ಅರ್ಹತಾ ಸುತ್ತಿನಲ್ಲಿ ಆಕರ್ಷಕ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದ ಮಾಜಿ ಚಾಂಪಿಯನ್ ಫ್ರಾನ್ಸ್ ತಂಡ, ಲೀಗ್ ಹಂತದಲ್ಲಿ ಮಿಂಚಲು ಎದುರು ನೋಡುತ್ತಿದೆ. ಸಹಜವಾಗಿ ಅದು 'ಈ' ಗುಂಪಿನಲ್ಲಿ ನೆಚ್ಚಿನ ತಂಡ ಎನಿಸಿದೆ. ಆದರೆ, ಬಲಿಷ್ಠ ತಂಡ ಎನಿಸಿಕೊಂಡಿರುವ ಸ್ವಿಜರ್ಲೆಂಡ್ ಇದೇ ಗುಂಪಿನಲ್ಲಿದ್ದು, ತನ್ನ ಇತ್ತೀಚಿನ ಉತ್ತಮ ಸಾಧನೆ ಮುಂದುವರಿಸಿ ಕೊಂಡು ಹೋಗುವ ಹುಮ್ಮಸ್ಸಿನಲ್ಲಿದೆ. 2014ರ ವಿಶ್ವಕಪ್ನಲ್ಲಿ ತನ್ನ ಶಕ್ತಿ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲು ಕಾದು ಕುಳಿತಿದೆ. ಈ ಗುಂಪಿನಲ್ಲಿರುವ ಇನ್ನೆರಡು ತಂಡಗಳಾದ ಹೋಂಡುರಾಸ್ ಮತ್ತು ಈಕ್ವೆಡಾರ್ ಸಹ ಈ ಗುಂಪಿನಲ್ಲಿ ಅತ್ಯುತ್ತಮ ಹೋರಾಟ ನಡೆಸಲು ಎದುರು ನೋಡುತ್ತಿವೆ. ಫ್ರಾನ್ಸ್ ಮಾಜಿ ಚಾಂಪಿಯನ್ ಆಗಿದ್ದರೂ, 16ನೇ ರ್ಯಾಂಕಿಂಗ್ನಲ್ಲಿದೆ. ಸ್ವಿಜರ್ಲೆಂಡ್ 8ನೇ ಸ್ಥಾನದಲ್ಲಿದ್ದು, ಫ್ರಾನ್ಸ್ ಎದೆಯಲ್ಲಿ ತಳಮಳ ಉಂಟುಮಾಡಿದೆ. ಹಾಗಾಗಿ ಫ್ರಾನ್ಸ್ ತನ್ನ ಗುಂಪಿನಲ್ಲಿ ಹೆಚ್ಚು ಎಚ್ಚರದಿಂದಿರಬೇಕಾಗಿದೆ.
ಇ ಗುಂಪು
ಫ್ರಾನ್ಸ್
ಕೋಚ್: ಡಿಡೀಯರ್ ಡಿಶಾಂಪ್ಸ್
ಸ್ಟಾರ್ ಆಟಗಾರ: ಫ್ರ್ಯಾಂಕ್ ರೈಬೆರಿ
ಶ್ರೇಷ್ಠ ಪ್ರದರ್ಶನ: 1998ರ ಚಾಂಪಿಯನ್-ಅರ್ಹತಾ ಸುತ್ತಿನ ಮೊದಲ ಹಂತದ ಪ್ಲೇ ಆಫ್ನಲ್ಲಿ ಉಕ್ರೇನ್ ಸೋಲಿಸುವ ಮೂಲಕ ಫ್ರಾನ್ಸ್ ವಿಶ್ವಕಪ್ಗೆ ಪ್ರವೇಶಿಸಿದೆ. ಯೋಹಾನ್ ಕಾಬೇ ಮತ್ತು ಮ್ಯಾಥ್ಯೂ ವಾಲ್ಬೇನಾ ಅವರಂತಹ ವಿಶ್ವದರ್ಜೆಯ ಆಟಗಾರರನ್ನು ಹೊಂದಿರುವ ಫ್ರಾನ್ಸ್ ಪಂದ್ಯಾವಳಿಯಲ್ಲಿ ದಿಟ್ಟ ಪ್ರದರ್ಶನ ನೀಡಲು ಕಾರ್ಯತಂತ್ರ ರೂಪಿಸಿಕೊಂಡಿದೆ.
ಸ್ವಿಜರ್ಲೆಂಡ್
ಕೋಚ್: ಓಟ್ಮಾರ್ ಹಿಜ್ಫೆಲ್ಡ್
ಸ್ಟಾರ್ ಆಟಗಾರ: ಜೆರ್ಡಾನ್ ಶಾಕಿರಿ
ಶ್ರೇಷ್ಠ ಪ್ರದರ್ಶನ: 1934, 1938, 1954 ಕ್ವಾರ್ಟರ್ಫೈನಲ್-ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ 32 ತಂಡಗಳ ಪೈಕಿ ಹಿಜ್ಫೆಲ್ಡ್ ಅತಿ ಹೆಚ್ಚಿನ ಅನುಭವ ಹೊಂದಿದ ಕೋಚ್ ಎನಿಸಿದ್ದಾರೆ. -ತಂಡ ಸಹ ಹಲವಾರು ಸ್ಟಾರ್ ಆಟಗಾರರನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಸ್ವಿಜರ್ಲೆಂಡ್ ಉತ್ತಮ ಪ್ರದರ್ಶನ ನೀಡಿದೆ. ಬೇರ್ನ್ ಮ್ಯುನಿಚ್ನ ಶಾಕಿರಿ ಅವರು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ, ಹೆಚ್ಚಿನ ಯುವ ಆಟಗಾರರಿಂದ ಕೂಡಿರುವ ತಂಡ ಹಿರಿಯರ ಪಂದ್ಯಾವಳಿಯಲ್ಲಿ ಹೋರಾಟ ನಡೆಸಲು ಕೊಂಚ ಕಠಿಣವಾಗಬಹುದು.
ಹೋಂಡುರಾಸ್
ಕೋಚ್:
ಲೂಯಿಸ್ ಫೆರ್ನಾಂಡೋಸೂರೆಜ್
ಸ್ಟಾರ್ ಆಟಗಾರ: ವಿಲ್ಸನ್ ಪಲಾಸಿಯೋಸ್
ಶ್ರೇಷ್ಠ ಪ್ರದರ್ಶನ:
1982, 2010ರಲ್ಲಿ ಗುಂಪು ಹಂತ ಪ್ರವೇಶ-ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಳೆದ ವಿಶ್ವಕಪ್ ನಂತರ ಹೋಂಡುರಾಸ್ ತನ್ನ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿರುವುದು ತಂಡದ ವಿಶ್ವಾಸವನ್ನು ವೃದ್ಧಿಸಿದೆ. ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಜಮೈಕಾ ವಿರುದ್ಧ 2-2 ಡ್ರಾ ಸಾಧಿಸಿ ಗೌರವ ಕಾಪಾಡಿಕೊಂಡಿತು.
ಈಕ್ವೆಡಾರ್
ಕೋಚ್: ರೀನಾಲ್ಡೋ ರುಯೇಡಾ
ಸ್ಟಾರ್ ಆಟಗಾರ:
ಅಂಟೋನಿಯೋ ವಾಲೆನ್ಸಿಯಾ
ಶ್ರೇಷ್ಠ ಪ್ರದರ್ಶನ: 2006ರಲ್ಲಿ ಅಂತಿಮ 16ರ ಘಟ್ಟ ಪ್ರವೇಶ-ಈಕ್ವೆಡಾರ್ ತಂಡ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಚಿಲಿ ವಿರುದ್ಧ ಸೋಲನುಭವಿಸಿತ್ತು. ಆದರೆ, ಗೋಲು ವ್ಯತ್ಯಾಸದ ಮೇಲೆ ಈಕ್ವೆಡಾರ್ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ವಾಲೆನ್ಸಿಯಾ ಕ್ರಿಸ್ಟಿಯಾನ್ ನೊಬೊ ಹಾಗೂ ಫೆಲಿಪೆ ಸೈಸೆಡೋ ಅವರಂತಹ ಆಟಗಾರರು ಇತ್ತೀಚೆಗೆ ತಂಡಕ್ಕೆ ಯಶಸ್ಸು ತಂದುಕೊಡುತ್ತಿದ್ದಾರೆ.
ಬ್ರೆಜಿಲ್-ಅರ್ಜೆಂಟೀನಾ ಮಧ್ಯೆ ಫೈನಲ್
ಬ್ರೆಜಿಲ್ ಮತ್ತು ಅರ್ಜೆಂಟೀನಾ ಈ ಬಾರಿಯ ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ನಾವು ಹಾಕಿರುವ ಲೆಕ್ಕಾಚಾರದಂತೆ ಎಲ್ಲವೂ ನಡೆದರೆ, ಈ ಎರಡೂ ತಂಡಗಳನ್ನು ಜುಲೈ 13ರ ಫೈನಲ್ನಲ್ಲಿ ನೋಡಬಹುದು. ಇದು ನಮ್ಮ ಊಹೆಯಾಗಿದ್ದರೂ ಕೂಡ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ತಂಡಗಳ ಬಗ್ಗೆ ವಿಶ್ಲೇಷಣೆ ಮಾಡಿದಾಗ ಈ ಸಾಧ್ಯತೆ ತಿಳಿಯುತ್ತದೆ. ದಕ್ಷಿಣ ಅಮೆರಿಕದ ಈ ಎರಡೂ ತಂಡಗಳು ಅತ್ಯುತ್ತಮ ಆಟಗಾರರನ್ನು ಹೊಂದಿದ್ದು, ಹೆಚ್ಚು ಗುಣಮಟ್ಟದಿಂದ ಕೂಡಿರುವ ತಂಡಗಳಾಗಿವೆ.
-ಲೂಯಿಜ್ ಫೆಲಿಪ್ ಸ್ಕೊಲಾರಿ, ಬ್ರೆಜಿಲ್ ತಂಡದ ಕೋಚ್