ಪ್ರತಿಯೊಬ್ಬರ ಬಳಿಯೂ ಇಂದು ವಾಟ್ಸಾಪ್ ಇದೆ; ಅದ್ರಲ್ಲೂ, ಕೆಲವರ ಒಂದಲ್ಲಾ, ಎರಡೆರಡು ವಾಟ್ಸಾಪ್ ಇರುತ್ತೆ. ಹಾಗಾಗಿ, ಪೆರ್ಸನಲ್ ಮೆಸೇಜ್ ನಿಂದ ಹಿಡಿದು ಬ್ಯಾಂಕಿಂಗ್ ವಿವರಗಳವರೆಗೆ ಎಲ್ಲವನ್ನೂ ನಾವು ಇದರಲ್ಲಿ ಹಂಚಿಕೊಳ್ಳುತ್ತೇವೆ. ಆದರೆ, ಹ್ಯಾಕರ್‌ಗಳು ಸದಾ ನಿಮ್ಮ ಅಕೌಂಟ್ ಮೇಲೆ ಕಣ್ಣಿಟ್ಟಿರುತ್ತಾರೆ. ಹಾಗಾಗಿ, ನಿಮ್ಮ ವಾಟ್ಸಾಪ್ ಸಂಪೂರ್ಣ ಸುರಕ್ಷಿತವಾಗಿ ಹ್ಯಾಕರ್‌ಗಳಿಂದ ದೂರವಿಡಲು ವಾಟ್ಸಾಪ್‌ನಲ್ಲಿರುವ ಈ 5 ಅದ್ಭುತ ಸೆಕ್ಯೂರಿಟಿ ಫೀಚರ್‌ಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯ. ಆ ಕುರಿತ ವರದಿ ಇಲ್ಲಿದೆ:
1. ಟೂ-ಸ್ಟೆಪ್ ವೆರಿಫಿಕೇಶನ್:
ಇದು ನಿಮ್ಮ ವಾಟ್ಸಾಪ್ ಖಾತೆಗೆ ಡಬಲ್ ಲೇಯರ್ ಭದ್ರತೆ ನೀಡುತ್ತದೆ. ಇದನ್ನು ಆನ್ ಮಾಡಿದಾಗ ನೀವು 6 ಅಂಕಿಗಳ ರಹಸ್ಯ ಪಿನ್ (PIN) ಸೆಟ್ ಮಾಡಬೇಕಾಗುತ್ತದೆ. ಯಾರಾದರೂ ನಿಮ್ಮ ಫೋನ್ ನಂಬರ್ ಬಳಸಿ ಬೇರೆ ಮೊಬೈಲ್‌ನಲ್ಲಿ ವಾಟ್ಸಾಪ್ ಲಾಗಿನ್ ಮಾಡಲು ಯತ್ನಿಸಿದರೆ, ಈ ಪಿನ್ ಇಲ್ಲದೆ ಪ್ರವೇಶಿಸಲು ಸಾಧ್ಯವೇ ಇಲ್ಲ. ನಿಮ್ಮ ಸಿಮ್ ಕಾರ್ಡ್ ಕಳುವಾದರೂ ಹ್ಯಾಕರ್‌ಗಳು ನಿಮ್ಮ ಖಾತೆ ತೆರೆಯಲು ಇದು ಬಿಡುವುದಿಲ್ಲ.
2. ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಬ್ಯಾಕಪ್:
ನಾವು ಪ್ರತಿದಿನ ಗೂಗಲ್ ಡ್ರೈವ್ ಅಥವಾ ಐಕ್ಲೌಡ್‌ನಲ್ಲಿ ಚಾಟ್ ಬ್ಯಾಕಪ್ ತೆಗೆದುಕೊಳ್ಳುತ್ತೇವೆ. ಆದರೆ ಈ ಬ್ಯಾಕಪ್‌ಗಳು ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು 'ಎನ್‌ಕ್ರಿಪ್ಟೆಡ್ ಬ್ಯಾಕಪ್' ಫೀಚರ್ ಬಳಸಿ ಅದಕ್ಕೆ ಪಾಸ್‌ವರ್ಡ್ ಲಾಕ್ ಹಾಕಬಹುದು. ಈ ಪಾಸ್‌ವರ್ಡ್ ಇಲ್ಲದೆ ಗೂಗಲ್, ಆಪಲ್ ಅಥವಾ ಸ್ವತಃ ವಾಟ್ಸಾಪ್ ಸಂಸ್ಥೆಗೂ ನಿಮ್ಮ ಚಾಟ್‌ಗಳನ್ನು ಓದಲು ಸಾಧ್ಯವಾಗುವುದಿಲ್ಲ.
3. ಚಾಟ್ ಲಾಕ್:
ನಿಮ್ಮ ಫೋನ್ ಅನ್ನು ಸ್ನೇಹಿತರು ಅಥವಾ ಕುಟುಂಬದವರು ಬಳಸುವಾಗ ಕೆಲವು ವೈಯಕ್ತಿಕ ಚಾಟ್‌ಗಳನ್ನು ಬಚ್ಚಿಡಲು ಇದು ಅತ್ಯುತ್ತಮ ಫೀಚರ್. ನಿರ್ದಿಷ್ಟ ಚಾಟ್ ಅನ್ನು ಲಾಕ್ ಮಾಡುವುದರಿಂದ ಅದು ಪ್ರತ್ಯೇಕ ಫೋಲ್ಡರ್‌ಗೆ ಹೋಗುತ್ತದೆ. ಅದನ್ನು ನೋಡಲು ಫಿಂಗರ್‌ಪ್ರಿಂಟ್, ಫೇಸ್ ಐಡಿ ಅಥವಾ ಪ್ರತ್ಯೇಕ ಸೀಕ್ರೆಟ್ ಕೋಡ್ ಅಗತ್ಯವಿರುತ್ತದೆ. ಫೋನ್ ಅನ್‌ಲಾಕ್ ಆಗಿದ್ದರೂ ಈ ಚಾಟ್‌ಗಳು ಸುರಕ್ಷಿತವಾಗಿರುತ್ತವೆ.
4. ಅಪರಿಚಿತ ಕರೆಗಳ ಮ್ಯೂಟ್:
ಇತ್ತೀಚೆಗೆ ವಾಟ್ಸಾಪ್ ಕರೆಗಳ ಮೂಲಕ ಹಣ ವಂಚನೆ ಮಾಡುವ ಹ್ಯಾಕರ್‌ಗಳ ಸಂಖ್ಯೆ ಹೆಚ್ಚಾಗಿದೆ. ಈ ಫೀಚರ್ ಆನ್ ಮಾಡುವುದರಿಂದ, ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಅಪರಿಚಿತ ನಂಬರ್‌ಗಳಿಂದ ಬರುವ ಕರೆಗಳು ಆಟೋಮ್ಯಾಟಿಕ್ ಆಗಿ ಸೈಲೆಂಟ್ ಆಗುತ್ತವೆ. ಇದರಿಂದ ನೀವು ವಂಚನೆಯ ಲಿಂಕ್‌ಗಳು ಮತ್ತು ಕರೆಗಳಿಂದ ದೂರವಿರಬಹುದು.
5. ಪಾಸ್‌ಕೀಸ್:
ಸಾಂಪ್ರದಾಯಿಕ ಎಸ್‌ಎಮ್‌ಎಸ್ ಒಟಿಪಿ (OTP) ಗಳಿಗಿಂತ ಪಾಸ್‌ಕೀಸ್ ಹೆಚ್ಚು ಸುರಕ್ಷಿತ. ಹ್ಯಾಕರ್‌ಗಳು ನಿಮ್ಮ ಒಟಿಪಿಯನ್ನು ಕದಿಯುವ ತಂತ್ರಗಳನ್ನು ಬಳಸುತ್ತಾರೆ. ಆದರೆ ಪಾಸ್‌ಕೀಸ್ ಆನ್ ಮಾಡಿದರೆ, ನಿಮ್ಮ ಫೋನಿನ ಫೇಸ್ ಐಡಿ, ಫಿಂಗರ್‌ಪ್ರಿಂಟ್ ಅಥವಾ ಸ್ಕ್ರೀನ್ ಲಾಕ್ ಬಳಸಿ ಮಾತ್ರ ವಾಟ್ಸಾಪ್ ಲಾಗಿನ್ ಆಗಬಹುದು. ಇದು ಹ್ಯಾಕಿಂಗ್ ಅನ್ನು ಸಂಪೂರ್ಣವಾಗಿ ತಡೆಯುತ್ತದೆ.
ಹಾಗಾಗಿ, ನಿಮ್ಮ ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ ಈ ಐದು ಫೀಚರ್‌ಗಳನ್ನು ಇಂದೇ ಆಕ್ಟಿವೇಟ್ ಮಾಡಿಕೊಳ್ಳಿ ಮತ್ತು ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರಿ.