ಮಾನೌಸ್ (ಬ್ರೆಜಿಲ್): ಸ್ಟ್ರೈಕರ್ ಮಾರಿಯೊ ಮ್ಯಾಂಜುಕಿಕ್ ಅವರ ಅತ್ಯದ್ಭುತ ಪ್ರದರ್ಶನದ ನೆರವಿನಿಂದ ಕ್ರೊವೇಷಿಯಾ ತಂಡ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಗೆಲವಿನ ಲಯ ಕಂಡುಕೊಂಡಿದೆ.
ಮಾನೌಸ್ನಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಕ್ರೊವೇಷಿಯಾ ತಂಡ 4-0 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸುವ ಮೂಲಕ ಕೆಮರೂನ್ ತಂಡವನ್ನು ಬಗ್ಗುಬಡಿದಿದೆ.
ಆರಂಭಿಕ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧ ಸೋಲನುಭವಿಸಿದ್ದ ಕ್ರೊವೇಷಿಯಾ, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಈ ಗೆಲವಿನಿಂದ ಕ್ರೊವೇಷಿಯಾ ಟೂರ್ನಿಯಲ್ಲಿ ತಮ್ಮ ಹೋರಾಟವನ್ನು ಜೀವಂತವಾಗಿರಿಸಿಕೊಂಡಿದೆ. ಇತ್ತ ಕೆಮರೂನ್ ತಂಡದ ಅಲೆಕ್ಸಾಂಡರ್ ಸಾಂಗ್, ಕ್ರೊವೇಷಿಯಾದ ಮ್ಯಾಂಜುಕಿಕ್ಗೆ ಹೊಡೆಯುವ ಮೂಲಕ ಪಂದ್ಯದಿಂದ ಅಮಾನತುಗೊಂಡರು. ಪರಿಣಾಮ ಕೆಮರೂನ್ ತಂಡ ಅಂತಿಮ 50 ನಿಮಿಷಗಳ ಕಾಲ ಕೇವಲ 10 ಆಟಗಾರರನ್ನು ಕಣಕ್ಕಿಳಿಸುವಂತಾಯಿತು. ಇದು ತಂಡದ ಸೋಲಿನ ಪ್ರಮುಖ ಕಾರಣವಾಗಿದೆ. ಕ್ರೊವೇಷಿಯಾ ತಂಡದ ಪರ 11ನೇ ನಿಮಿಷದಲ್ಲಿ ಹಿರಿಯ ಸ್ಟ್ರೈಕರ್ ಐವಿಕಾ ಒಲಿಕ್, ತಂಡಕ್ಕೆ ಆರಂಭಿಕ ಗೋಲು ತಂದುಕೊಟ್ಟರು. ಈ ಮೂಲಕ ತಂಡ 1-0 ಅಂತರದ ಮುನ್ನಡೆ ತಂದುಕೊಟ್ಟರು.
ಇನ್ನು ದ್ವಿತಿಯಾರ್ಧದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು, ಎದುರಾಳಿ ವಿರುದ್ಧ ಪ್ರಾಬಲ್ಯ ಮೆರೆದ ಕ್ರೊವೇಷಿಯಾ, 3 ಗೋಲು ದಾಖಲಿಸಿ ಪಂದ್ಯವನ್ನು ಸಂಪೂರ್ಣ ತಮ್ಮ ವಶಕ್ಕೆ ತೆಗೆದುಕೊಂಡರು.
48ನೇ ನಿಮಿಷದಲ್ಲಿ ಪೆರಿಸಿಕ್ ತಂಡಕ್ಕೆ ಎರಡನೇ ಗೋಲು ದಾಖಲಿಸಿದರು. ನಂತರ 61 ಹಾಗೂ 73ನೇ ನಿಮಿಷದಲ್ಲಿ ಸತತ ಎರಡು ಗೋಲು ದಾಖಲಿಸಿದ ಮಾರಿಯೊ ಮ್ಯಾಂಜುಕಿಕ್ ತಂಡವನ್ನು ಗೆಲವಿನ ದಡಕ್ಕೆ ತಂದು ನಿಲ್ಲಿಸಿದರು.
ಜೂ.23ರಂದು ಕ್ರೊವೇಷಿಯಾ ತಂಡ ಮೆಕ್ಸಿಕೊ ವಿರುದ್ಧ ಸೆಣೆಸಲಿದ್ದು, ಅಂತಿಮ 16ರ ಘಟ್ಟಕ್ಕೆ ಪ್ರವೇಶಿಸಲು ಗೆಲವು ದಾಖಲಿಸಬೇಕಾಗಿದೆ. ಇನ್ನು ಕೆಮರೂನ್ ತಂಡ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತು, ಪಂದ್ಯಾವಳಿಯಿಂದ ಹೊರಗುಳಿದಿದೆ.