದಲೂ ಮಾತು ಕೇಳದ ಅಪ್ಪ ಅವತ್ತು ನಾ ಅಷ್ಟೆಲ್ಲ ಅಂದರೂ ತುಟಿಪಿಟಕ್ಕೆನ್ನದೇ ಹೋಗಿದ್ದರ ಕಾರಣ ನನಗೆ ಅರ್ಥವಾಗಲೇ ಇಲ್ಲ.
ಇದ್ದ ಹತ್ತು ಸಾವಿರದಲ್ಲಿ ಫೀಸು ಮತ್ತು ಬಾಡಿಗೆ ಎರಡನ್ನು ಕಟ್ಟಿ ಮಾಮೂಲಿಯಂತೆ ಗೆಳೆಯನೊಬ್ಬನಿಂದ ಕೊಂಚ ಹಣ ಸಾಲ ಪಡೆದು ಆ ತಿಂಗಳು ಹೇಗೋ ಕಾಲ ತಳ್ಳಿದೆ. ನಾ ಇಂಜಿನಿಯರಿಂಗ್ ಮುಗಿಸಿ ಕೆಲಸ ಸಿಗುವವರೆಗೆ ಇದೇ ಪಾಡಾಗಿತ್ತು. ಆದರೆ ನನಗೆ ತಿಳಿಯದ ವಿಷಯವೆಂದರೆ ಅಂದು ಅಪ್ಪ ಬಹಳ ಬೇಸರದಲ್ಲಿದ್ದರು. ನನ್ನ ಫೀಸಿಗೆ ಅಂತ ಕೇಳಿದ್ದಕ್ಕೆ ಸಹಾಯ ಮಾಡುತ್ತೇನೆ ಅಂತ ತಮಿಳುನಾಡಿನ ಕೊಯಮತ್ತೂರಿಗೆ ಅಪ್ಪನನ್ನು ಕರೆಸಿಕೊಂಡಿದ್ದ ನಂಬಿಕಸ್ತ ವ್ಯಕ್ತಿಯೊಬ್ಬ ದಿನ ಪೂರ್ತಿ ಅಪ್ಪನನ್ನು ಅವನ ಆಫೀಸಿನ ಹೊರಗೆ ಬಿಸಿಲಿನಲ್ಲಿ ಕಾಯಿಸಿ ಕಡೆಗೆ ಎರಡು ಸಾವಿರ ಕೊಟ್ಟು ಸಾಗಿಹಾಕಿದ್ದ. ಅವಮಾನವನ್ನು ನುಂಗಿಕೊಂಡು ಬಂದಿದ್ದ ಅಪ್ಪನನ್ನು ಸಮಾಧಾನಪಡಿಸಿದ್ದು ಅಮ್ಮನಷ್ಟೇ. ಮರುದಿನ ಅವಳ ಕತ್ತಿನಲ್ಲಿದ್ದ ಸರ ಗಿರವಿ ಅಂಗಡಿಯಲ್ಲಿತ್ತು. ಒಟ್ಟು ಹೊಂದಿಕೆಯಾದ ಹತ್ತು ಸಾವಿರದೊಂದಿಗೆ ಬೆಂಗಳೂರಿಗೆ ಬಂದಿದ್ದರು, ಅವರು ಪಟ್ಟ ಕಷ್ಟ ಅರ್ಥವಾಗದೇ ಕೋಪದಲ್ಲಿ ಬೈದು ಅವರ ಮನಸ್ಸು ನೋಯಿಸಿಬಿಟ್ಟಿದ್ದೆ. ಮುಂಚೆಯೇ ಅವಮಾನದಲ್ಲಿ ಕುದಿದು ಹೋಗಿದ್ದ ಅಪ್ಪ ನಾ ಬೈದಾಗಲೂ ಸುಮ್ಮನೆ ಕೇಳಿಸಿಕೊಂಡು ಮೌನವಾಗಿದ್ದರು.
ಪ್ರತೀ ಸಲ ನೆನೆಸಿಕೊಂಡಾಗ ನನಗೆ ಆ ದೃಶ್ಯ ಕರುಳು ಹಿಂಡುತ್ತದೆ. ಅದರಲ್ಲೂ ಈಗ ನನಗೆ ಕೆಲಸ ಸಿಕ್ಕಿ ಸಂಬಳ ಬರುತ್ತಿದ್ದರೂ ಚಿಕ್ಕಪುಟ್ಟ ಅವಶ್ಯಕತೆಗಳಿಗೆ ಸ್ವಲ್ಪ ಹಣವನ್ನು ಹೊಂದಿಸುವುದಕ್ಕೆ ಉಸಿರು ಸಿಕ್ಕಿಕೊಂಡಾಗಲೂ, ತನಗೆ ಯಾರೂ ಸಹಾಯ ಮಾಡದಿದ್ದಾಗ ದುಡ್ಡು ಹೊಂದಿಸಲು ಅಪ್ಪ ಅನುಭವಿಸಿದ ಕಷ್ಟ ನೆನಪಿಗೆ ಬರುತ್ತದೆ. ನಮಗೆ ಗೊತ್ತಿಲ್ಲದಂತೆಯೇ ನಮ್ಮ ಹತ್ತಿರದವರೆದುರು ನಾವು ರಾಕ್ಷಸರಂತೆ ವರ್ತಿಸಿಬಿಟ್ಟಿರುತ್ತೇವೆ. ಅವರನ್ನು ಸ್ವಲ್ಪವೂ ಅರ್ಥ ಮಾಡಿಕೊಳ್ಳದ ನಮ್ಮ ವರ್ತನೆ ಕಡೆಗೆ ಕ್ಷಮೆ ಕೇಳಲೂ ಅರ್ಹವಾಗಿರುವುದಿಲ್ಲ. ಅಂದಿನ ನನ್ನ ವರ್ತನೆಗೆ ಕ್ಷಮೆ ಕೇಳಲಾ? ಹೇಗೆ ಕೇಳುವುದು ಅದೂ ಗೊತ್ತಿಲ್ಲ. ಮುಂದೆ ಅವರನ್ನು ಖುಷಿಯಿಂದ ಇರುವಂತೆ ನೋಡಿಕೊಂಡರೆ ಸಾಕು ಅಂತ ನನಗೆ ನಾನೇ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತೇನೆ.
ಕಂಡ ಕಷ್ಟಗಳಿಗೆ ಪೂರ್ಣವಿರಾಮವೆಂಬಂತೆ ನನಗೆ ಓದು ಮುಗಿದು ಒಂದೂವರೆ ವರ್ಷವಾದ ಮೇಲೆ ಕೆಲಸ ಸಿಕ್ಕ ದಿನ ಫೋನು ಮಾಡಿ ವಿಷಯ ತಿಳಿಸಿದಾಗ ಅವರಿಗೆ ಸ್ವರ್ಗಕ್ಕೆ ಮೂರೇ ಗೇಣು. ಮೊದಲ ಸಂಬಳ ಬಂದ ನಂತರ, ಬ್ಯಾಂಕಿನಿಂದ ಡ್ರಾ ಮಾಡಿ ಒಂದು ರೂಪಾಯಿಯನ್ನು ಕೂಡ ಖರ್ಚು ಮಾಡದೇ, ಊರಿಗೆ ಹೋಗಿ ಅವರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ತಂದಿದ್ದ ಸಂಬಳವನ್ನು ಅವರ ಕೈಗಿತ್ತು "ಇದು ನನ್ನ ಮೊದಲ ಸಂಬಳ, ನಿಮಗಷ್ಟೇ ಇದರ ಹಕ್ಕು, ನಿಮಗಿಷ್ಟ ಬಂದಂತೆ ಖರ್ಚು ಮಾಡಿಕೊಳ್ಳಿ" ಎಂದೆ. ಅಪ್ಪ-ಅಮ್ಮನ ಕಣ್ಣಂಚಿನಲ್ಲಿ ತೊಟ್ಟಿಕ್ಕುತ್ತಿದ್ದ ನೀರು ಆಶೀರ್ವಾದ ಮಾಡುತ್ತಿತ್ತು.
-ಸಂತೋಷ್ ಕುಮಾರ್ ಎಲ್ ಎಂ