ಬೆಲ್ಜಿಯಂ ಆಟಗಾರ ಮಿಚಿ ಬತ್ಸುಯಿ ಯಡವಟ್ಟು
ಮಾಸ್ಕೋ: ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಅನೌಪಚಾರಿಕ ಪಂದ್ಯದಲ್ಲಿ ಬೆಲ್ಜಿಯಂ ತಂಡ ಗೆದ್ದು ಅಗ್ರಸ್ಥಾನಕ್ಕೇರಿತಾದರೂ, ಪಂದ್ಯದ ಕೊನೆಯಲ್ಲಿ ಆ ತಂಡದ ಆಟಗಾರ ಮಾಡಿಕೊಂಡ ಯಡವಟ್ಟು ಇದೀಗ ಟ್ವಿಟರ್ ನಲ್ಲಿ ನಗೆಪಾಟಲಿಗೀಡಾಗಿದೆ.
ಜಿ ಗುಂಪಿನಿಂದ ಅಗ್ರ 2 ತಂಡಗಳಾಗಿ ಈಗಾಗಲೇ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿರುವ ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯದಲ್ಲಿ ಬೆಲ್ಜಿಯಂ 1-0 ಅಂತರದಲ್ಲಿ ಜಯ ಸಾಧಿಸಿ ಗ್ರೂಪ್ ನ ಅಗ್ರಸ್ಥಾನಿಯಾಗಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿತು. ಆದರೆ ಪಂದ್ಯದ ಕೊನೆಯಲ್ಲಿ ಈ ತಂಡದ ಆಟಗಾರ ಮಿಚಿ ಬತ್ಸುಯಿಯ ವಿಶೇಷ ಸಂಭ್ರಮ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ.
ಬೆಲ್ಜಿಯಂ ತಂಡ ಇಂಗ್ಲೆಂಡ್ ವಿರುದ್ಧ 1-0 ಅಂರದಲ್ಲಿ ಜಯ ಸಾಧಿಸಿತು. ಪಂದ್ಯದ 90ನೇ ನಿಮಿಷದಲ್ಲಿ ಆಟ ಮುಕ್ತಾಯವಾದಾಗ ಬೆಲ್ಜಿಯಂ ತಂಡದ ಆಟಗಾರ ಮಿಚಿ ಬತ್ಸುಯಿ ಸಂಭ್ರಮಸಿವುದಕ್ಕಾಗಿ ಚೆಂಡನ್ನು ಗೋಲ್ ಪೋಸ್ಚ್ ನತ್ತ ಬಲವಾಗಿ ಒದ್ದಿದ್ದ. ಆತನ ಟಾರ್ಗೆಟ್ ಚೆಂಡನ್ನು ಗೋಲ್ ಪೋಸ್ಟ್ ನೊಳಗೆ ನುಗ್ಗಿಸುವುದಾಗಿತ್ತಾದರೂ, ಆತನ ದುರಾದೃಷ್ಟ ಚೆಂಡ ಗೋಲ್ ಬಾಕ್ಸ್ ನ ಕಂಬಕ್ಕೆ ಬಡಿದು ವಾಪಸ್ ಬೌನ್ಸ್ ಆಗಿ ಆತನ ಮುಖಕ್ಕೆ ಬಡಿದಿದೆ.
ಈ ದೃಶ್ಯವನ್ನು ಕಂಡ ಪ್ರೇಕ್ಷಕರು ಕೆಲ ಕ್ಷಣಗಳ ಕಾಲ ನಗೆಗಡಲಲ್ಲಿ ತೇಲಾಡಿದ್ದರು. ಈ ಘಟನೆಯಿಂದ ಕೆಲ ಕ್ಷಣಗಳಕಾಲ ವಿಚಲಿತನಾಗಿದ್ದ ಮಿಚಿ ಬತ್ಸುಯಿ ಬಳಿಕ ಡ್ರೆಸಿಂಗ್ ರೂಂ ಸೇರಿಕೊಂಡಿದ್ದ. ಈದಾದ ಕೆಲವೇ ಗಂಟೆಗಳಲ್ಲಿ ಟ್ವಿಟರ್ ನಲ್ಲಿ ಪ್ರತ್ಯಕ್ಷನಾಗಿದ್ದ ಮಿಚಿ ಬತ್ಸುಯಿ, 'ನನ್ನ ಸಂಭ್ರಮ ಕೊಂಚ ಮಿತಿ ಮೀರಿತು.. ಹೀಗಾಗಿ ನನಗೆ ತಕ್ಕ ಶಾಸ್ತಿಯಾಯಿತು. ನಾನೇಕೆ ಮೂರ್ಖನಾದೆ ಎಂದು ಹಾಸ್ಯಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.