ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಗೆಲುವು-ಸೋಲಿನ ಭವಿಷ್ಯ ಹೇಳುತ್ತಿದೆ ಈ ವಿಶೇಷ ಕಿವುಡು ಬೆಕ್ಕು

Srinivasamurthy VN
ಮಾಸ್ಕೋ: ಪ್ರತೀಬಾರಿ ಫೀಫಾ ವಿಶ್ವಕಪ್ ಟೂರ್ನಿ ಬಂದಾಗಲೂ ಆಕ್ಟೋಪಸ್ ಮತ್ತು ಮೀನು ಭವಿಷ್ಯ ಹೇಳುವ ಕುರಿತು ವ್ಯಾಪಕ ಸುದ್ದಿ ಕೇಳಿಬರುತ್ತಿತ್ತ. ಆದರೆ ಇದೀಗ ಈ ಪಟ್ಟಿಗೆ ವಿಶೇಷ ಬೆಕ್ಕು ಕೂಡ ಸೇರ್ಪಡೆಯಾಗಿದೆ.
ಹೌದು.. ಸುಮಾರು 8 ವರ್ಷಗಳಿಗೆ ಹಿಂದೆ ಫೀಫಾ ವಿಶ್ವಕಪ್ ನಲ್ಲಿ ಗೆಲ್ಲುವ ತಂಡವನ್ನು ಭವಿಷ್ಯ ಹೇಳಿ ಪೌಲ್ ಹೆಸರಿನ ಅಕ್ಟೋಪಸ್ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಇನ್ನು ಈ ಬಾರಿ ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವ ಕಪ್ ನ ಭವಿಷ್ಯ ನುಡಿಯುವ ಸರದಿ ಅಚಿಲ್ಸ್ ಹೆಸರಿನ ಬಿಳಿ ಬೆಕ್ಕಿಗೆ ದೊರೆತಿದೆ. ಅಚ್ಚರಿ ಎಂದರೆ ಈ ಅಚಿಲ್ಸ್ ಬೆಕ್ಕಿಗೆ ಕಿವಿ ಕೇಳಿಸುವುದಿಲ್ಲವಂತೆ. ಆದರೆ ಈ 2018ರ ಫೀಫಾ ವಿಶ್ವಕಪ್ ನಲ್ಲಿ ಸೋಲು-ಗೆಲುವಿನ ಕುರಿತು ಅಚಿಲ್ಸ್ ಭವಿಷ್ಯ ನುಡಿಯಲಿದೆ. 
ಉದ್ಘಾಟನಾ ಪಂದ್ಯದಲ್ಲಿ ರಷ್ಯಾಗೆ ಗೆಲುವು
ಇನ್ನು ಇಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ರಷ್ಯಾ ಗೆಲುವು ಸಾಧಿಸಲಿದೆ ಎಂದು ಅಚಿಲ್ಸ್ ಭವಿಷ್ಯ ನುಡಿದಿದೆ. ಆದರೆ ಪ್ರಸ್ತುತ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ರಷ್ಯಾ ತಂಡದ ಪ್ರದರ್ಶನ ಕಳಪೆಯಾಗಿದ್ದು, ಕಳೆದ 8 ತಿಂಗಳಿನಿಂದ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನೂ ಗೆಲ್ಲದ ರಷ್ಯಾ ಇಂದು ಜಯಗಳಿಸಲಿದೆ ಎಂಬ ಅಚಿಲ್ಸ್ ಭವಿಷ್ಯ ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದೇ ಕಾರಣಕ್ಕಾಗಿ ಇಂದು ನಡೆಯಲಿರುವ ಉದ್ಘಾಟನಾ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ.
ಭವಿಷ್ಯ ಹೇಳಿಸುವ ಪ್ರಕ್ರಿಯೆ ಹೇಗಿರುತ್ತೆ ಗೋತ್ತಾ?
ಇನ್ನು 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಫೀಫಾ ವಿಶ್ವಕಪ್ ನಲ್ಲಿ ನಿಖರ ಭವಿಷ್ಯ ನುಡಿದಿದ್ದ ಪೌಲ್ ಹೆಸರಿನ ಅಕ್ಟೋಪಸ್ ಬಹಳ ಜನಪ್ರಿಯವಾಗಿತ್ತು. ಆ ಸಂದರ್ಭ ಭವಿಷ್ಯ ಹೇಳಲು ಪೌಲ್ ಗೆ ಆಹಾರ ತುಂಬಿದ ಎರಡು ಪೆಟ್ಟಿಗೆಗಳನ್ನು ನೀಡಲಾಗಿತ್ತು. ಇದೇ ರೀತಿ ಅಚಿಲ್ಸ್ ಗೂ ತಂಡಗಳ ಬಾವುಟಗಳಿರುವ ಬೌಲ್ ಗಳನ್ನು ನೀಡಿ ಭವಿಷ್ಯ ಕೇಳಲಾಗುತ್ತದೆ.
ರಷ್ಯಾದಲ್ಲಿನ ಫೀಫಾ ವಿಶ್ವಕಪ್‌ ಪಂದ್ಯಗಳ ಭವಿಷ್ಯ ಕೇಳಲು ಈ ಬಾರಿ ಅಚಿಲ್ಸ್ ಬೆಕ್ಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಬಾರಿ ಅದು ಹೇಳುವ ಭವಿಷ್ಯದ ಪ್ರಕಾರವೇ ಫಲಿತಾಂಶಗಳು ಬರಬಹುದು ಎಂಬ ನಿರೀಕ್ಷೆ ಇದೆ. 2010ರ ಫೀಪಾ ವಿಶ್ವಕಪ್‌ ಸಂದರ್ಭದಲ್ಲಿ ಜರ್ಮನಿ ತಂಡ ಆಡಿದ 13 ಪಂದ್ಯಗಳಲ್ಲಿ 11 ಫಲಿತಾಂಶಗಳು ಪೌಲ್ ಅಕ್ಟೋಪಸ್ ಹೇಳಿದ ರೀತಿಯೇ ಫಲಿತಾಂಶಗಳು ಬಂದಿದ್ದವು. ಇದಲ್ಲದೆ ಫೈನಲ್ ನಲ್ಲಿ ಸ್ಪೇನ್ ಗೆಲ್ಲಲಿದೆ ಎಂದಿದ್ದ ಪೌಲ್ ಭವಿಷ್ಯವೂ ನಿಜವಾಗಿತ್ತು. ಹೀಗೆ ಜನಪ್ರಿಯಗೊಂಡಿದ್ದ ಭವಿಷ್ಯಕಾರ ಅಕ್ಟೋಪಸ್ ಪೌಲ್ ಬಗ್ಗೆ ಇನ್ನೊಂದು ಕುತೂಹಲಕಾರಿ ಸಂಗತಿಯಿದೆ. ಅದೇನೆಂದರೆ 26 ಜನವರಿ 2008ರಂದು ಜನಿಸಿದ್ದ ಪೌಲ್, 26 ಅಕ್ಟೋಬರ್ 2010ರಂದು ಸಾವನ್ನಪ್ಪಿತ್ತು. ಈ ಬಾರಿ ಪೌಲ್ ಜಾಗವನ್ನು ಆವರಿಸಿಕೊಂಡಿರುವ ಅಚಿಲ್ಸ್ ಕುತೂಹಲ ಕೆರಳಿಸಿದೆ.
SCROLL FOR NEXT