ಮೊನ್ನೆ ತಾನೇ ನನ್ನ ಹತ್ತನೇ ತರಗತಿ ಗೆಳೆಯರೆಲ್ಲಾ ‘ರೀ ಯೂನಿಯನ್’ ಎಂದು ಸೇರಿದ್ದೆವು. ಎಲ್ಲರ ಮನದಲ್ಲೂ ಹಿಡಿಯಲಾರದಷ್ಟು ಖುಷಿ. ನಮ್ಮ ಶಾಲೆಯ ಆಟದ ಮೈದಾನಕ್ಕೆ ಹೋದಾಗ ಎಲ್ಲರಿಗೂ ಉಂಟಾದ ಒಂದೇ ಅಚ್ಚರಿ ಎಂದರೆ, ಲಗೋರಿ, ಚೂರಿ ಚೆಂಡು ಆಡುತ್ತಾ ಇದ್ದ ನಮಗೆಲ್ಲಾ ಈಗಾಗಲೇ 25 ವರ್ಷಗಳ ಇತಿಹಾಸ ಇದೆ ಎಂದು.
ಇದಾದ ಒಂದೆರಡು ತಿಂಗಳಿಗೆ ನನ್ನ ಮಗ ಶ್ರೀಶಃನ ಒಂದನೇ ತರಗತಿಯ ಅಡ್ಮಿಷನ್‍ನ ಯೋಜನೆ ಸಿದ್ಧವಾಯಿತು. ಮನೆಯಲ್ಲಿ ಸುಮಾರು ವಾಗ್ಯುದ್ಧಗಳು ನಡೆದು, ಕೊನೆಗೆ ನನ್ನ ಇಚ್ಛೆಯ ಶಾಲೆಗೇ ಸೇರಿಸಬೇಕೆಂಬ ಮಹತ್ತರ ನಿರ್ಧಾರವನ್ನು ಕೈಗೊಂಡೆವು. ನಂತರ ಅದಕ್ಕಾಗಿ ತಯಾರಿಗಳು ಶುರುವಾದವು. ದೊಡ್ಡ ಶಾಲೆಯಾದ್ದರಿಂದ, ಪ್ರವೇಶ ಕೊಂಚ ಕ್ಲಿಷ್ಟಕರವಾಗಿತ್ತು, ಸರಿ ಸುಮಾರು ಒಂದೆರಡು ತಿಂಗಳಿಗಾಗುವಷ್ಟು ಸುತ್ತಾಟವಿತ್ತು. ಕೊನೆಗೆ, ನನ್ನ ಮಗನ ದಾಖಲಾತಿಗಾಗಿ ಪ್ರಾಂಶುಪಾಲರಿಂದ ಸಹಿಯಾದ ಒಂದು ಅಪ್ಲಿಕೇಶನ್ ನನ್ನ ಕೈ ಸೇರಿತು. ಬಹುಶಃ ನನ್ನ ಬಿಸಿನೆಸ್ ಲೈಸನ್ಸ್ ಸಿಕ್ಕಿದಾಗ ಕೂಡ ನನಗಿಷ್ಟು ಸಂತಸವಾಗಿರಲಿಲ್ಲ. ಅದರ ಎರಡರಷ್ಟು, ಹತ್ತರಷ್ಟು, ಲೆಕ್ಕವಿಲ್ಲದಷ್ಟು ಖುಷಿಯ ಮಟ್ಟಕ್ಕೇರಿದ್ದೆ.
ಪ್ರತಿಯೊಂದರಲ್ಲೂ ಜಾಗ್ರತೆ ವಹಿಸುವ ಗುಣವಿರುವ ನಾನು, ಅಂದೂ ಕೂಡ, ಅಪ್ಲಿಕೇಶನ್ ಸಿಕ್ಕಿದೊಡನೆಯೇ ಶಾಲೆಯ ಬ್ಯಾಂಕಿನ ಕೌಂಟರ್‍ಗೆ ಹೋಗಿ ಫೀ ಜಮೆ ಮಾಡಿದೆ. ನಂತರವೇ ನನ್ನ ಖುಷಿಗೆ ಗ್ಯಾರಂಟಿ ಸ್ಟಾಂಪ್ ಬಿದ್ದಿದ್ದು.
ಅಲ್ಲಿಂದ ನಂತರದ ಎಲ್ಲಾ ಕ್ಷಣಗಳು, ಸ್ವರ್ಗಕ್ಕೇ ಮೂರೇ ಗೇಣಿನವು. ಕೂಡಲೇ ಅಲ್ಲಿನ ಪುಸ್ತಕಗಳ ವಿಭಾಗಕ್ಕೆ ಹೋಗಿ, ಲಿಸ್ಟ್ ಪ್ರಕಾರ ಪ್ರತಿಯೊಂದನ್ನೂ ಪರಿಶೀಲಿಸಿ, ಎಲ್ಲವನ್ನೂ ಪ್ಯಾಕ್ ಮಾಡಿಸಿ, ನಾನೇ ಹೊತ್ತುಕೊಂಡು ಯೂನಿಫಾರ್ಮ್ ವಿಭಾಗಕ್ಕೆ ಹೊರಟೆವು. ಜೊತೆಯಲ್ಲೇ ಇದ್ದ ನನ್ನ ಶ್ರೀಮತಿ, ರೀ ಅವನಿಗಿಂತ ನೀವೇ ತುಂಬಾ ಉತ್ಸುಕರಿದ್ದೀರಿ, ಬಹುಶಃ ನೀವು ಶಾಲೆಗೆ ಸೇರಿದ ದಿನ ಕೂಡ ನೀವಿಷ್ಟು ಸಂಭ್ರಮಿಸಿರಲಿಕ್ಕಿಲ್ಲ ಎಂದಳು. ಆಗ ಹೇಳಿದೆ, ಹೌದು ಡಿಯರ್, ಶಾಲೆಗೆ ಸೇರುತ್ತಿರುವುದು ‘ನನ್ನ’ ಮಗ, ಖಂಡಿತಾ ಐ ಯಾಮ್ ಎಕ್ಸೈಟೆಡ್. ನಾನು ಶಾಲೆಗೆ ಸೇರಿದ ದಿನ ಸಂಭ್ರಮ ಪಡುವ ಸರದಿ, ಪ್ರಾಯಶಃ ನನ್ನ ತಂದೆಯವರ ಅಧೀನದಲ್ಲಿತ್ತು.
ಅಲ್ಲಿಂದ ಮುಂದೆ ಇಡೀ ವರ್ಷಕ್ಕೆ ಬೇಕಾದಂತಹ ಎಲ್ಲಾ ರೀತಿಯ ಯೂನಿಫಾರ್ಮ್ ಅನ್ನು ತಲಾ ಎರಡೆರಡು ಜೊತೆ ತೆಗೆದುಕೊಂಡು, ಷೂಸ್, ಸಾಕ್ಸ್ ಇತ್ಯಾದಿಗಳ ಶಾಪಿಂಗ್ ಮುಗಿಸಿದೆವು. ಆಗ ಕೊನೆಯಲ್ಲಿ ಉಳಿದ ಒಂದೇ ಒಂದು ವಸ್ತು ಸ್ಕೂಲ್ ಬ್ಯಾಗ್. ನಂಬಿದ್ರೆ ನಂಬಿ, ಆ ಒಂದು ಬ್ಯಾಗಿಗಾಗಿ ಇಡೀ ದಕ್ಷಿಣ ಬೆಂಗಳೂರನ್ನು ಸುತ್ತಿದೆವು. ಕಾರಣವಿಷ್ಟೇ, ಅದರ ಆಯ್ಕೆಯನ್ನು ನನ್ನ ಮಗನಿಗೆ ಬಿಟ್ಟಿದ್ದು. ಏಕೆಂದರೆ, ಮಿಕ್ಕವುಗಳ ವಿಚಾರದಲ್ಲಿ ಇದು ಸಾಧ್ಯವಿರಲಿಲ್ಲ.
ಸಂಭ್ರಮದ ಎರಡನೇ ಆವೃತ್ತಿ ಶುರುವಾಗಿದ್ದು, ಅವನ ಶಾಲೆಯ ಮೊದಲನೇ ದಿನ. ಬಸ್ ರೂಟ್ ಎಲ್ಲವೂ ನಿರ್ಧರಿತವಾಗಿದ್ದರೂ, ನಾನೇ ಸ್ವತಃ ಅವನನ್ನು ಶಾಲೆಯಲ್ಲಿ ಬಿಟ್ಟೆ. ಅವನು ಟಾ ಟಾ ಮಾಡಿ, ಆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು, ಹೊಸ ಬ್ಯಾಗು, ಯೂನಿಫಾರ್ಮ್ ತೊಟ್ಟು ಖುಷಿಯಾಗೆ ತರಗತಿ ಕಡೆಗೆ ಹೋಗುತ್ತಿದ್ದ ಅವನನ್ನು ಕಂಡಾಗ ಉಂಟಾದ ಸಂಭ್ರಮದ ಕ್ಷಣಗಳಿಗೆ ಯಾವ ಅರ್ಥಶಾಸ್ತ್ರಜ್ಞನೂ ಬೆಲೆ ಕಟ್ಟಲಾರ.
ಅಂದು ಶಾಲೆ ಮುಗಿದ ಮೇಲೆ ವಾಪಸ್ ಬರುತ್ತೇವೆಂದು ಅವನಿಗೆ ಹೇಳಿದ್ದರೂ ತಡೆಯಲಾರದೆ, ಅವನ ತರಗತಿಗಳು ಮುಗಿಯುವವರೆಗೂ ನಾನು ಮತ್ತು ನನ್ನ ಶ್ರೀಮತಿ ಶಾಲೆಯ ಆವರಣದಲ್ಲೇ ಸಮಯ ಕಳೆದು, ಅವನು ತರಗತಿಯಿಂದ ಹೊರ ಬಂದ ಕೂಡಲೇ ಅವನನ್ನು ಬರಸೆಳೆದು ಎತ್ತಿ ಮುದ್ದಾಡಿದಾಗ ನನ್ನ ತೃಪ್ತಿ ಉತ್ತುಂಗಕ್ಕೇರಿತ್ತು.
-ಇರಗಂ ಪಿ ವೆಂಕಟೇಶ್