2018 ರ ಫೀಫಾ ವಿಶ್ವಕಪ್ ಫೈನಲ್ಸ್ ನಲ್ಲಿ ಫ್ರಾನ್ಸ್-ಕ್ರೊವೇಷಿಯಾ ಸೆಣೆಸಲಿದ್ದು, ಚಾಂಪಿಯನ್ಸ್ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಬಗ್ಗೆ ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ.
ಕ್ರೀಡೆಯ ಬಗ್ಗೆ ಅಷ್ಟೇ ಅಲ್ಲದೇ ಪ್ರತಿ ಬಾರಿ ಪ್ರತಿಷ್ಠಿತ ಸರಣಿಗಳು ನಡೆದಾಗಲೂ ಚಾಂಪಿಯನ್ಸ್ ಪಟ್ಟದ ಬಗ್ಗೆ ಪ್ರಾಣಿಗಳ ಭವಿಷ್ಯ ಕೇಳುವುದಕ್ಕೂ ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಅಂತೆಯೇ ಈ ಬಾರಿಯ ಫೀಫಾ ವಿಶ್ವಕಪ್ ಬಗ್ಗೆ ಕ್ರಾಸ್ನೊಯಾರ್ಸ್ಕ್ ನ ರಾಯ್ವ್ ರುಚೆ ಝೂ ನಲ್ಲಿರುವ ಕರಡಿ ಭವಿಷ್ಯ ನುಡಿದೆ.
2010 ರ ವಿಶ್ವಕಪ್ ನಲ್ಲಿ ಆಕ್ಟೋಪಸ್ ಸುಮಾರು 8 ಪಂದ್ಯಗಳ ಫಲಿತಾಂಶದ ಬಗ್ಗೆ ನಿಖರವಾಗಿ ಭವಿಷ್ಯ ನುಡಿದು ಸುದ್ದಿಯಾಗಿತ್ತು. ಈ ಬಾರಿ ಕರಡಿ ಸುದ್ದಿಯಲ್ಲಿದ್ದು, ಕರಡಿ ಭವಿಷ್ಯದ ಪ್ರಕಾರ ಕ್ರೊವೇಷಿಯಾ ಚಾಂಪಿಯನ್ಸ್ ಪಟ್ಟ ಪಡೆದು ಇತಿಹಾಸ ನಿರ್ಮಿಸಲಿದೆಯಂತೆ. ಇಷ್ಟಕ್ಕೂ ಈ ಕರಡಿ ಭವಿಷ್ಯ ಹೇಗೆ ಹೇಳುತ್ತೆ ಅಂದ್ರಾ? ಫ್ರಾನ್ಸ್ ಹಾಗೂ ಕ್ರೊವೇಷಿಯಾದ ಧ್ವಜವುಳ್ಳ ಎರಡು ಕಲ್ಲಂಗಡಿ ಹಣ್ಣುಗಳನ್ನು ಕರಡಿ ಮುಂದಿಡಲಾಗಿತ್ತು. ಕರಡಿ ಕ್ರೊವೇಷಿಯಾದ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡಿದ್ದು, ಕ್ರೊವೇಷಿಯಾ ತಂಡವೇ ಫೀಫಾ ವಿಶ್ವಕಪ್ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಕರಡಿ ಭವಿಷ್ಯದ ನಿಖರತೆ ತಿಳಿಯಲಿದೆ.