ಪತ್ರಕರ್ತೆಗೆ ಮುತ್ತು ನೀಡಿದ ದುಷ್ಕರ್ಮಿ
ಮಾಸ್ಕೊ: ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ವೇಳೆ ಸುದ್ದಿವಾಹಿನಿಗೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ದ ಕೊಲಂಬಿಯಾ ಮೂಲದ ಪತ್ರಕರ್ತೆಗೆ ದುಷ್ಕರ್ಮಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಕೂಟದ ಕುರಿತು ಮೈದಾನದ ಹೊರಗೆ ನೇರಪ್ರಸಾರದ ವರದಿ ನೀಡುತ್ತಿದ್ದ ಕೊಲಂಬಿಯಾದ ಪತ್ರಕರ್ತೆಯೊಬ್ಬರಿಗೆ ಫುಟ್‌ಬಾಲ್ ಅಭಿಮಾನಿಯೊಬ್ಬ ಏಕಾಏಕಿ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಜರ್ಮನ್‌ನ ಸುದ್ದಿ ಚಾನೆಲ್‌ಗೆ ವರದಿ ಮಾಡುತ್ತಿದ್ದ ಪತ್ರಕರ್ತೆ ಜುಲಿಯೆತ್ ಗೊಂಝಾಲೆಜ್ ಅವರು ಕರ್ತವ್ಯದಲ್ಲಿ ನಿರತರಾಗಿದ್ದಾಗ ಕ್ಯಾಮೆರಾಗೆ ಅಡ್ಡ ಬಂದ ವ್ಯಕ್ತಿ ಏಕಾಏಕಿ ಪತ್ರಕರ್ತೆಯ ಎದೆ ಭಾಗ ಮುಟ್ಟಿ ಮುತ್ತು ನೀಡಿದ್ದಾನೆ. ಬಳಿಕ ಆತ ಪರಾರಿಯಾಗಿದ್ದು, ಈ ಬಗ್ಗೆ ಪತ್ರಕರ್ತೆ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪರಿಸ್ಥಿತಿ ತೋಡಿಕೊಂಡಿದ್ದಾರೆ.
ಇನ್ನುವ್ಯಕ್ತಿಯ ಹೇಯ ವರ್ತನೆಯ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದ ಪತ್ರಕರ್ತೆ ವಿಚಲಿತರಾಗದೆ ವರದಿ ಮುಂದುವರಿಸಿದ್ದಾರೆ. ವರದಿ ಮುಗಿದ ಬಳಿಕ ಕಾಮುಕನಿಗಾಗಿ ಹುಡುಕಾಡಿದ್ದು ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಕೀಳು ಮಟ್ಟದ ವರ್ತನೆ ತೋರಿದ ವ್ಯಕ್ತಿ ಸ್ಥಳೀಯನೋ, ವಿದೇಶಿಗನೋ ಎನ್ನುವುದು ತಿಳಿದು ಬಂದಿಲ್ಲ. ಯಾವ ಕಾರಣಕ್ಕಾಗಿ ಹೀಗೆ ಮಾಡಿದ, ಯಾವ ತಂಡದ ಅಭಿಮಾನಿ ಎನ್ನುವುದೂ ತಿಳಿದು ಬಂದಿಲ್ಲ. ಈ ಬಗ್ಗೆ ಪತ್ರಕರ್ತೆ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಪತ್ರಕರ್ತೆ, ನೇರ ಪ್ರಸಾರ ಆರಂಭಿಸುವುದಕ್ಕೂ ಮೊದಲು ನಾನು ಸುಮಾರು 2 ಗಂಟೆಗಳ ಕಾಲ ಅದೇ ಸ್ಥಳದಲ್ಲಿದ್ದೆ. ಆದರೆ ನೇರಪ್ರಸಾರ ಆರಂಭವಾಗುತ್ತಿದ್ದಂತೆಯೇ ಆತ ಈ ರೀತಿ ಮಾಡಿದ. ಇದು ನಿಜಕ್ಕೂ ಆಘಾತವನ್ನುಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ವಿಶ್ವಾದ್ಯಂತ ಪತ್ರಕರ್ತರು ಮತ್ತು ಕ್ರೀಡಾ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.