-ಕಣ್ಣೀರ ಕೊಳದಲ್ಲಿ ಸಾಂಬಾ ನಾಡು, ಇತಿಹಾಸದಲ್ಲೇ ಸ್ಕೊಲಾರಿ ಪಡೆಗೆ ದೊಡ್ಡ ಸೋಲು, ಜರ್ಮನಿ ದಾಖಲೆ 8ನೇ ಬಾರಿ ಫೈನಲ್ಗೆ
ಬೆಲೊ ಹಾರಿಜಾಂಟ್: ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲೇ ಈ ಸೋಲು ಬ್ರೆಜಿಲ್ಗೆ ಕಪ್ಪು ಚುಕ್ಕೆ ಎನಿಸಿದೆ. ಜಾಗತಿಕ ಫುಟ್ಬಾಲ್ನಲ್ಲಿ ತನ್ನದೇಯಾದ ವಿಶಿಷ್ಠ ಸಾಮ್ರಾಜ್ಯ ಕಟ್ಟಿರುವ ಬ್ರೆಜಿಲ್ ಇಂದು ವಿಶ್ವದ ಮುಂದೆಯೇ ತಲೆತಗ್ಗಿಸಿ ನಿಲ್ಲುವಂತಾಗಿದೆ.
ಎಸ್ಟಾಡಿಯೊ ಮಿನೇರೊ ಕ್ರೀಡಾಂಗಣದಲ್ಲಿ ಬುಧವಾರ ನಸುಕಿನಲ್ಲಿ ನಡೆದ 2014ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಯಾರೂ ನಿರೀಕ್ಷಿಸಿರದ ಸೋಲು ಬ್ರೆಜಿಲ್ ಮೇಲೆ ಅಪ್ಪಳಿಸಿದೆ. ಎದುರಾಳಿ ತಂಡ ಬಲಾಢ್ಯ ಜರ್ಮನಿ ಪಡೆ 7-1 ಗೋಲುಗಳಿಂದ ಬ್ರೆಜಿಲ್ಗೆ ಅವಮಾನಕಾರಿ ಸೋಲುಣಿಸಿ ಫೈನಲ್ಗೆ ಹೆಜ್ಜೆ ಹಾಕಿದೆ. ದಯನೀಯ ಸೋಲಿನಿಂದಾಗಿ ಇಡೀ ಬ್ರೆಜಿಲ್ ಕಣ್ಣೀರಿನಲ್ಲಿ ಮುಳುಗಿದೆ.
ಹೆಚ್ಚು ಬಾರಿ ವಿಶ್ವಕಪ್ ಪ್ರಶಸ್ತಿ (5 ಬಾರಿ) ಗೆದ್ದ ಸಾಧನೆ ಮಾಡಿರುವ ಬ್ರೆಜಿಲ್ ಈ ಸಲದ ಟೂರ್ನಿಯಲ್ಲಿ ದುರಂತ ವಿದಾಯ ಹೇಳುತ್ತದೆ ಎಂದು ಯಾರೊಬ್ಬರೂ ಕನಸು-ಮನಸಿನಲ್ಲೂ ಯೋಚಿಸಿರಲಿಲ್ಲ. ಪಂದ್ಯ ಆರಂಭಗೊಂಡು ಅರ್ಧಗಂಟೆ ಕಳೆಯುವ ಮುನ್ನವೇ ಇತಿಹಾಸದ ಪುಟ ಸೇರಿತ್ತು. 30 ನಿಮಿಷಗಳ ಆಟದೊಳಗೆಯೇ ಜರ್ಮನಿ ತಂಡಕ್ಕೆ 5 ಗೋಲುಗಳನ್ನು ಬಿಟ್ಟುಕೊಟ್ಟ ಬ್ರೆಜಿಲ್ ಆಟಗಾರರು ನಾಚಿಕೆಯಿಂದ ತಲೆತಗ್ಗಿಸಿ ನಿಂತಿದ್ದಾರೆ. ಮತ್ತೊಂದೆಡೆ ಜರ್ಮನಿ ದಾಖಲೆಯ 8ನೇ ಬಾರಿ ವಿಶ್ವಕಪ್ ಫೈನಲ್ ತಲುಪಿದೆ. ಜಪಾನ್ನಲ್ಲಿ ನಡೆದ 2002ರ ವಿಶ್ವಕಪ್ ಫೈನಲ್ನಲ್ಲಿ ಬ್ರೆಜಿಲ್ ವಿರುದ್ಧ 0-2 ಗೋಲುಗಳಿಂದ ಸೋತಿದ್ದ ಜರ್ಮನಿ, ಇಲ್ಲಿ ಆ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿತು. ಆ ಮೂಲಕ ನಾಲ್ಕನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿಯುವ ಆಸೆ ಹೆಚ್ಚಿಸಿಕೊಂಡಿತು.
ಥಾಮಸ್ ಮುಲ್ಲರ್ ಪ್ರಥಮಾರ್ಧದ 11ನೇ ನಿಮಿಷದಲ್ಲಿಯೇ ಗೋಲು ಬಾರಿಸಿ ಜರ್ಮನಿ ಪರ ಖಾತೆ ತೆರೆದರು. ಆರಂಭದಲ್ಲೇ ದೊರೆತ ಯಶಸ್ಸಿನ ಮೇಲೆ ದಿಟ್ಟ ಹೆಜ್ಜೆಗಳನ್ನಿಟ್ಟು ಮುಂದೆ ಸಾಗಿದ ಜರ್ಮನಿ ಪಾಲಿಗೆ ಒಂದರ ಮೇಲೊಂದರಂತೆ ಫಲಗಳು ಲಭಿಸಿದವು. ಮಿರೋಸ್ಲಾವ್ ಕ್ಲೋಸ್ (23ನೇ ನಿಮಿಷ), ಟೋನಿ ಕ್ರೂಸ್ (24ನೇ ಮತ್ತು 26ನೇ ನಿಮಿಷ) ಮತ್ತು ಸಾಮಿ ಖೆಡೀರಾ (29ನೇ ನಿಮಿಷ) ಕ್ರಮವಾಗಿ ಗೋಲು ಗಳಿಸಿ ವಿರಾಮದ ವೇಳೆಗೆ ಜರ್ಮನಿ ತಂಡಕ್ಕೆ 5-0 ಗೋಲುಗಳ ಭಾರಿ ಮುನ್ನಡೆ ದೊರಕಿಸಿಕೊಟ್ಟರು. ಅದಾಗಲೇ ಜರ್ಮನಿ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಿತ್ತು.
ಉತ್ತರಾರ್ಧದ ಆಟದಲ್ಲಿ ಸಹ ಜರ್ಮನಿ ಆರ್ಭಟ ಮುಂದುವರಿಯಿತು. ಆ್ಯಂಡ್ರೆ ಶುರಲ್ 69ನೇ ನಿಮಿಷ ಮತ್ತು 79ನೇ ನಿಮಿಷ ಕ್ರಮವಾಗಿ ಗೋಲು ಬಾರಿಸುವುದರೊಂದಿಗೆ ಜರ್ಮನಿ 7-0 ಗೋಲುಗಳಿಂದ ಭಾರಿ ಮುನ್ನಡೆ ಸಾಧಿಸಿತು. ಕೊನೆಯ 90ನೇ ನಿಮಿಷದಲ್ಲಿ ಆತಿಥೇಯ ತಂಡದ ಪರ ಆಸ್ಕರ್ ಗೋಲು ಗಳಿಸದೇ ಹೋಗಿದ್ದರೆ, ಬ್ರೆಜಿಲ್ ತೀರ ಅವಮಾನಕ್ಕೆ ಗುರಿಯಾಗಬೇಕಿತ್ತು.
ಜರ್ಮನಿ-ಬ್ರೆಜಿಲ್ ನಡುವೆ ರೋಚಕ ಹಣಾಹಣಿ ನಿರೀಕ್ಷಿಸಿ ಅಭಿಮಾನಿಗಳು ಆಸೆಯಿಂದ ಕ್ರೀಡಾಂಗಣದಲ್ಲಿ ತುಂಬಿ ತುಳುಕುತ್ತಿದ್ದರು. ಆದರೆ, ವಿರಾಮದ ವೇಳೆ ಸಮೀಪಿಸುತ್ತಿದ್ದಂತೆಯೇ ಬ್ರೆಜಿಲ್ ಅಭಿಮಾನಿಗಳು ತೀರ ದುಃಖಿತರಾಗಿ ಕ್ರೀಡಾಂಗಣದಿಂದ ಹೊರನಡೆಯಲಾರಂಭಿಸಿದರು. ಬ್ರೆಜಿಲ್ಗೆ ಇದು ತನ್ನ್ನ 100 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೋಲಾಗಿದೆ. ಸ್ಟಾರ್ ಆಟಗಾರ ನೇಮಾರ್ ಗಾಯಗೊಂಡು ಹೊರಗುಳಿದಿದ್ದು, ಅಮಾನತುಗೊಂಡಿರುವ ನಾಯಕ ಥಿಯಾಗೊ ಸಿಲ್ವಾ ಅನುಪಸ್ಥಿತಿ ಗಂಭೀರ ಪರಿಣಾಮ ಬೀರಿತು. ಜರ್ಮನಿ ಆಟಗಾರರು ಚುಟುಕಾದ, ಚುರುಕಿನ ಪಾಸಿಂಗ್ ಜಾಣ್ಮೆಯ ನಡೆ ತೋರುವ ಮೂಲಕ ಸುಲಭವಾಗಿಯೇ ಪಂದ್ಯ ವಶಕ್ಕೆ ಪಡೆದರು.
ಕ್ಲೋಸ್ ವಿಶ್ವದಾಖಲೆ
ಜರ್ಮನಿ ತಂಡದ ಮುನ್ಪಡೆ ಆಟಗಾರ ಮಿರೋಸ್ಲಾವ್ ಕ್ಲೋಸ್ ವಿಶ್ವದಾಖಲೆಯೊಂದಕ್ಕೆ ಭಾಜನರಾಗಿದ್ದಾರೆ. ಬ್ರೆಜಿಲ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕ್ಲೋಸ್ ಆಕರ್ಷಕ ಗೋಲೊಂದನ್ನು ಬಾರಿಸುವ ಮೂಲಕ ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಸಂಪಾದಿಸಿದ ದಾಖಲೆ ನಿರ್ಮಿಸಿದರು. ಅವರು ಒಟ್ಟು 16 ಗೋಲು ಸಂಪಾದಿಸುವ ಮೂಲಕ ಬ್ರೆಜಿಲ್ ದಂತಕತೆ ರೊನಾಲ್ಡೊ 15 ಗೋಲುಗಳ ವಿಶ್ವದಾಖಲೆ ಸಾಧನೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಪಂದ್ಯದ 23ನೇ ನಿಮಿಷದಲ್ಲಿ ಸಹ ಆಟಗಾರರು ನೀಡಿದ ಪಾಸ್ನಲ್ಲಿ ಕ್ಲೋಸ್ ತುಂಬ ಬುದ್ಧಿವಂತಿಕೆಯಿಂದ ಬ್ರೆಜಿಲ್ ಗೋಲ್ಕೀಪರ್ ಜೂಲಿಯೊ ಸೆಸಾರ್ ಅವರನ್ನು ವಂಚಿಸಿ ಚೆಂಡನ್ನು ಗುರಿ ಸೇರಿಸಿದರು. ಅಲ್ಲದೆ, ನಾಲ್ಕು ವಿಶ್ವಕಪ್ಗಳನ್ನು ಆಡಿದ ಏಕೈಕ ಆಟಗಾರ ಎಂಬ ಮತ್ತೊಂದು ದಾಖಲೆಗೂ ಕ್ಲೋಸ್ ಪಾತ್ರರಾಗಿದ್ದಾರೆ.
ಗೋಲು ವಿವರ
ಜರ್ಮನಿ-7
ಬ್ರೆಜಿಲ್-1
1 ಥಾಮಸ್ ಮುಲ್ಲರ್ 11ನೇ ನಿಮಿಷ
2 ಮಿರೋಸ್ಲಾವ್ ಕ್ಲೋಸ್ 23ನೇ ನಿಮಿಷ
3-4 ಟೋನಿ ಕ್ರೂಸ್ 24ನೇ ನಿಮಿಷ, 26ನೇ ನಿಮಿಷ
5 ಸಾಮಿ ಖೆಡೀರಾ 29ನೇ ನಿಮಿಷ
6-7 ಆ್ಯಂಡ್ರೆ ಶುರಲ್ 69ನೇ ನಿಮಿಷ, 79ನೇ ನಿಮಿಷ
ಬ್ರೆಜಿಲ್ ಆರೆಂಜ್-ಜರ್ಮನಿ ಜ್ಯೂಸರ್
ಆತಿಥೇಯ ಬ್ರೆಜಿಲ್ ಸೆಮಿಫೈನಲ್ ಪಂದ್ಯದಲ್ಲಿ ಅನುಭವಿಸಿದ ಸೋಲಿನ ಕಹಿಯಿಂದ ಹೊರಬರದೇ ಒದ್ದಾಡುತ್ತಿದೆ. ಆದರೆ, ಸಾಂಬಾ ನಾಡಿನ ತಂಡ ಜರ್ಮನಿ ವಿರುದ್ಧ ಸೋಲನುಭವಿಸಿದ ರೀತಿಯನ್ನು ಹಲವರು ತಮ್ಮದೇ ಆದ ಹಾಸ್ಯ ಪ್ರಜ್ಞೆಯಲ್ಲಿ ಛಾಯಾಚಿತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.
ಹಿಂಸಾಚಾರಕ್ಕೆ ತಿರುಗಿದ ಸೋಲಿನ ಕಹಿ
ವಿಶ್ವಕಪ್ ಗೆಲ್ಲುವ ಬ್ರೆಜಿಲ್ ಅಭಿಮಾನಿಗಳ ಕನಸನ್ನು ಜರ್ಮನಿ ಛಿದ್ರ ಮಾಡಿದೆ. ಆತಿಥೇಯ ತಂಡದ ಹೀನಾಯ ಸೋಲಿನ ದುಃಖವನ್ನು ತಾಳಲಾರದ ಅಭಿಮಾನಿಗಳು, ಹಿಂಸೆಗೆ ತಿರುಗಿದ್ದಾರೆ. ಅಭಿಮಾನಿಗಳು ಸಿಟ್ಟಿನಲ್ಲಿ ಹಚ್ಚಿದ ಬೆಂಕಿಗೆ ಬ್ರೆಜಿಲ್ನ ಸಾವೊ ಪೊಲೋದಲ್ಲಿ ಆಹುತಿಯಾಗಿರುವ ಬ್ರೆಜಿಲ್ನ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಲ್ಲದೆ, ಬ್ರೆಜಿಲ್ನ ಪ್ರಮುಖ ನಗರವಾದ ರಿಯೋ ಡಿ ಜನೈರೋ ಸೇರಿದಂತೆ ಹಲವಾರು ನಗರಗಳ ಬೀದಿಗಳಲ್ಲಿ ಹಿಂಸಾಚಾರ ಬುಗಿಲೆದ್ದಿದ್ದು, ಜನರಲ್ಲಿ ಭೀತಿ ಅವರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್ ಸರ್ಕಾರ, ಹಿಂಸಾಚಾರವನ್ನು ತಣ್ಣಗಾಗಿಸಲು ಸಾಕಷ್ಟು ಪ್ರಮಾಣದ ಭದ್ರತಾ ಪಡೆಯನ್ನು ನಿಯೋಜಿಸಿದೆ.
ವಿಶ್ವಕಪ್ನಲ್ಲಿ ಆತಿಥೇಯ ತಂಡ ಸೋತಿರುವುದು ಬ್ರೆಜಿಲ್ ಪ್ರಜೆಗಳಂತೆ ನನಗೂ ದುಃಖ ಉಂಟುಮಾಡಿದೆ. ಇದಕ್ಕಾಗಿ ನಾನು ಅಭಿಮಾನಿಗಳು ಹಾಗೂ ನಮ್ಮ ಆಟಗಾರರು ಸೇರಿದಂತೆ ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ.
-ಡಿಲ್ಮಾ ರೌಸೆಫ್
ಬ್ರೆಜಿಲ್ ಅಧ್ಯಕ್ಷೆ
ನನ್ನ ಜೀವನದಲ್ಲೇ ಇದು ಕೆಟ್ಟ ದಿನ. ನಾನು ಕೋಚ್ ಆಗಿದ್ದ ತಂಡ 7-1 ಗೋಲುಗಳ ಅಂತರದಿಂದ ಸೋಲನುಭವಿಸಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಬಲಿಷ್ಠ ತಂಡದ ತೀಕ್ಷ್ಣ ಕೌಶಲದ ಎದುರು ನಾವು ಕೈಚೆಲ್ಲಿದೆವು.
-ಲೂಯಿಜ್ ಫೆಲಿಪ್ ಸ್ಕೋಲಾರಿ
ಬ್ರೆಜಿಲ್ ತಂಡದ ಕೋಚ್
ಗಾಯಾಳು ನೇಮಾರ್ ತಂಡದಲ್ಲಿ ಇಲ್ಲ ಎಂಬ ಭಾವನೆಯಲ್ಲಿ ಬ್ರೆಜಿಲ್ ತಂಡ ಪಂದ್ಯದಲ್ಲಿ ತನ್ನ ಸಂಯಮ ಕಳೆದುಕೊಂಡಿತು. ಹೀಗಾಗಿ ಸಮರ್ಥವಾಗಿದ್ದ ನಮ್ಮ ತಂಡಕ್ಕೆ ಜಯ ಸಾಧಿಸಲು ಸುಲಭವಾಗಿ ಪರಿಣಮಿಸಿತು.
-ಜೋಕಿಮ್ ಲೋ, ಜರ್ಮನಿ ತಂಡದ ಕೋಚ್
ಬ್ರೆಜಿಲ್ v/s ಜರ್ಮನಿ
18 ಒಟ್ಟು ಪ್ರಯತ್ನ 14
13 ಗುರಿಯತ್ತ ಪ್ರಯತ್ನ 12
11 ತಪ್ಪುಗಳು 14
51ರ್ ಚೆಂಡಿನ ನಿಯಂತ್ರಣ 49ರ್
7 ಕಾರ್ನರ್ 5
5 ರಕ್ಷಿಸಿಕೊಂಡಿದ್ದು 12
3 ಆಫ್ಸೈಡ್ 0
1 ಹಳದಿ ಕಾರ್ಡ್ 0