ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಫೈನಲ್ ಪ್ರವೇಶಿಸಿದ ಕ್ರೊವೇಷಿಯಾ ತಂಡಕ್ಕೆ ಸಂಸದರು ನೀಡಿದ ಉಡುಗೋರೆ ಹೇಗಿತ್ತು ಗೊತ್ತಾ?

Srinivasamurthy VN
ಝಗ್ರೆಬ್: ಇದೇ ಮೊದಲ ಬಾರಿಗೆ ಫೀಫಾ ವಿಶ್ವಕಪ್ ನಲ್ಲಿ ಫೈನಲ್ ಹಂತಕ್ಕೇರಿರುವ ಕ್ರೊವೇಷಿಯಾ ತಂಡಕ್ಕೆ ಆ ದೇಶದ ಸಂಸದರು ಅದ್ಭುತ ಉಡುಗೊರೆ ನೀಡಿದ್ದು, ಸಂಸದರಿಂದ ಸಿಕ್ಕ ಗೌರವಕ್ಕೆ ಕ್ರೊವೇಷಿಯಾ ಆಟಗಾರರು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ.
ಕ್ರೊವೇಷ್ಯಾ ತಂಡ ಸೆಮಿಫೈನಲ್‌ ತಲುಪಿರುವುದರಿಂದ ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ. ಕ್ರೊವೇಷ್ಯಾದ ಸಂಸತ್ತಿನಲ್ಲೂ ಇದು ಪ್ರತಿಫಲನಗೊಂಡಿತ್ತು. ಸಂಸದರು ಗುರುವಾರ ರಾಷ್ಟ್ರದ ಫುಟ್‌ಬಾಲ್ ತಂಡದ ಜೆರ್ಸಿಯನ್ನು ಹೋಲುವ ಪೋಷಾಕು ತೊಟ್ಟು ಬಂದಿದ್ದರು. ಮೂಲಕ ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಫುಟ್ಬಾಲ್ ಆಟಗಾರರಿಗೆ ಸಂಸದರು ಅಪೂರ್ವ ಗೌರವ ನೀಡಿದ್ದಾರೆ.
'ಮಾಸ್ಕೊದಲ್ಲಿ ಬುಧವಾರ ಅದ್ಭುತ ನಡೆಯಿತು. ನಮ್ಮ ತಂಡದ ಜಯದಿಂದಾಗಿ ವಿಶ್ವ ಮಟ್ಟದಲ್ಲಿ ದೇಶದ ಖ್ಯಾತಿ ಹೆಚ್ಚಿದೆ. ವಿಶಾಲ ಹೃದಯದ ಜನರಿರುವ ಸಣ್ಣ ರಾಷ್ಟ್ರಕ್ಕೆ ಸಿಕ್ಕಿದ ದೊಡ್ಡ ಯಶಸ್ಸು ಇದಾಗಿದೆ' ಎಂದು ಪ್ರಧಾನಿ ಆ್ಯಂಡ್ರೆಜ್ ಪ್ಲೆಂಕೊವಿಚ್‌ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕಳೆದ ಬುಧವಾರ ಮಧ್ಯರಾತ್ರಿ ನಡೆದಿದ್ದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕ್ರೊವೇಷ್ಯಾ ತಂಡವು 2–1 ಗೋಲುಗಳಿಂದ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿತು. ತಂಡದ  ಇವಾನ್‌ ಪೆರಿಸಿಚ್ (68ನೇ ನಿಮಿಷ) ಮತ್ತು  ಮೆರಿಯೊ ಮ್ಯಾಂಜುಕಿಚ್ (109ನೇ ನಿಮಿಷ) ವಿಜಯದ ರೂವಾರಿಗಳಾದರು. ಇಂಗ್ಲೆಂಡ್‌ ತಂಡದ  ಕೀರನ್‌ ಟ್ರಿಪ್ಪಿಯರ್ (5ನೇ ನಿಮಿಷ) ಅವರು ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ನಂತರದ ಅವಧಿಯಲ್ಲಿ ಛಲದ ಆಟವಾಡಿದ ಲೂಕಾ ಪಡೆಯ ಮುಂದೆ ಇಂಗ್ಲೆಂಡ್‌  ರಕ್ಷಣಾ ಗೋಡೆ ಕುಸಿಯಿತು. ಆದರೂ ಪೂರ್ಣ ಅವಧಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿದ್ದವು.
ಹೆಚ್ಚುವರಿ ಅವಧಿಯಲ್ಲಿ ಮೆರಿಯೊ ಮಾಡಿದ ಕಾಲ್ಚಳಕಕ್ಕೆ ಇಂಗ್ಲೆಂಡ್ ಗೋಲ್‌ ಕೀಪರ್ ಗೆರಾಲ್ಡ್‌ ಪಿಕ್‌ಪೋರ್ಡ್ ಏಮಾರಿದರು. ಕ್ರೊವೇಷ್ಯಾ ಬಳಗದಲ್ಲಿ ಸಂಭ್ರಮ ಪುಟಿದೆದ್ದರೆ. ಇಂಗ್ಲೆಂಡ್‌ ಅಭಿಮಾನಿಗಳು ನಿರಾಶೆಯ ಕಣ್ಣೀರಲ್ಲಿ ಮುಳುಗಿದರು.
SCROLL FOR NEXT