ಲಂಡನ್: ಇಂಗ್ಲೆಂಡಿನ ಗಟ್ಟಿಗಾತಿ ಮುದುಕಿ ೧೫ ಸಾವಿರ ಅಡಿಯಿಂದ ಆಕಾಶ ಜಿಗಿತ (ಸ್ಕೈ ಡೈವ್) ಮಾಡಲು ವಯಸ್ಸಿನ ಮಿತಿಯಿಲ್ಲ ಎಂದು ತೋರಿಸಿದ್ದಾರೆ. ಅಜ್ಜಿಗೆ ೯೦ ವರ್ಷ ವಯಸ್ಸು.
ಕ್ಯಾನ್ಸರ್ ಚ್ಯಾರಿಟಿಗಾಗಿ ಹಣ ಸಂಗ್ರಹ ಮಾಡಲು ಸ್ಟೆಲ್ಲಾ ಗಿಲ್ಲಾರ್ಡ್ ಧೈರ್ಯವಾಗಿ ಜಿಗಿದಿರುವುದಾಗಿ ಹೇಳಿಕೊಂಡಿದ್ದಾರೆ.
ವಿಶ್ವ ಕ್ಯಾನ್ಸರ್ ಸಂಶೋಧನಾ ಸಂಸ್ಥೆಗೆ ಗಿಲ್ಲಾರ್ಡ್ ೧೫೮೦ ಪೌಂಡ್ ಗಳ ದೇಣಿಗೆಯನ್ನು ಸಂಗ್ರಹಿಸಿದ್ದಾರೆ.
೨೦೧೨ರಲ್ಲಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಗೆ ತುತ್ತಾದ ತಮ್ಮ ಮಗಳು ಕ್ಯಾಥಿಯ ನೆನಪಿಗಾಗಿ ಈ ಜಿಗಿತ ಮಾಡಿದ್ದಾರೆ ಅಜ್ಜಿ ಎಂದು ಎಕ್ಸ್ಪ್ರೆಸ್ಸ್.ಕೊ.ಯುಕೆ ವರದಿ ಮಾಡಿದೆ.
"ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಒಂಚೂರು ಭಯವಿರಲಿಲ್ಲ. ಇದನ್ನು ಮಾಡುವುದು ಹೇಗೆ ಎಂದು ತರಬೇತುದಾರ ಸೂಚನೆ ಕೊಟ್ಟರು, ನಾನು ಅವರನ್ನು ಸಂಪೂರ್ಣವಾಗಿ ನಂಬಿದೆ" ಎಂದು ಗಿಲ್ಲಾರ್ಡ್ ತಿಳಿಸಿದ್ದಾರೆ.
"ಅದ್ಭುತವಾಗಿತ್ತು. ಸುಂದರವಾದ ದೃಶ್ಯಗಳನ್ನು ನೋಡುತ್ತಾ ಪಕ್ಷಿಯ ರೀತಿ ಹಾರಾಡಿದೆ" ಎಂದು ಅಜ್ಜಿ ತಿಳಿಸಿದ್ದಾರೆ.