ರಕ್ತಮೋಕ್ಷಣ 
ಆರೋಗ್ಯ-ಜೀವನಶೈಲಿ

ಲೀಚ್ ಥೆರಪಿ

ಜಲೌಕಾ ಕಚ್ಚಿದ ಸ್ಥಳದಲ್ಲಿ ಸ್ವಲ್ಪ ಅರಿಶಿಣ ಅಥವಾ ಉಪ್ಪು ಹಾಕಿದರೆ ರಕ್ತ ಹೀರವುದು ನಿಲ್ಲುತ್ತದೆ...

ತೇವವಿರುವ ತಾಣಗಳಿಗೆ ಹೋದಾಗ ತಮಗೆ ಅರಿವಾಗದಂತೆಯೇ ಜಿಗಣೆ(ಜಲೌಕ)ಗಳು ಅಂಟಿಕೊಂಡು ರಕ್ತ ಹೀರಿದರೂ ಗಮನಕ್ಕೆ ಬರುವುದಿಲ್ಲ. ಇದಕ್ಕೆ ಕಾರಣ ಇದರ ವೇದನಾರಹಿತವಾಗಿ ರಕ್ತ ಹೀರುವ ಪ್ರವೃತ್ತಿ.

ಈ ಜಲೌಕಾಗಳ ಲಾಲಾಸ್ರಾವದಲ್ಲಿರುವ ವಿಶಿಷ್ಟ ದ್ರವಗಳಿಂದ ಆ ಸ್ಥಾನದಲ್ಲಿ ತಡವಾಗಿ ರಕ್ತ ಹೆಪ್ಪುಗಟ್ಟುವುದು, ಕಚ್ಚಿದ ಸ್ಥಳದಲ್ಲಿ ಸಂಜ್ಞಾಹರಣ ನೀಡಿದಂತಾಗಿ ಕಚ್ಚಿದ್ದೂ ತಿಳಿಯಲಾರದು ಮತ್ತು ಇದು ಯಾಂತ್ರಿಕವಾಗಿರದೇ ರಕ್ತ ಹೀರುವ ಸ್ವಾಭಾವಿಕ ಪ್ರವೃತ್ತಿ ಹೊಂದಿರುವುದರಿಂದಲೇ ಇದನ್ನು ಎಲ್ಲ ರಕ್ತಮೋಕ್ಷಣ ವಿಧಗಳಲ್ಲೂ ವಿಶೇಷವೆಂದು ಪರಿಗಣಿಸಲಾಗಿದೆ.

ಇದನ್ನು ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ಶಸ್ತ್ರಕ್ರಿಯೆಗೆ ಹೆದರುವವರು ನಿರಾತಂಕವಾಗಿ ಬಳಸಬಹುದು.

ಪಂಚಕರ್ಮ ಚಿಕಿತ್ಸೆಗಳಾದ ವಮನ, ವಿರೇಚನ, ಬಸ್ತಿ, ನಸ್ಯ ಮತ್ತು ರಕ್ತಮೋಕ್ಷಣಗಳಿಗೆ ಆಯುರ್ವೇದದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಯಾವುದೇ ವ್ಯಾಧಿಗೆ ಅಭ್ಯಂತರ ಔಷಧಿ ಪ್ರಯೋಗಿಸುವ ಮೊದಲು ಶರೀರದ ದೂಷಿತ ದೋಷಗಳನ್ನು ಹೊರಹಾಕಿ ಶರೀರ ಶುದ್ಧವಾದ ನಂತರವಷ್ಟೇ ಇತರೆ ಶಮನೌಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. ಈ ಶರೀರ ಶೋಧನಾ ಕ್ರಿಯೆಗಳೇ ಈ ಪಂಚಕರ್ಮಗಳು.

ಸುಶ್ರುತ ಶಲ್ಯ ತಂತ್ರದಲ್ಲಿ ರಕ್ತಮೋಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾನೆ. ರಕ್ತಮೋಕ್ಷಣ ಎಂದರೆ ಶರೀರದಿಂದ ದೂಷಿತ ರಕ್ತವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೊರಹಾಕುವುದು. ಇದರಲ್ಲಿ ಅನೇಕ ವಿಧಗಳುಂಟು. ಅವುಗಳಲ್ಲಿ ಜಲೌಕಾಗಳಿಂದ ರಕ್ತಮೋಕ್ಷಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅಸಾಧ್ಯವಾದ ಚರ್ಮವ್ಯಾಧಿಗಳ ಪ್ಲಾಸ್ಟಿಕ್ ಸರ್ಜರಿಯಲ್ಲಿ ಇವನ್ನು ಬಳಸುತ್ತಾರೆ.

ಜಲ ಪ್ರಾಣಿ
ಇಂಗ್ಲೀಷ್‌ನಲ್ಲಿ ಲೀಚ್ ಎಂದು ಕರೆಸಿಕೊಳ್ಳುವ ಈ ಜೀವಯ ವಾಸಸ್ಥಳ, ಆಹಾರ ಎಲ್ಲವೂ 'ಜಲ'ವೇ ಇರುವುದರಿಂದ ಇವುಗಳಿಗೆ 'ಜಲೌಕ' ಎನ್ನುತ್ತಾರೆ. ಸವಿಷ ಮತ್ತು ನಿರ್ವಿಷ ಜಲೌಕಗಳೆಂಬ ಎರಡು ಬಗೆಗಳಿದ್ದು, ಚಿಕಿತ್ಸೆಗಾಗಿ ಯಾವಾಗಲೂ ನಿರ್ವಿಷ ಜಲೌಕಾಗಳನ್ನೇ ಬಳಸುತ್ತಾರೆ.

ಚಿಕಿತ್ಸೆಗೆ ಬಳಸುವ ಪೂರ್ವದಲ್ಲಿ ಜಲೌಕಾಗಳನ್ನು ಅರಿಶಿಣ ಮಿಶ್ರಿತ ನೀರಲ್ಲಿ ತುಸು ಕಾಲ ವಿಹರಿಸಲು ಬಿಟ್ಟು ನಂತರ ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸಲಾಗುವುದು. ಆಮೇಲೆ ಚಿಕಿತ್ಸೆ ನೀಡಬೇಕಾದ ಶರೀರದ ಭಾಗವನ್ನು ಸ್ವಚ್ಛಗೊಳಿಸಿ ಆ ಸ್ಥಾನದಲ್ಲಿ ಜಲೌಕಾವನ್ನು ಬಿಡಬೇಕು. ಸಾಮಾನ್ಯವಾಗಿ ಅದು ತನ್ನ ಚೂಷಕಗಳಿಂದ ರಕ್ತ ಹೀರಲು ಪ್ರಾರಂಭಿಸುತ್ತದೆ. ಜಲೌಕಾಗಳು ಪ್ರಾರಂಭದಲ್ಲಿ ಅಶುದ್ಧ ರಕ್ತವನ್ನು ಮಾತ್ರ ಹೀರುತ್ತದೆ ಎನ್ನುತ್ತದೆ ಆಯುರ್ವೇದ.

ವೈಜ್ಞಾನಿಕವಾಗಿ ಜಲೌಕಾಗಳ ಬಗ್ಗೆ ಅಧ್ಯಯನ ನಡೆಸಿದಾಗ ಇವುಗಳ ಲಾಲಾರಸದಲ್ಲಿ 'ಹಿರುಡಿನ್‌' ಎಂಬ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ, ಕಚ್ಚಿದ ಸ್ಥಳದಲ್ಲಿ ಸಂಜ್ಞಾ ಹರಣ ಪ್ರಭಾವ ಬೀರುವ, ಊತ ಹಾಗೂ ಸೋಂಕು ನಿವಾರಕ ದ್ರವ್ಯಗಳಿರುತ್ತವೆ.

ತಮ್ಮ ಹೊಟ್ಟೆ ತುಂಬುವವರೆಗೂ ರಕ್ತ ಹೀರುವ ಇವು, ನಂತರ ತಾವಾಗಿಯೇ ಕೆಳಗೆ ಬೀಳುತ್ತವೆ ಅಥವಾ ರೋಗಿಗೆ ತುರಿಕೆ, ನೋವುಂಟಾದರೆ ಜಲೌಕಾ ಕಚ್ಚಿದ ಸ್ಥಳದಲ್ಲಿ ಸ್ವಲ್ಪ ಅರಿಶಿಣ ಅಥವಾ ಉಪ್ಪು ಹಾಕಿದರೆ ರಕ್ತ ಹೀರವುದು ನಿಲ್ಲುತ್ತದೆ.

ರಕ್ತಮೋಕ್ಷಣದ ನಂತರ ಜಲೌಕಾಗಳ ಮುಖಕ್ಕೆ ಅರಿಶಿಣ ಹಚ್ಚಿ, ಹೀರಿದ ರಕ್ತವನ್ನು ವಾಂತಿ ಮಾಡಿಸಿ ತೆಗೆಯಲಾಗುವುದು. ನಂತರ ಈ ಜೀವಿಗಳನ್ನು ಶುದ್ಧ ನೀರಲ್ಲಿ ಸ್ವಚ್ಛಗೊಳಿಸಿ ಬೇರೆ ಪಾತ್ರೆಯಲ್ಲಿ ಸಂಗ್ರಹಿಸಿಡಬೇಕು. ವಾರ ವಿಶ್ರಾಂತಿ ನೀಡಿ ಪುನಾ ರಕ್ತಮೋಕ್ಷಣಕ್ಕೆ ಬಳಸಬಹುದು.

ಈ ರಕ್ತಮೋಕ್ಷಣ ಚಿಕಿತ್ಸೆಯಲ್ಲಿ ಪ್ರಥಮವಾಗಿ ಶರೀರದಿಂದ ಅಶುದ್ಧ ರಕ್ತ ಹೊರಹಾಕಲ್ಪಡುತ್ತದೆ. ಜಲೌಕಾದಿಂದ ರಕ್ತಮೋಕ್ಷಣ ಚಿಕಿತ್ಸೆಯನ್ನು ಮೂಲವ್ಯಾಧಿ, ವಾತರಕ್ತ, ದುಷ್ಟರ್ವಣ, ನೇತ್ರವಿಕಾರ, ಸಂಧಿಗತವಾತ ಮತ್ತು ಇಸಬು ಮುಂತಾದ ಚರ್ಮ ವ್ಯಾಧಿಗಳಲ್ಲಿ ಹೆಚ್ಚು ಪರಿಣಾಮಕಾರಿ ಬಳಸಬಹುದು.

-ಡಾ.ಗುರುಲಿಂಗಪ್ಪ ಅಂಕದ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT