ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಹಲವಾರು ರೋಚಕ ಕ್ಷಣಗಳು ಅಭಿಮಾನಿಗಳನ್ನು ರಂಜಿಸಿದ್ದು, ಹಲವು ಆಟಗಾರರು ತಮ್ಮದೇ ಆದ ರೀತಿಯಲ್ಲಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಟಗಾರರು ಗೋಲು ದಾಖಲಿಸಿ ಖ್ಯಾತಿ ಪಡೆದರೆ, ಕೆಲವರು ಮೈದಾನದಲ್ಲಿ ತಮ್ಮ ವರ್ತನೆಯಿಂದ ಸುದ್ದಿ ಮಾಡಿದವರೂ ಇದ್ದಾರೆ. ಅಲ್ಲದೆ ಎದುರಾಳಿ ತಂಡದ ರಣತಂತ್ರವನ್ನು ಮೆಟ್ಟಿ ನಿಂತು ಸುಲಭವಾಗಿ ಗೋಲು ದಾಖಲಿಸಲು ಅವಕಾಶ ನೀಡದೇ ಅವರ ಪ್ರತಿ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಗೋಲ್ ಕೀಪರ್ಗಳು ಯಶಸ್ವಿಯಾಗಿದ್ದಾರೆ. ಹಾಗಾಗಿ ಈ ಬಾರಿಯ ಟೂರ್ನಿಯಲ್ಲಿ ಮನಗೆದ್ದ ಪ್ರಮುಖ ಗೋಲ್ಕೀಪರ್ಗಳ ಸಾಧನೆಯನ್ನು ನೋಡುವ ಪ್ರಯತ್ನ ಇದಾಗಿದೆ.
ಕೇಲರ್ ನವಾಸ್
(ಕೋಸ್ಟ ರಿಕಾ)
ಪ್ರಸಕ್ತ ವಿಶ್ವಕಪ್ನಲ್ಲಿ ಅಚ್ಚರಿಯ ಪ್ರದರ್ಶನ ನೀಡಿದ ಕೋಸ್ಟ ರಿಕಾ ತಂಡ ಇತಿಹಾಸದಲ್ಲಿ ಮೊದಲ ಬಾರಿಗೆ ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸಿದ ಸಾಧನೆ ಮಾಡಿತ್ತು. ಈ ಸಾಧನೆಯ ಹಿಂದೆ ನವಾಸ್ ಪಾತ್ರ ಶ್ಲಾಘನೀಯ. ಡಿ ಗುಂಪಿನಲ್ಲಿ ಇಟಲಿ, ಇಂಗ್ಲೆಂಡ್, ಉರುಗ್ವೆಯಂತಹ ಮಾಜಿ ಚಾಂಪಿಯನ್ ತಂಡಗಳ ರಣತಂತ್ರ ಹಾಗೂ ಪ್ರಯತ್ನಗಳನ್ನು ವಿಫಲಗೊಳಿಸಿದ ನವಾಸ್ ತಂಡದ ಪ್ರಮುಖ ಆಟಗಾರನಾಗಿದ್ದರು. ಅಲ್ಲದೆ ಶೇ.87ರಷ್ಟು ಗೋಲ್ ರಕ್ಷಣೆ ಮಾಡಿರುವ ನವಾಸ್ ವಿಶ್ವಕಪ್ನಲ್ಲಿ ಹೆಚ್ಚು ಸರಾಸರಿ ಕಾಯ್ದುಕೊಂಡ ಗೋಲ್ಕೀಪರ್ ಆಗಿದ್ದಾರೆ.
ಗಿಲೆರ್ಮೊ ಒಚೊವಾ
(ಮೆಕ್ಸಿಕೊ)
ಮೆಕ್ಸಿಕೊ ತಂಡ ಪ್ರಿಕ್ವಾರ್ಟರ್ಫೈನಲ್ನಲ್ಲೇ ತನ್ನ ಹೋರಾಟ ಅಂತ್ಯಗೊಳಿಸಿತಾದರೂ, ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿರುವುದು ಗೋಲ್ಕೀಪರ್ ಒಚೊವಾ. ಗುಂಪು ಹಂತದಲ್ಲಿ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪಡೆದ ಆಟಗಾರನಾಗಿದ್ದಾರೆ. ಅಲ್ಲದೆ ಶೇ.77ರಷ್ಟು ಗೋಲು ರಕ್ಷಣೆಯಲ್ಲಿ ಯಶಸ್ಸು ಸಾಧಿಸಿದ್ದು, ಅಭಿಮಾನಿಗಳ ಮನ ಗೆದ್ದಿದ್ದಾರೆ. ವಿಶ್ವಕಪ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಒಚೊವಾ, ಮುಂಬರುವ ಲೀಗ್ಗಳಲ್ಲಿ ಉತ್ತಮ ಆಯ್ಕೆಯಾಗಲಿದ್ದಾರೆ.
ವಿನ್ಸೆಂಟ್ ಎನೆಮಾ (ನೈಜೀರಿಯಾ)
ಹೆಚ್ಚು ಅನಿರೀಕ್ಷಿತ ಶೈಲಿಯ ಫುಟ್ಬಾಲ್ ಆಡುವ ನೈಜೀರಿಯಾದಂತಹ ತಂಡದಲ್ಲಿ ಗೋಲ್ಕೀಪಿಂಗ್ ಮಾಡುವುದು ದೊಡ್ಡ ಸವಾಲು. ಆದರೆ ವಿನ್ಸೆಂಟ್ ತನ್ನ ಜವಾಬ್ದಾರಿ ನಿರ್ವಹಿಸಿದ ರೀತಿ ಅತ್ಯದ್ಭುತ. ಶೇ.80ರಷ್ಟು ಗೋಲುರಕ್ಷಣೆಯ ಸಾಧನೆ ಮಾಡಿರುವ ವಿನ್ಸೆಂಟ್, ವಿಶ್ವಕಪ್ನಲ್ಲಿ ನೈಜೀರಿಯಾ ತಂಡದ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ. ತಮ್ಮ ತಂಡ ಪ್ರಿಕ್ವಾರ್ಟರ್ಗೆ ತಲುಪುವಲ್ಲಿ ವಿನ್ಸೆಂಟ್ ಪ್ರಮುಖ ಅಸ್ತ್ರವಾಗಿದ್ದರು.
ಮ್ಯಾನ್ಯುಯಲ್ ನೆಯೂರ್
(ಜರ್ಮನಿ)
ಜರ್ಮನಿ ತಂಡ ಇದುವರೆಗೂ ವಿಶ್ವಕಪ್ನಲ್ಲಿನ ಸಾಧನೆಯ ಪ್ರಮುಖ ಭಾಗ ನೆಯೂರ್. ವಿಶ್ವದ ಪ್ರಮುಖ ಗೋಲ್ಕೀಪರ್ಗಳಲ್ಲಿ ಒಬ್ಬರಾಗಿರುವ ನೆಯೂರ್, ಆಧುನಿಕ ಮಾದರಿಯ ಗೋಲ್ ಕೀಪಿಂಗ್ ಶೈಲಿಯಿಂದ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಪ್ರಿಕ್ವಾರ್ಟರ್ಫೈನಲ್ನಲ್ಲಿ ಅಲ್ಜೀರಿಯಾ ವಿರುದ್ಧದ ಪಂದ್ಯದಲ್ಲಿ ಜರ್ಮನಿ ತಂಡಕ್ಕೆ ಗೋಲ್ಕೀಪರ್ ಜತೆಗೆ 5ನೇ ರಕ್ಷಣಾ ಆಟಗಾರನಾಗಿ ಕಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಟಿಮ್ ಹೋವರ್ಡ್ (ಅಮೆರಿಕ)
ಪ್ರಸಕ್ತ ಸಾಲಿನಲ್ಲಿ ಅಮೆರಿಕ ತಂಡ ಕ್ವಾರ್ಟರ್ಫೈನಲ್ ಹಂತದಲ್ಲೇ ತಮ್ಮ ಹೋರಾಟ ಅಂತ್ಯಗೊಳಿಸಿದರೂ, ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿ ಅಭಿಮಾನಿಗಳ ಗಮನ ಸೆಳೆದ ಆಟಗಾರ ಟಿಮ್ ಹೋವರ್ಡ್. ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 15 ಗೋಲುಗಳನ್ನು ತಡೆದಿದ್ದರು.