ರೆಸಿಫೆ: ಆರಂಭದಲ್ಲಿ ಶೂರತ್ವ ಪ್ರದರ್ಶಿಸಿದ್ದ ಜಪಾನ್ ಆಟಗಾರರು ಉತ್ತರಾರ್ಧದಲ್ಲಿ ಎದುರಾಳಿಯ ಹೋರಾಟದ ಮುಂದೆ ಶಕ್ತಿ ಕಳೆದುಕೊಂಡು ವಿಶ್ವಕಪ್ನ ಮೊದಲ ಅಭಿಯಾನದಲ್ಲಿ ಸೋಲು ಮೈಮೇಲೆ ಎಳೆದುಕೊಂಡಿದೆ.
ಇಲ್ಲಿನ ಎರೆನಾ ಪೆರ್ನಾಂಬುಕೊದಲ್ಲಿ ಭಾನುವಾರ ಬೆಳಗ್ಗೆ ನಡೆದ 'ಸಿ' ಗುಂಪಿನ ಪಂದ್ಯದಲ್ಲಿ ಜಪಾನ್ ತಂಡ 1-2 ಗೋಲುಗಳಿಂದ ಐವರಿ ಕೋಸ್ಟ ಮುಂದೆ ಮಂಡಿಯೂರಿತು.
ಎರಡನೇ ಅವಧಿಯ ಆಟದಲ್ಲಿ ಕೇವಲ ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲು ದಾಖಲಿಸಿದ ಐವರಿ ಕೋಸ್ಟ ತಂಡ ಮೊದಲ ಪಂದ್ಯದಲ್ಲೇ ಜಯಗಳಿಸಿ ಶುಭಾರಂಭ ಮಾಡಿತು.
ಪ್ರಥಮಾರ್ಧದ 14ನೇ ನಿಮಿಷದಲ್ಲಿ ಜಪಾನ್ ತಂಡದ ಪ್ರಮುಖ ಆಟಗಾರ ಕೇಸುಕೆ ಹೋಂಡಾ ಗೋಲು ಬಾರಿಸಿದರು. ಆರಂಭದ ಈ ಹಿನ್ನಡೆಯಿಂದ ಎಚ್ಚೆತ್ತುಕೊಂಡ ಐವರಿ ಕೋಸ್ಟ ಆಟಗಾರರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಲು ಮುಂದಾದರು.
ಇದೇ ವೇಳೆ ತಂಡದ ಸ್ಟಾರ್ ಆಟಗಾರ ಡೀಡಿಯರ್ ಡ್ರೋಗ್ಬಾ ಬದಲಿ ಆಟಗಾರರಾಗಿ ಮೈದಾನ ಪ್ರವೇಶಿಸುತ್ತಿದ್ದಂತೆಯೇ ಐವರಿ ಕೋಸ್ಟದ ಅದೃಷ್ಟ ಖುಲಾಯಿಸಿತು.
ವಿರಾಮದ ವೇಳೆಗೆ 0-1 ಗೋಲಿನ ಹಿನ್ನಡೆ ಅನುಭವಿಸಿದ್ದ ಕೋಸ್ಟ ಪಡೆ ಎರಡನೇ ಅವಧಿಯ ಆಟ ಪ್ರಾರಂಭವಾಗುತ್ತಿದ್ದಂತೆಯೇ ಅವಕಾಶಗಳನ್ನು ಕಂಡುಕೊಳ್ಳಲಾರಂಭಿಸಿತು. ಪರಿಣಾಮವಾಗಿ ಪಂದ್ಯದ 64 ಮತ್ತು 66ನೇ ನಿಮಿಷಗಳ ಆಟದಲ್ಲಿ ದೊರೆತ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ವಿಲ್ಫ್ರೆಡ್ ಬೋನಿ ಮತ್ತು ಗೆರ್ವಿನೊ ಕ್ರಮವಾಗಿ ಈ ಗೋಲುಗಳನ್ನು ಬಾರಿಸಿ ಐವರಿ ಕೋಸ್ಟ ಪಡೆಯನ್ನು ಗೆಲುವಿನತ್ತ ಮುಖಮಾಡಿ ನಿಲ್ಲಿಸಿದರು.
ಈ ಮಧ್ಯೆ ವರುಣನ ಪ್ರವೇಶದೊಂದಿಗೆ ಪಂದ್ಯದ ಕಾವು ಮತ್ತಷ್ಟು ಹೆಚ್ಚಿತು. ಉಭಯ ಆಟಗಾರರು ಜಿದ್ದಾಜಿದ್ದಿನ ಪೈಪೋಟಿಗೆ ಅಣಿಯಾಗಿ ನಾ ಮುಂದು-ನೀ ಮುಂದು ಎಂಬ ರೀತಿಯಲ್ಲಿ ಹೋರಾಟ ನಡೆಸಿದರು. ಆದರೆ, ಅಂತಿಮವಾಗಿ ಐವರಿ ಕೋಸ್ಟ ಗೆಲವಿನ ಸಂಭ್ರಮಾಚರಣೆಗೆ ತಡೆಹಾಕಲು ಜಪಾನ್ ಪಡೆಗೆ ಸಾಧ್ಯವಾಗಲೇ ಇಲ್ಲ.