ರಿಯೊ ಡಿ ಜನೈರೊ: ಇಡೀ ವಿಶ್ವವೇ ತನ್ನ ಮೇಲಿಟ್ಟ ನಂಬಿಕೆ, ವಿಶ್ವಾಸವನ್ನು ಅರ್ಜೆಂಟೀನಾ ಆಟಗಾರ ಲಯೊನೆಲ್ ಮೆಸ್ಸಿ ಹುಸಿ ಮಾಡಲಿಲ್ಲ. ಬದಲಾಗಿ ಎಲ್ಲರ ನಿರೀಕ್ಷೆಯಂತೆ ಅಭೂತಪೂರ್ವ ಗೋಲೊಂದನ್ನು ಬಾರಿಸುವ ಮೂಲಕ ಫೀಫಾ 2014 ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅರ್ಜೆಂಟೀನಾದ ಯಶಸ್ವಿ ಅಭಿಯಾನಕ್ಕೆ ಕಾರಣವಾಗಿದ್ದಾರೆ.
ಪುನರ್ನವೀಕರಣಗೊಂಡಿರುವ ಎಸ್ಟಾಡಿಯೊ ಮಾರಕಾನಾ ಕ್ರೀಡಾಂಗಣದಲ್ಲಿ ಸೋಮವಾರ ಬೆಳಗ್ಗೆ ನಡೆದ 'ಎಫ್' ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರರು 2-1 ಗೋಲುಗಳಿಂದ ಬೋಸ್ನಿಯಾ-ಹರ್ಜಗೋವಿನಾ ತಂಡದ ವಿರುದ್ಧ ಜಯಭೇರಿ ಬಾರಿಸಿ ಶುಭಾರಂಭ ಮಾಡಿದ್ದಾರೆ.
ಸುಮಾರು 78,800 ಸಾಮರ್ಥ್ಯದ ಕ್ರೀಡಾಂಗಣದಲ್ಲಿ ನಡೆದ ಕುತೂಹಲದಾಯಕವಾಗಿದ್ದ ಈ ಪಂದ್ಯದಲ್ಲಿ ಮೆಸ್ಸಿ ಮೇಲೆ ಅಪಾರ ನಂಬಿಕೆ ಇಡಲಾಗಿತ್ತು. ಅದಕ್ಕೆ ತಕ್ಕಂತೆ ಮೆಸ್ಸಿ ಕೂಡ ಮಿಂಚುವುದರೊಂದಿಗೆ ಗಮನ ಸೆಳೆದರು.
ಪಂದ್ಯದ 65ನೇ ನಿಮಿಷದಲ್ಲಿ ಗೋಂಜಾಲೊ ಹಿಗ್ಯುಯೇನ್ ಜೊತೆಗೆ ಚೆಂಡನ್ನು ಅತ್ತಿಂದಿತ್ತ ಪಾಸ್ ಮಾಡಿಕೊಳ್ಳುತ್ತ ಅಂಕಣದ ಎಡಭಾಗದಿಂದ ಬೋಸ್ನಿಯಾ-ಹರ್ಜಗೋವಿನಾ ಕೋಟೆಯೊಳಗೆ ನುಗ್ಗಿಬಂದ ಮೆಸ್ಸಿ ಎದುರಾಳಿ ತಂಡದ ರಕ್ಷಣಾ ಆಟಗಾರರು ಮತ್ತು ಗೋಲ್ಕೀಪರ್ರನ್ನು ವಂಚಿಸಿ ಗುರಿ ಸೇರುವಲ್ಲಿ ಯಶಸ್ವಿಯಾದರು. ಆ ಮೂಲಕ ತಂಡಕ್ಕೆ 2-0 ಗೋಲುಗಳ ಮಹತ್ವದ ಮುನ್ನಡೆ ತಂದುಕೊಟ್ಟು ತಮ್ಮ ತಂಡಕ್ಕೆ ಗೆಲುವನ್ನು ಬಹುತೇಕ ಖಚಿತಪಡಿಸಿದರು.
ಇದರೊಂದಿಗೆ ಬಾರ್ಸಿಲೋನಾ ಕ್ಲಬ್ನ ಸ್ಟಾರ್ ಆಟಗಾರ 26ರ ಲಯೊನೆಲ್ ಮೆಸ್ಸಿ ಎಂಟು ವರ್ಷಗಳ ನಂತರ ವಿಶ್ವಕಪ್ನಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದ ಸಾಧನೆ ಮಾಡಿದರು. ಈ ಮುನ್ನ ಅವರು 2006 ವಿಶ್ವಕಪ್ನಲ್ಲಿ ಸರ್ಬಿಯಾ ಮಾಂಟೆನೆಗ್ರೊ ವಿರುದ್ಧ ತಮ್ಮ ಮೊದಲ ಗೋಲು ದಾಖಲಿಸಿದ್ದರು.
ಇದಕ್ಕೂ ಮುನ್ನ ಅರ್ಜೆಂಟೀನಾ ತಂಡಕ್ಕೆ ಪಂದ್ಯದ ಆರಂಭದಲ್ಲೇ ಎದುರಾಳಿಯ ಕೃಪಕಟಾಕ್ಷದಿಂದ ಪುಕ್ಕಟೆ ಗೋಲೊಂದು ತನ್ನ ಬುಟ್ಟಿಗೆ ಬಂದು ಬಿದ್ದಿತು. ಆಟ ಪ್ರಾರಂಭವಾಗಿ ಮೂರು ನಿಮಿಷ ಕಳೆಯುವಷ್ಟರಲ್ಲಿ ಅರ್ಜೆಂಟೀನಾಗೆ ಫ್ರೀಕಿಕ್ ಅವಕಾಶ ಲಭಿಸಿತು. ಆಗ ಅರ್ಜೆಂಟೀನಾದ ರಕ್ಷಣಾ ಆಟಗಾರ ಮಾರ್ಕೋಸ್ ರೋಸೊ ಅವರು ಫ್ರೀಕಿಕ್ ಅವಕಾಶದಲ್ಲಿ ಚೆಂಡನ್ನು ರಭಸವಾಗಿ ಗುರಿಯತ್ತ ಒದ್ದರು. ಈ ಹಂತದಲ್ಲಿ ಬೋಸ್ನಿಯಾ-ಹರ್ಜಗೋವಿನಾ ತಂಡದ ರಕ್ಷಣಾ ಆಟಗಾರ ಸೀಡ್ ಕೋಲಾಸಿನಾಕ್ ಈ ಯತ್ನವನ್ನು ವಿಫಲಗೊಳಿಸುವ ಪ್ರಯತ್ನ ಮಾಡಿದರು. ಆದರೆ, ಚೆಂಡು ಅವರ ಪಾದಕ್ಕೆ ಬೋಸ್ನಿಯಾ ಗೋಲ್ಕೀಪರ್ ಕೈಗೆ ಸಿಗದಂತೆ ಗೋಲಿನ ಬಲೆಯೊಳಕ್ಕೆ ನುಸುಳುವುದರೊಂದಿಗೆ ಅರ್ಜೆಂಟೀನಾ ಖಾತೆಗೆ ಒಂದು ಗೋಲು ಸೇರಿಕು. ಕೋಲಾಸಿನಾಕ್ರ ಸ್ವಯಂಕೃತ ಅಪರಾಧದ ಪರಿಣಾಮವಾಗಿ ಅರ್ಜೆಂಟೀನಾ ಶುರುವಿನಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಲು ಅನುಕೂಲವಾಯಿತು.
ಮೊದಲ ಅವಧಿಯಲ್ಲಿ ಕೇವಲ 1-0 ಮುನ್ನಡೆ ಸಾಧಿಸಿದ್ದ ಮಾಜಿ ಚಾಂಪಿಯನ್ನರು ಎರಡನೇ ಅವಧಿಯ ಆಟದಲ್ಲಿ ಮತ್ತೆ ತಮ್ಮ ಪ್ರಭುತ್ವ ಮೆರೆಯಲಾರಂಭಿಸಿದರು. ಪರಿಣಾಮವಾಗಿ ಉತ್ತರಾರ್ಧದ ಆಟ 10 ನಿಮಿಷ ಕಳೆಯುವಷ್ಟರಲ್ಲಿ ಟೂರ್ನಿಯಲ್ಲೇ ಕೇಂದ್ರಬಿಂದು ಆಟಗಾರರಾಗಿರುವ ಲಯೊನೆಲ್ ಮೆಸ್ಸಿ ಭರ್ಜರಿ ಗೋಲು ಬಾರಿಸಿ ಅರ್ಜೆಂಟೀನಾವನ್ನು ಗೆಲವಿನತ್ತ ಮುಖಮಾಡಿ ನಿಲ್ಲಿಸಿದರು.
ಬಳಿಕ ಆಟ ಮುಗಿಯಲು ಕೇವಲ ನಿಮಿಷಗಳಿದ್ದಾಗ ಬೋಸ್ನಿಯಾ ಕೂಡ ಅರ್ಜೆಂಟೀನಾಗೆ ತಿರುಗಿಬಿದ್ದಿತು. ವೇದಾದ್ ಇಬಿಸೆವಿಚ್ ಅವರು ಆಕರ್ಷಕ ಗೋಲು ಬಾರಿಸಿ ತಮ್ಮ ತಂಡದ ಹಿನ್ನಡೆಯನ್ನು 2-1ಕ್ಕೆ ತಗ್ಗಿಸಿದರು. ಆದರೆ ಕನಿಷ್ಠ ಡ್ರಾ ಫಲಿತಾಂಶ ಪಡೆಯಲು ಅಗತ್ಯವಿದ್ದ ಮತ್ತೊಂದು ಗೋಲುಗಳಿಸಲು ಬೋಸ್ನಿಯಾ ಆಟಗಾರರು ನಡೆಸಿದ ಹೋರಾಟಕ್ಕೆ ಫಲ ದೊರೆಯಲಿಲ್ಲ.
ಇದೇ ಮೊದಲ ಬಾರಿಗೆ ವಿಶ್ವಕಪ್ ರಂಗ ಪ್ರವೇಶಿಸಿರುವ ಬೋಸ್ನಿಯಾ ಹರ್ಜಗೋವಿನಾ, ಪಂದ್ಯದಲ್ಲಿ ಪ್ರಬಲ ಅರ್ಜೆಂಟೀನಾ ಮುಂದೆ ಕಠಿಣ ಸವಾಲುಗಳನ್ನೇ ನಿಲ್ಲಿಸಿ ಅಚ್ಚರಿ ಮೂಡಿಸಿತು. ಆದರೆ, ಅನುಭವಿ ಪಡೆ ಅರ್ಜೆಂಟೀನಾ ಸವಾಲನ್ನು ಹತ್ತಿಕ್ಕಲು ಮಾತ್ರ ಸಾಧ್ಯವಾಗದೇ ಅಂತಿಮವಾಗಿ ಎಲ್ಲರಿಂದಲೂ ಬೇಷ್ ಎನಿಸಿಕೊಂಡು ಗೌರವಯುತ ಸೋಲಿನಿಂದ ತೃಪ್ತಿಗೊಂಡಿತು.