ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಪೋಲ್ಯಾಂಡ್ ವಿರುದ್ಧ ಕೊಲಂಬಿಯಾಗೆ 3-0 ಅಂತರದ ಭರ್ಜರಿ ಜಯ

Srinivasamurthy VN
ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018ರ ಟೂರ್ನಿಯಲ್ಲಿ ಪೊಲ್ಯಾಂಡ್ ತಂಡವನ್ನು 3-0 ಅಂತರದಲ್ಲಿ ಮಣಿಸಿದ ಕೊಲಂಬಿಯಾ ತಂಡ ತನ್ನ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮಾಸ್ಕೋದ ಕಝನ್ ಅರೇನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಲಂಬಿಯಾ ತಂಡ ಪೋಲ್ಯಾಂಡ್ ಅನ್ನು 3-0 ಅಂತರದಲ್ಲಿ ಮಣಿಸಿತು. ತಂಡದ ಪರ ಯರ್ರಿ ಮಿನಾ, ರಡಾಮೆಲ್ ಫಲ್ಕೋವ್ ಮತ್ತು ಜುವಾನ್ ಕ್ವಾಡ್ರಾಡೋ ಸಿಡಿಸಿದ ಗೋಲ್ ಗಳು ತಂಡದ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿತು.
ಪಂದ್ಯದ 40ನೇ ನಿಮಿಷದಲ್ಲಿ ಕೊಲಂಬಿಯಾದ ಯರ್ರಿ ಮಿನಾ ಸಿಡಿಸಿದ ಗೋಲ್ ತಂಡದ ಗೆಲುವಿನ ಆಸೆಗೆ ನೀರೆರೆಯಿತು. ಆ ಬಳಿಕ 70ನೇ ನಿಮಿಷದಲ್ಲಿ ರಡಾಮೆಲ್ ಫಲ್ಕೋವ್ ಎದುರಾಳಿ ತಂದ ಆಟಗಾರರನ್ನು ಹಿಂದಿಕ್ಕಿ ಗೋಲ್ ಸಿಡಿಸಿದರು. ಇದು ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಮೊದಲ ಗೋಲ್ ಎಂಬುದು ವಿಶೇಷ.
ಇದಾದ ಕೇವಲ 5 ನಿಮಿಷದ ಅಂತರದಲ್ಲಿ ಮತ್ತೆ ಕೊಲಂಬಿಯಾ ಪರ ಗೋಲ್ ಬಂತು. ಜೇಮ್ಸ್ ರೋಡ್ಗಿಜ್ ನೀಡಿದ ಪಾಸ್ ಅನ್ನು ಅತ್ಯುತ್ತಮವಾಗಿ ಸ್ವೀಕರಿಸಿದ ಜುವಾನ್ ಕ್ವಾಡ್ರಾಡೋ ಚೆಂಡನ್ನು ಹಿಡಿತಕ್ಕೆ ಪಡೆದ ಕೆಲವೇ ಸೆಕೆಂಡ್ ಗಳಲ್ಲಿ ಗೋಲ್ ಪೋಸ್ಟ್ ನತ್ತ ಬಾರಿಸಿದರು. ಬಳಿಕ ಪಂದ್ಯ ಉಳಿಸಿಕೊಳ್ಳಲು ಪೋಲ್ಯಾಂಡ್ ಆಟಗಾರರು ಹರಸಾಹಸ ಪಟ್ಟರಾದರೂ ಅದು ಸಾಧ್ಯವಾಗಲಿಲ್ಲ. ಆ ಮೂಲಕ ಕೊಲಂಬಿಯಾ ತಂಡ 3-0 ಅಂತರದಲ್ಲಿ ಜಯ ಸಾಧಿಸಿ ತನ್ನ ನಾಕೌಟ್ ಹಂತದ ಆಸೆಯನ್ನು ಜೀವಂತವಾಗಿರಿಸಿದೆ.
SCROLL FOR NEXT