ಸೀಸನ್‌ನಲ್ಲಿ ಸಿಗುವ ಎಳೆಯ ಹಲಸಿನಕಾಯಿ (Raw Jackfruit) ಬಳಸಿ ಮಾಡುವ ಬಿರಿಯಾನಿ ಸಸ್ಯಾಹಾರಿಗಳ ಪಾಲಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಮಾಂಸದಂತಹ ವಿನ್ಯಾಸ (Texture) ಹೊಂದಿರುವ ಹಲಸಿನಕಾಯಿ ಮಸಾಲೆಯನ್ನು ಚೆನ್ನಾಗಿ ಹೀರಿಕೊಳ್ಳುವುದರಿಂದ ಈ ಬಿರಿಯಾನಿ ಇನ್ನಷ್ಟು ರುಚಿಕರವಾಗುತ್ತದೆ. ಮನೆಯಲ್ಲೇ ಹೋಟೆಲ್ ಶೈಲಿಯ ಸುವಾಸನೆಯುಳ್ಳ ಹಲಸಿನಕಾಯಿ ಬಿರಿಯಾನಿಯನ್ನು ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು...
ಎಳೆಯ ಹಲಸಿನಕಾಯಿ – 500 ಗ್ರಾಂ
ಬಾಸ್ಮತಿ ಅಕ್ಕಿ – 2 ಬಟ್ಟಲು
ಈರುಳ್ಳಿ – 3 (ಉದ್ದವಾಗಿ ಕತ್ತರಿಸಿದ್ದು)
ಟೊಮೆಟೊ – 2 (ಸಣ್ಣದಾಗಿ ಕತ್ತರಿಸಿದ್ದು)
ಮೊಸರು – ½ ಬಟ್ಟಲು
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಹಸಿಮೆಣಸಿನಕಾಯಿ – 3
ಪುದೀನಾ ಸೊಪ್ಪು – 1 ಬಟ್ಟಲು
ಕೊತ್ತಂಬರಿ ಸೊಪ್ಪು – 1 ಬಟ್ಟಲು
ಕೆಂಪು ಮೆಣಸಿನ ಪುಡಿ – 1 ಚಮಚ
ಅರಿಶಿನ – ¼ ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲೆ – 1 ಚಮಚ
ಬಿರಿಯಾನಿ ಮಸಾಲೆ – 2 ಚಮಚ
ಲವಂಗ – 4
ಏಲಕ್ಕಿ – 4
ದಾಲ್ಚಿನ್ನಿ – 2 ತುಂಡು
ಬಿರಿಯಾನಿ ಎಲೆ – 2
ತುಪ್ಪ – 2 ಚಮಚ
ಎಣ್ಣೆ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಚಮಚ
ನೀರು – ಅಗತ್ಯವಿದ್ದಷ್ಟು
ಮಾಡುವ ವಿಧಾನ...
ಹಲಸಿನಕಾಯಿಯ ಸಿಪ್ಪೆ ತೆಗೆದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ.
ಉಪ್ಪು ಮತ್ತು ಸ್ವಲ್ಪ ಅರಿಶಿನ ಹಾಕಿದ ನೀರಿನಲ್ಲಿ 8–10 ನಿಮಿಷ ಅರ್ಧ ಬೇಯಿಸಿ. ನೀರನ್ನು ಬಸಿದ ತೆಗೆದಿಟ್ಟುಕೊಳ್ಳಿ.
ಅಕ್ಕಿಯನ್ನು 30 ನಿಮಿಷ ನೆನೆಸಿಡಿ. ಒಂದು ಪಾತ್ರೆಯಲ್ಲಿ ಸಾಕಷ್ಟು ನೀರು ಕುದಿಸಿ, ಉಪ್ಪು, ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಗೂ ಬಿರ್ಯಾನಿ ಎಲೆ ಹಾಕಿ. ಅಕ್ಕಿಯನ್ನು ಸುಮಾರು 70% ಮಾತ್ರ ಬೇಯಿಸಿ ನೀರನ್ನು ಬಸಿಯಿರಿ.
ಇದೀಗ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಮತ್ತು ತುಪ್ಪ ಬಿಸಿ ಮಾಡಿ. ಇದಕ್ಕೆ ಲವಂಗ, ಏಲಕ್ಕಿ, ದಾಲ್ಚಿನ್ನಿ, ಬಿರ್ಯಾನಿ ಎಲೆ ಹಾಕಿ ಹುರಿಯಿರಿ.
ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ.
ಅಚ್ಛ ಖಾರದ ಪುಡಿ, ಅರಿಶಿನ, ದನಿಯಾ ಪುಡಿ, ಗರಂ ಮಸಾಲೆ ಹಾಗೂ ಬಿರಿಯಾನಿ ಮಸಾಲೆ ಸೇರಿಸಿ. ಮೊಸರು ಹಾಕಿ ಚೆನ್ನಾಗಿ ಕಲಸಿ.
ಈಗ ಬೇಯಿಸಿದ ಹಲಸಿನಕಾಯಿ ಸೇರಿಸಿ 8–10 ನಿಮಿಷ ಮಸಾಲೆಯೊಂದಿಗೆ ಬೇಯಿಸಿ.
ಕೊತ್ತಂಬರಿ, ಪುದೀನಾ ಸೊಪ್ಪು ಹಾಗೂ ನಿಂಬೆ ರಸ ಸೇರಿಸಿ.
ಇದೀಗ ಮಸಾಲೆಯ ಮೇಲೆ ಅರ್ಧ ಬೇಯಿಸಿದ ಅಕ್ಕಿಯನ್ನು ಸಮವಾಗಿ ಹರಡಿ.
ಉಳಿದ ಪುದೀನಾ, ಕೊತ್ತಂಬರಿ, ತುಪ್ಪ ಹಾಗೂ ಸ್ವಲ್ಪ ಕರಿದ ಈರುಳ್ಳಿ ಹಾಕಿ.
ಪಾತ್ರೆಯನ್ನು ಬಿಗಿಯಾಗಿ ಮುಚ್ಚಿ ಕಡಿಮೆ ಉರಿಯಲ್ಲಿ 20–25 ನಿಮಿಷ ದಮ್ ಮಾಡಿ.
ನಂತರ ನಿಧಾನವಾಗಿ ಕಲಸಿದರೆ, ರುಚಿಕರವಾದ ಹಲಸಿನಕಾಯಿ ಬಿರಿಯಾನಿ ಸವಿಯಲು ಸಿದ್ಧ.
ಟಿಪ್ಸ್...
ಎಳೆಯ ಹಲಸಿನಕಾಯಿ ಬಳಸಿದರೆ ಬಿರಿಯಾನಿ ಹೆಚ್ಚು ರುಚಿಯಾಗುತ್ತದೆ.
ಹಲಸಿನಕಾಯಿಯನ್ನು ಹೆಚ್ಚು ಬೇಯಿಸಬೇಡಿ, ಇಲ್ಲದಿದ್ದರೆ ಚೂರು ಚೂರಾಗುತ್ತದೆ.
ದಮ್ ಮಾಡುವಾಗ ಉರಿಯನ್ನು ಕಡಿಮೆ ಇಟ್ಟರೆ ಬಿರಿಯಾನಿಗೆ ಉತ್ತಮ ಸುವಾಸನೆ ಬರುತ್ತದೆ.
ಎಣ್ಣೆಯಲ್ಲಿ ಕರಿದ ಈರುಳ್ಳಿ ಸೇರಿಸಿದರೆ ಹೋಟೆಲ್ ಶೈಲಿಯ ರುಚಿ ಸಿಗುತ್ತದೆ.
ಕೇಸರಿ ಹಾಲು ಅಥವಾ ಗುಲಾಬಿ ನೀರನ್ನು ಕೊನೆಯಲ್ಲಿ ಸೇರಿಸಿದರೆ ಬಿರಿಯಾನಿಯ ಪರಿಮಳ ಮತ್ತಷ್ಟು ಹೆಚ್ಚುತ್ತದೆ.