ಫೀಫಾ ವಿಶ್ವ ಕಪ್ 2018

ಫ್ರಾನ್ಸ್ ಗೆದ್ದರೆ ಇತಿಹಾಸ ಪುನರಾವರ್ತನೆ, ಕ್ರೊವೇಷಿಯಾ ಗೆದ್ದರೆ ಹೊಸ ಇತಿಹಾಸದ ನಿರ್ಮಾಣ

Srinivasamurthy VN
ಮಾಸ್ಕೊ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಭಾನುವಾರ ನಡೆಯುವ ಫೈನಲ್ ಪಂದ್ಯ ಮತ್ತೊಂದು ಹೊಸ ಇತಿಹಾಸದ ಪುಟ ತೆರೆಯಲು ಸಜ್ಜಾಗಿದೆ.
ಮಾಸ್ಕೋದ ಲುಜ್‌ನಿಕಿ ಅಂಗಣದಲ್ಲಿ ಫ್ರಾನ್ಸ್ ಮತ್ತು ಕ್ರೊವೇಷಿಯಾ ಫೈನಲ್‌ ಕದನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಮೊದಲ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಲು ಹಾತೊರೆಯುತ್ತಿರುವ ಕ್ರೊವೇಷಿಯಾ ಮತ್ತು ಎರಡನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಕನಸನ್ನು ಹೊತ್ತಿರುವ ಫ್ರಾನ್ಸ್ ತಂಡಗಳತ್ತ ಈಗ ಎಲ್ಲರ ಚಿತ್ತ ಹರಿದಿದೆ.
ರೋಮಾಂಚಕಾರಿ ಗೋಲುಗಳು, ಅಚ್ಚರಿಯ ಫಲಿತಾಂಶಗಳು, ಸಂಘಟಿತ ಮೋಹಕ ಆಟದ ಕೊನೆಯಲ್ಲಿ ಪ್ರಶಸ್ತಿ ಹಂತದ ಹಣಾಹಣಿಗೆ ಸಿದ್ಧವಾಗಿರುವ ಎರಡೂ ತಂಡಗಳು ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿವೆ. ಸೆಮಿಫೈನಲ್‌ ನಲ್ಲಿ ಬೆಲ್ಜಿಯಂ ವಿರುದ್ಧ 1–0 ಅಂತರದಿಂದ ಗೆದ್ದಿರುವ ಫ್ರಾನ್ಸ್‌ ಗೆ ಸಮಬಲದ ಪೈಪೋಟಿ ನೀಡಲು ಕ್ರೊವೇಷಿಯಾ ಸಿದ್ಧವಾಗಿದ್ದು, ಈ ತಂಡ ಸೆಮಿಫೈನಲ್‌ ನಲ್ಲಿ ಇಂಗ್ಲೆಂಡ್‌ ವಿರುದ್ಧ 2–1 ಅಂತರದ ಗೆಲುವು ಸಾಧಿಸಿತ್ತು.
1998ರಲ್ಲಿ ಪ್ರಶಸ್ತಿ ಗೆದ್ದಿದ್ದ ಫ್ರಾನ್ಸ್ ಅಂದಿನ ಸೆಮಿಫೈನಲ್‌ ಪಂದ್ಯದಲ್ಲಿ ಕ್ರೊವೇಷಿಯಾವನ್ನು 2–1ರಿಂದ ಮಣಿಸಿತ್ತು. ಆಗ ಫ್ರಾನ್ಸ್‌ ತಂಡದ ನಾಯಕ ಆಗಿದ್ದ ಡೈಡಿಯರ್ ದೆಶ್ಚಾಂಪ್ಸ್‌ ಈಗ ಆ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು 1998ರ ಸೋಲಿಗೆ ತಂಡದ ಮೇಲೆಯೂ ದೆಶ್ಚಾಂಪ್ಸ್ ಮೇಲೆಯೂ ಸೇಡು ತೀರಿಸಿಕೊಳ್ಳಲು ಕ್ರೊವೇಷಿಯಾಗೆ ಈಗ ಉತ್ತಮ ಅವಕಾಶ ಒದಗಿದೆ.
SCROLL FOR NEXT