ಎರಡು ಬಾರಿಯ ಮಾಜಿ ಚಾಂಪಿಯನ್ ಅರ್ಜೆಂಟೀನಾ ತಂಡ 'ಎಫ್' ಗುಂಪಿನಲ್ಲಿ ಬಲಿಷ್ಠ ತಂಡ ಎನಿಸಿದೆ. ವಿಶ್ವದ ಅಗ್ರ ಸ್ಟಾರ್ ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಅದು ಈ ಬಾರಿ ಪ್ರಶಸ್ತಿ ಗೆಲ್ಲುವವರ ಸಾಲಿನ ಮುಂಚೂಣಿಗಳಲ್ಲಿ ಒಂದಾಗಿದೆ. ಇನ್ನು ಇದೇ ಮೊದಲ ಬಾರಿಗೆ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿರುವ ಬೋಸ್ನಿಯಾ ಆ್ಯಂಡ್ ಹೆರ್ಜೆಗೋವಿನಾ ತಂಡ 2014ರ ತನ್ನ ಚೊಚ್ಚಲ ವಿಶ್ವಕಪ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ಮೂಲಕ ಹೊಸ ಇತಿಹಾಸ ಬರೆಯಲು ಎದುರು ನೋಡುತ್ತಿದೆ. ಇನ್ನು ಇರಾನ್ ತಂಡ ಇದುವರೆಗೂ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೂರು ಬಾರಿ ಭಾಗವಹಿಸಿದ್ದರೂ, ಗುಂಪು ಹಂತ ದಾಟಿ ಹೋಗುವಲ್ಲಿ ವಿಫಲವಾಗಿದೆ. ಹೀಗಾಗಿ ಸ್ಟಾರ್ ಆಟಗಾರರನ್ನು ಹೊಂದಿರುವ ಅರ್ಜೆಂಟೀನಾ ಹೆಚ್ಚು ಗಮನ ಸೆಳೆದಿದೆ. ಮೆಸ್ಸಿ ಸೇರಿದಂತೆ, ಆ್ಯಂಜೆಲ್ ಡಿ ಮಾರಿಯಾ, ಸೆರ್ಜಿಯೋ ಆಗುರೋ ಹಾಗೂ ಗೊಂಜಾಲೊ ಹಿಗುಯನ್ ಮೇಲೆ ತಂಡ ಹೆಚ್ಚಿನ ಅವಲಂಬನೆಯಾಗಿದೆ. ಉಳಿದ ತಂಡಗಳೂ ಅಚ್ಚರಿ ಫಲಿತಾಂಶ ನೀಡಲೂಬಹುದು.
ಎಫ್ ಗುಂಪು
ನೈಜೀರಿಯಾ:
ಕೋಚ್: ಸ್ಟಿಫನ್ ಕೇಶಿ
ಸ್ಟಾರ್ ಆಟಗಾರ: ವಿಕ್ಟರ್ ಮೊಸೆಸ್
ಶ್ರೇಷ್ಠ ಪ್ರದರ್ಶನ: 1994, 1998ರಲ್ಲಿ ಅಂತಿಮ 16ರ ಘಟ್ಟ ಪ್ರವೇಶ.
ಕೇವಲ 22 ವರ್ಷದ ಆಟಗಾರ ಮೊಸೆಸ್ ಇರಾನ್ ತಂಡದ ಪ್ರಮುಖ ತಾರೆ ಎನಿಸಿದ್ದಾರೆ. ಸೂಪರ್ ಈಗಲ್ಸ್ ಪರ 2012ರಲ್ಲಷ್ಟೇ ಮೊಸೆಸ್ ಪದಾರ್ಪಣೆ ಮಾಡಿದ್ದಾರೆ. ಆದರೆ, ಆಗಿನಿಂದಲೇ ಅವರು ಅದ್ಭುತ ಪ್ರದರ್ಶನ ನೀಡುತ್ತ ಮುನ್ನಡೆದಿದ್ದಾರೆ. ಗೋಲ್ಕೀಪರ್ ಮತ್ತು ನಾಯಕ ವಿನ್ಸೆಂಟ್ ಏನಿಯಾಮಾ ಸಹ ತಂಡಕ್ಕೆ ಆಸರೆಯಾಗಲಿದ್ದಾರೆ. ಚೆಲ್ಸಿಯ ಜಾನ್ ಓಬಿ ಮೈಕೆಲ್ ಅವರು ಮಿಡ್ಫೀಲ್ಡ್ನಲ್ಲಿ ತಂಡದ ಪರ ಸಮರ್ಥ ಹೋರಾಟ ನೀಡಲಿದ್ದಾರೆ.
ಇರಾನ್
ಕೋಚ್: ಕಾರ್ಲೋಸ್ ಕ್ವಿರೋಜ್
ಸ್ಟಾರ್ ಆಟಗಾರ: ಜಾವದ್ ನೆಕೊನಮ್
ಶ್ರೇಷ್ಠ ಪ್ರದರ್ಶನ: 1978, 1998, 2006 ಗುಂಪು ಹಂತ ಪ್ರವೇಶ. ಅರ್ಹತಾ ಸುತ್ತಿನಲ್ಲಿ ದಕ್ಷಿಣ ಕೊರಿಯಾಕ್ಕಿಂತ ಮೇಲಿನ ಸ್ಥಾನ ಪಡೆಯುವ ಮೂಲಕ, ಅಗ್ರಸ್ಥಾನ ಪಡೆದುಕೊಂಡಿತ್ತು.-ಆದರೆ, ಸಮರ್ಥ ಆಟಗಾರರನ್ನು ಹೊಂದದಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಇರಾನ್ ತಂಡ ಲೀಗ್ ಹಂತ ದಾಟಿ ಮೇಲೇರುವ ಅನುಮಾನ ಕಾಡುತ್ತಿದೆ.
ಬೋಸ್ನಿಯಾ ಮತ್ತು ಹೆರ್ಜಗೋವಿನಾ
ಕೋಚ್: ಸಾಫೆಟ್ ಸುಸಿಕ್
ಸ್ಟಾರ್ ಆಟಗಾರ: ಎಡಿನ್ ಜೆಕೊ
ಶ್ರೇಷ್ಠ ಪ್ರದರ್ಶನ: ಇದೇ ಮೊದಲ ಬಾರಿಗೆ ಅರ್ಹತೆ
90ರ ದಶಕದಲ್ಲಷ್ಟೇ ಸ್ವತಂತ್ರ ಪಡೆದುಕೊಂಡಿರುವ ಬೋಸ್ನಿಯಾ ಇದೇ ಮೊದಲ ಬಾರಿಗೆ ವಿಶ್ವದ ಪ್ರತಿಷ್ಠಿತ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದೆ. ಚಾಂಪಿಯನ್ಸ್ ಲೀಗ್ನಲ್ಲಿ ಆಡಿದ ಅನುಭವವನ್ನು ತಂಡ ಹೊಂದಿದೆ. ಮ್ಯಾಂಚೆಸ್ಟೆರ್ ಸಿಟಿ ಸ್ಟ್ರೈಕರ್ ಜೆಕೊ ಮತ್ತು ಮಿಡ್ಫೀಲ್ಡರ್ಗಳಾದ ಮಿರಾಲೆಮ್ ಜಾನಿಕ್, ನಾಯಕ ಎಮಿರ್ ಸ್ಪಾಹಿಕ್ ತಂಡದ ಶಕ್ತಿಯಾಗಿದ್ದಾರೆ. ಅಸ್ಮೀರ್ ಬೆಗೋವಿಚ್ ಅವರು ವಿಶ್ವದರ್ಜೆಯ ಗೋಲ್ಕೀಪರ್ ಆಗಿದ್ದಾರೆ.
ಅರ್ಜೆಂಟೀನಾ
ಕೋಚ್: ಅಲೆಜಾಂಡ್ರೊ ಸಬೆಲ್ಲಾ
ಸ್ಟಾರ್ ಆಟಗಾರ: ಲಯೋನೆಲ್ ಮೆಸ್ಸಿ
ಶ್ರೇಷ್ಠ ಪ್ರದರ್ಶನ: 1978, 1986ರಲ್ಲಿ ಚಾಂಪಿಯನ್
ವಿಶ್ವದ ಪ್ರಮುಖ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿರುವ ಬಾರ್ಸಿಲೋನಾ ಕ್ಲಬ್ನ ಲಯೋನೆಲ್ ಮೆಸ್ಸಿ ಬರುವ ಬೇಸಿಗೆಗೆ 27ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಹೀಗಾಗಿ ಅರ್ಜೆಂಟೀನಾ ತಂಡ ಗೆದ್ದರೆ, ಮೆಸ್ಸಿ ಪಾಲಿಗೆ ವೈಭವದ ಇತಿಹಾಸವಾಗಲಿದೆ. ಪಂದ್ಯಾವಳಿಯಲ್ಲಿ ಸಮರ್ಥ ಹೋರಾಟದ ತಂತ್ರ ಹೆಣೆಯಲು ತಂಡದ ಕೋಚ್ ಸೆಬೆಲ್ಲಾಗೆ ಹಲವಾರು ಅವಕಾಶಗಳಿವೆ. ಆದರೆ, ವಿಶ್ವದರ್ಜೆಯ ತಂಡ ಎನಿಸಿರುವ ಅರ್ಜೆಂಟೀನಾದ ರಕ್ಷಣಾ ವಿಭಾಗ ಕೊಂಚ ದುರ್ಬಲವಾಗಿದೆ ಎನ್ನಲಾಗುತ್ತಿದೆ. ಈ ವಿಭಾಗ ಸುಧಾರಣೆಗೊಂಡಲ್ಲಿ ಅರ್ಜೆಂಟೀನಾಗೆ ಮೂರನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವ ಸಂದರ್ಭ ಬರಬಹುದು.