ಮಕ್ಕಳಿಗೆ ಬಾಲ್ಯದಲ್ಲಿ ಅನೇಕ ಖಾಯಿಲೆಗಳು ಬರುವುದು ಸಾಮಾನ್ಯ. ಹಿಂದಿನ ಕಾಲದಲ್ಲಿ ಮಕ್ಕಳ ರೋಗಗಳಿಗೆ ಸರಿಯಾದ ಔಷಧ ಸಿಗುತ್ತಿರಲಿಲ್ಲ. ಸಿಕ್ಕರೂ ಅನೇಕರು ಕೊಡಿಸುತ್ತಿರಲಿಲ್ಲ. ಹಲವು ಪೋಷಕರಿಗೆ ಔಷಧ, ಲಸಿಕೆಗಳ ಬಗ್ಗೆ ಅರಿವಿರಲಿಲ್ಲ, ಜೊತೆಗೆ ಲಸಿಕೆ ಕೊಡಿಸಲು ಮೂಢನಂಬಿಕೆ ಮತ್ತು ಭಯದಿಂದ ಹಿಂದೇಟು ಹಾಕುತ್ತಿದ್ದರು. ಇದರಿಂದಾಗಿ 50-100 ವರ್ಷಗಳ ಹಿಂದೆ ಮಕ್ಕಳ ಮರಣ ಪ್ರಮಾಣ ಜಾಸ್ತಿ ಇರುತ್ತಿತ್ತು. ಜನಿಸಿದ ಕೂಡಲೇ ಇಲ್ಲವೇ ಕೆಲವು ತಿಂಗಳು, ವರ್ಷ ಕಳೆದ ಮೇಲೆ ಮಕ್ಕಳು ಸಾವಿಗೀಡಾಗುತ್ತಿದ್ದರು.
ಆದರೆ ಇಂದಿನ ಕಾಲದಲ್ಲಿ `ಆರೋಗ್ಯವಂತ, ಬುದ್ಧಿವಂತ ಮಕ್ಕಳೇ ಕುಟುಂಬದ ಮತ್ತು ಸಮಾಜದ ಆಸ್ತಿ’ ಎಂಬ ಸತ್ಯಾಂಶ ಜನರ ಅರಿವಿಗೆ ಬರುತ್ತಿದೆ. ಹೀಗಾಗಿ ಜನಿಸಿದ ಪ್ರತಿಯೊಂದು ಮಗು ಕೂಡ ಅದರ ತಂದೆ, ತಾಯಿ, ಪೋಷಕರಿಗೆ ಮತ್ತು ಸಮಾಜಕ್ಕೆ ಅತಿ ಅಗತ್ಯವಾಗಿ ಪರಿಗಣಿಸಲ್ಪಿಟ್ಟಿದೆ. ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಆಯಾ ಕಾಲಕ್ಕೆ ಸೂಕ್ತ ಲಸಿಕೆ ಹಾಕಿಸುವ ಮೂಲಕ ಅವರನ್ನು ಪ್ರಾಣಾಂತಿಕ ಖಾಯಿಲೆಗಳಿಂದ ರಕ್ಷಿಸಬಹುದು.
ಇಷ್ಟೆಲ್ಲ ಆದರೂ ಕೂಡ ನಮ್ಮ ದೇಶದ ಸುಮಾರು ಶೇಕಡಾ 65 ಮಕ್ಕಳಿಗೆ ಎಲ್ಲಾ ಲಸಿಕೆ ಸೌಲಭ್ಯ ದೊರಕುತ್ತಿಲ್ಲ. ಕ್ಷಯ, ದಡಾರ, ಹೆಪಟೈಟಸ್-ಬಿ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಮೂವರಲ್ಲಿ ಒಂದು ಮಗು ಲಸಿಕೆಯಿಂದ ವಂಚಿತವಾಗುತ್ತದೆ. ಇನ್ನು ಕೆಲವು ಮಕ್ಕಳಿಗೆ ಒಂದು ಬಾರಿಯೂ ಈ ಸೌಲಭ್ಯವೇ ದಕ್ಕುವುದಿಲ್ಲ. ಕೇವಲ ಶ್ರೀಮಂತ ಮತ್ತು ವಿದ್ಯಾವಂತ ಪೋಷಕರು ಮಾತ್ರ ತಮ್ಮ ಮಕ್ಕಳಿಗೆ ಎಲ್ಲಾ ಲಸಿಕೆಗಳನ್ನು ಆಯಾ ಕಾಲಕ್ಕೆ ಹಾಕಿಸುತ್ತಾರೆ. ಪೋಷಕರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವ್ಯವಸ್ಥೆ ಇದಕ್ಕೆ ಕಾರಣವಾಗುತ್ತದೆ. ಈ ಕುಂದುಕೊರತೆಯನ್ನು ನಿವಾರಿಸಿ ಲಿಂಗ, ಧರ್ಮ, ಆರ್ಥಿಕ ಬೇಧವಿಲ್ಲದೆ ಹುಟ್ಟುವ ಮಕ್ಕಳೆಲ್ಲರೂ ಆರೋಗ್ಯವಂತರಾಗಿ ಬೆಳೆಯಲು ಕೇಂದ್ರ ಸರ್ಕಾರ `ಮಿಷನ್ ಇಂದ್ರಧನುಷ್’ ಎಂಬ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಿದೆ.
ಏನಿದು ಇಂದ್ರಧನುಷ್?: ಮಕ್ಕಳಲ್ಲಿ ರೋಗ ನಿಗ್ರಹ ಶಕ್ತಿ ವರ್ಧನೆಗೆ ಪೂರಕವಾಗುವ ಲಸಿಕೆ ಹಾಕುವ ಇಂಧ್ರಧನುಷ್ ಯೋಜನೆಯ ಮೊದಲ ಹಂತದ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಏಪ್ರಿಲ್ 7ರಿಂದ ಜಾರಿಗೆ ತಂದಿದೆ. ಹುಟ್ಟಿದ ಮಗುವಿನಿಂದ ಹಿಡಿದು 2 ವರ್ಷದ ಮಕ್ಕಳವರೆಗೆ 7 ರೀತಿಯ ರೋಗ ನಿಗ್ರಹ ಶಕ್ತಿಯುಳ್ಳ ಲಸಿಕೆ ಹಾಕುವ ಈ ಯೋಜನೆಯನ್ನು ಕೇಂದ್ರ ಸರ್ಕಾರ 201 ಜಿಲ್ಲೆಗಳಲ್ಲಿ ಆರಂಭಿಸುತ್ತಿದೆ. ನಾಯಿ ಕೆಮ್ಮು, ಧನುರ್ವಾಯು, ಗಂಟಲಮಾರಿ, ಬಾಲಕ್ಷಯ, ದಢಾರ, ಮೆದುಳು ಜ್ವರ, ಕಾಮಾಲೆ ಈ 7 ರೋಗಗಳ ನಿಯಂತ್ರಣಕ್ಕೆ ಲಸಿಕೆ ಹಾಕುವುದು ಯೋಜನೆ ಕಾರ್ಯಕ್ರಮವಾಗಿದೆ. ಜಪಾನಿಸ್ ಎನ್ಸಫಲಿಟೀಸ್ ಮತ್ತು ಹಿಮೋಫಿಲಸ್ ಇನ್ಫ್ಯುಯೆನ್ಸಾ ಬಿ ಲಸಿಕೆಗಳನ್ನು ಸಹ ಆಯ್ದ ರಾಜ್ಯಗಳಲ್ಲಿ ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಂಡಿರುವ ಅಥವಾ ಹಾಕಿಸಿಕೊಳ್ಳದಿರುವ ಮಕ್ಕಳ ಸಂಖ್ಯೆ ಈ ಜಿಲ್ಲೆಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 201 ಜಿಲ್ಲೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 2.7 ಕೋಟಿ ಮಕ್ಕಳು ಜನಿಸುತ್ತಾರೆ. ಅವರಲ್ಲಿ ಸುಮಾರು 18.3 ಲಕ್ಷ ಮಕ್ಕಳು 5 ವರ್ಷದೊಳಗೆ ಸಾವನ್ನಪ್ಪುತ್ತಾರೆ. ದೇಶಾದ್ಯಂತ ಅಂದಾಜು 89 ಲಕ್ಷ ಮಕ್ಕಳು ಕೆಲವು ಲಸಿಕೆಗಳನ್ನು ಮಾತ್ರ ಪಡೆದರೆ ಇನ್ನು ಕೆಲವು ಮಕ್ಕಳಿಗೆ ಲಸಿಕೆಯನ್ನೇ ಹಾಕಿಸುವುದಿಲ್ಲ. ಪ್ರತಿ ಮೂವರಲ್ಲಿ ಒಂದು ಮಗು ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ ಲಸಿಕೆಗಳನ್ನು ಪಡೆಯುವುದಿಲ್ಲ. ಈ ಪ್ರಮಾಣ ನಗರ ಪ್ರದೇಶಗಳಲ್ಲಿ ಶೇಕಡಾ 5ರಷ್ಟಿದ್ದರೆ ಗ್ರಾಮೀಣ ಭಾಗಗಳಲ್ಲಿ ಶೇಕಡಾ 8ರಷ್ಟಿದೆ. ಇದಕ್ಕಾಗಿ ಎರಡು ವರ್ಷದೊಳಗಿನ ದೇಶದ 27 ದಶಲಕ್ಷ ಮಕ್ಕಳಿಗೆ ಉಚಿತವಾಗಿ ಲಸಿಕೆ ಒದಗಿಸಲು ಇದು ಉತ್ತಮ ಕಾರ್ಯಕ್ರಮ ಎಂಬುದು ಆರೋಗ್ಯ ಸಚಿವಾಲಯದ ಭರವಸೆ.
ಕೇಂದ್ರ ಸರ್ಕಾರ ಕಳೆದ ವರ್ಷ ಡಿಸೆಂಬರ್ 25ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಪ್ರಥಮ ಹಂತದಲ್ಲಿ 82 ಜಿಲ್ಲೆಗಳು ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿ ಇವೆ. ಭ್ರೂಣಹತ್ಯೆ, ಲಿಂಗ ತಾರತಮ್ಯ ಹೆಚ್ಚಾಗಿರುವ ಈ ಜಿಲ್ಲೆಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮುತುವರ್ಜಿಯಿಂದ ಕೈಗೊಳ್ಳಲಿದೆ. ಮುಂದಿನ ಹಂತದಲ್ಲಿ 297 ಜಿಲ್ಲೆಗಳಲ್ಲಿ ಸರ್ಕಾರ ಈ ಅಭಿಯಾನ ಮುಂದುವರಿಸಲಿದೆ.
2009ರಿಂದ 2013ರವರೆಗೆ ದೇಶದಲ್ಲಿ ಕೇವಲ ಶೇಕಡಾ 4ರಷ್ಟು ಮಾತ್ರ ಲಸಿಕೆ ಕೊಡಿಸುವ ಪ್ರಮಾಣ ಹೆಚ್ಚಾಗಿದ್ದು, 2020ರ ವೇಳೆಗೆ ಶೇಕಡಾ 90ರಷ್ಟು ಗುರಿ ತಲುಪುವುದು ಈ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ ಉದ್ದೇಶವಾಗಿದೆ.
ಈ ವರ್ಷ ನಮ್ಮ ರಾಜ್ಯದಲ್ಲಿ ಆರೋಗ್ಯ ಇಲಾಖೆ, ಕೇಂದ್ರ ಸರ್ಕಾರದಡಿ ಪ್ರಥಮವಾಗಿ ಹಿಂದುಳಿದ ಜಿಲ್ಲೆಗಳಾದ ಗುಲ್ಬರ್ಗ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ನಗರ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಲಿದೆ. ಈ ಹಿಂದುಳಿದ ಜಿಲ್ಲೆಗಳಲ್ಲಿ ಶೇಕಡಾ 70 ಮಕ್ಕಳಿಗೆ ಮಾತ್ರ ಲಸಿಕೆ ಸಿಗುತ್ತಿದ್ದು, ಇನ್ನುಳಿದ ಶೇಕಡಾ 30 ಮಕ್ಕಳಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಈ ಜಿಲ್ಲೆಗಳನ್ನು ಪ್ರಥಮ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು, ಕಳೆದ ತಿಂಗಳ ಅಂತ್ಯಕ್ಕೆ ಯೋಜನೆಗೆ ಚಾಲನೆ ಸಿಕ್ಕಿದೆ.
ಈ ಹಿಂದೆ ಕೇಂದ್ರ ಸರ್ಕಾರ ಮಕ್ಕಳಿಗೆ ಪೋಲಿಯೋ, ಸಿಡುಬು ರೀತಿಯ ಶಕ್ತಿಗುಂದಿಸುವ ರೋಗಗಳನ್ನು ನಿರ್ಮೂಲನ ಮಾಡಲು ಲಸಿಕೆಗಳನ್ನು ನೀಡುತ್ತಿತ್ತು. ಅದರಿಂದ ಪ್ರಗತಿಯನ್ನು ನಮ್ಮ ದೇಶ ಕಂಡಿದೆ. ನಮ್ಮ ದೇಶ ಇಂದು ಪೋಲಿಯೋ ಮುಕ್ತ ದೇಶ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಅಭಿಯಾನವನ್ನು ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿಯೂ ಮುಂದುವರಿಸಲಿದ್ದು, ಎರಡು ವರ್ಷದ ಮಕ್ಕಳಿಗೆ ಉಚಿತವಾಗಿ ಅಗತ್ಯಪಟ್ಟ ಲಸಿಕೆ ಹಾಕಿಸಬಹುದು. 2020ರ ವೇಳೆಗೆ ಪೂರ್ಣ ಲಸಿಕೆ ವ್ಯಾಪ್ತಿಯಡಿ ಮಕ್ಕಳನ್ನು ತರಲು ಸರ್ಕಾರಿ, ಸಾರ್ವಜನಿಕ ಆರೋಗ್ಯ, ಸರ್ಕಾರೇತರ ಸಂಸ್ಥೆಗಳು ಮತ್ತು ಮಾಧ್ಯಮಗಳು ಒಟ್ಟಿಗೆ ಕೆಲಸ ಮಾಡಿದರೆ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ.
ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ ಸಿಗುವ ಲಸಿಕೆಗಳು ಮತ್ತು ಅವುಗಳನ್ನು ಹಾಕಿಸಬೇಕಾದ ವಿವರ:
1. ಬಿಸಿಜಿ: ಮಗು ಹುಟ್ಟಿದಾಗ ಒಂದು ಸಲ, ಒಂದು ವೇಳೆ ಹುಟ್ಟಿದ ಸಮಯದಲ್ಲಿ ನೀಡದಿದ್ದರೆ ಮಗುವಿಗೆ ಒಂದು ವರ್ಷವಾಗುವುದರೊಳಗೆ ಕೊಡಿಸಬಹುದು.
2. ಡಿಪಿಟಿ: ಐದು ಸಲ, ಮಗುವಿನ ಒಂದೂವರೆ ತಿಂಗಳು, ಎರಡೂವರೆ ತಿಂಗಳು, ಮಗುವಿಗೆ 1 ವರ್ಷ 2 ತಿಂಗಳುಗಳಾದಾಗ, ಬೂಸ್ಟರ್ -1 ವರ್ಷ 4 ತಿಂಗಳಿನಿಂದ 2 ವರ್ಷದೊಳಗೆ ಮತ್ತು 5 ವರ್ಷಕ್ಕೆ.
3. ಒಪಿವಿ: ಪೋಲಿಯೋ ಲಸಿಕೆ 5 ಸಲ. 6 ವಾರಗಳು, 10 ವಾರಗಳು ಮತ್ತು 1 ವರ್ಷ 2 ತಿಂಗಳಿನಲ್ಲಿ, ಒಂದು ಬೂಸ್ಟರ್ ಒಂದೂವರೆಯಿಂದ 2 ವರ್ಷಗಳೊಳಗೆ.
4. ಹೆಪಟೈಟಿಸ್ ಬಿ: ನಾಲ್ಕು ಸಲ, ಮಗು ಹುಟ್ಟಿ 24 ಗಂಟೆಗಳೊಳಗೆ, ಒಂದೂವರೆ, ಎರಡು ತಿಂಗಳಿಗೆ ಮತ್ತು ಮೂರೂವರೆ ತಿಂಗಳಿಗೆ.
5. ಮೀಸಲ್ಸ್: 2 ಸಲ, ಮೊದಲನೆಯದ್ದು 9ರಿಂದ 12 ತಿಂಗಳುಗಳಲ್ಲಿ, ಎರಡನೆಯದ್ದು 16ರಿಂದ 24 ತಿಂಗಳುಗಳಲ್ಲಿ.
6. ಟಿಟಿ: 2 ಸಲ, 10ನೇ ವರ್ಷಕ್ಕೆ ಮತ್ತು 16ನೇ ವರ್ಷಕ್ಕೆ
7. ಟಿಟಿ: ಗರ್ಭಿಣಿ ಮಹಿಳೆಯರಿಗೆ
8. ಜಪಾನೀಸ್ ಎನ್ಸಫಲಿಟೀಸ್
ಸುಮನಾ ಉಪಾಧ್ಯಾಯ
ಮಾಹಿತಿ: ಪ್ರೆಸ್ ಇನ್ಫರ್ಮೇಶನ್ ಬ್ಯೂರೋ