2010ರಲ್ಲಿ ವಿಶ್ವಾದ್ಯಂತ ಮಧುಮೇಹಕ್ಕೆ 1.33ಲಕ್ಷ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗೆ 45000 ಮಂದಿ ಸಾವು
ಶೇ. 76ರಷ್ಟು ಬಡ ಹಾಗೂ ಮಧ್ಯಮವರ್ಗದವರೇ ಬಲಿ ಪಟ್ಟಿಯ ಟಾಪ್ 20ದೇಶಗಳಲ್ಲಿ ಕೆರಿಬಿಯನ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಹೆಚ್ಚು ಸಾವು
ಮೆಕ್ಸಿಕೋದಲ್ಲಿ ಅತಿ ಹೆಚ್ಚು ಸಾವು 24000
ಬೋಸ್ಟನ್: ಬಾಯಾರಿಕೆ ತಣಿಸಿಕೊಳ್ಳಲು ಸಕ್ಕರೆ ನೀರು ಕುಡಿಯುತ್ತಿದ್ದೀರಾ? ಒಂದು ನಿಮಿಷ ತಾಳಿ, ಇಂಥ ಸಾಫ್ಟ್ ಡ್ರಿಂಕ್ ಮತ್ತು ಎನರ್ಜಿ ಡ್ರಿಂಕ್ ಕುಡಿದು ವರ್ಷಕ್ಕೆ ಸರಿ ಸುಮಾರು 2 ಲಕ್ಷ ಮಂದಿ ಸಾಯ್ತಿದ್ದಾರಂತೆ.
ಹೀಗಂತ ಬೋಸ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವೊಂದು ಹೇಳಿದೆ. ಜಗತ್ತಿನಾದ್ಯಂತ ಸಕ್ಕರೆ ನೀರು ಅಥವಾ ಸಿಹಿ ಪಾನೀಯದ ಮೋಡಿಗೆ ಒಳಗಾದವರೇ ಹೆಚ್ಚು. ಒಂದು ಬಿಸಿಲಿನ ಬೇಗೆ ತಣಿಸಿದರೆ, ಮತ್ತೊಂದು ರುಚಿಗಾಗಿ ಕುಡಿಯುತ್ತಾರೆ. ಅಂದರೆ ಇಳಿಸಂಜೆಯಲ್ಲಿ ರಿಲ್ಯಾಕ್ಸ್ ಆಗಲು ಮದ್ಯಪಾನ ಸೇವಿಸುವಾಗ ಮಿಕ್ಸ್ ಮಾಡುವ ಸಿಹಿಸೋಡಾ, ಪ್ರತಿಷ್ಠಿತ ಕಾಫಿ ಅಂಗಡಿ ಮತ್ತು ರೆಸ್ಟೊರೆಂಟ್ಗಳಲ್ಲಿ ದೊರಕುವ ಐಸ್ ಟೀ, ನೊರೆ ನೊರೆ ಕಾಫಿ, ಆಟಗಾರರು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು, ದೇಹದ ತೂಕ ಏರಿಸಲು-ಇಳಿಸಲು ಬಳಸುವ ಶಕ್ತಿಪೇಯಗಳು...ಹೀಗೆ ಇವೆಲ್ಲವೂ ಅದೇ ಸಕ್ಕರೆ ನೀರಿನ ಸಾಲಿಗೇ ಸೇರುತ್ತವೆ.
ಕುಡಿಯೋದ್ರಿಂದ ರಿಸ್ಕ್ ಹೆಚ್ಚು
ಈ ಥರದ ಸಕ್ಕರೆ ಅಂಶವಿರುವ ಪಾನೀಯಗಳಿಂದ ಜಗತ್ತಿನಾದ್ಯಂತ ಪ್ರತಿ ವರ್ಷ ಕನಿಷ್ಠ 2 ಲಕ್ಷ ಸಾವುಗಳಾಗುತ್ತಿವೆ. ಈ ಸಕ್ಕರೆ ಪಾನೀಯಗಳಿಂದಾಗಿ ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಸಂಭವಿಸುತ್ತಿದ್ದು ವರ್ಷಕ್ಕೆ ಅಂದಾಜು 1.58ಲಕ್ಷದಷ್ಟು ಮಂದಿ ಬಲಿಯಾಗುತ್ತಿದ್ದಾರೆ. ವಿಶೇಷವೆಂದರೆ ವರದಿ ಕೊಟ್ಟವರಲ್ಲಿ ಒಬ್ಬ ಭಾರತೀಯ ಮೂಲದ ವಿಜ್ಞಾನಿ ಕೂಡ ಇದ್ದಾರೆ. `ವಿಶ್ವಾದ್ಯಂತ ಪ್ರತಿ ವರ್ಷ ಸಕ್ಕರೆ ಅಂಶದ ಪಾನೀಯಗಳಿಂದ ಭಾರಿ ಸಂಖ್ಯೆಯ ರೋಗ ಹಾಗೂ ಸಾವುಗಳು ಸಂಭವಿಸುತ್ತಿವೆ. ಆಹಾರ ಪದ್ಧತಿಯಿಂದ ಅದನ್ನು ಹೊರಗಿಡುವುದು ಉತ್ತಮ'' ಎಂದು ಬೋಸ್ಟನ್ ಯುನಿವರ್ಸಿಟಿಯ ಸಂಶೋಧಕ ಡರೂಯ್ಡ್ ಮೊಜಫರಿಯನ್ ಅಭಿಪ್ರಾಯ ಪಟ್ಟಿದ್ದಾರೆ.
ಶೇ. 100 ಹಣ್ಣಿನ ರಸ ಎಂದು ಪ್ರಮಾಣೀಕರಿಸಿಕೊಂಡು ಬರುವ ಜ್ಯೂಸ್ ಹೊರತುಪಡಿಸಿ, ಸಿಹಿಸೋಡ, ಎನರ್ಜಿ ಡ್ರಿಂಕ್, ಲಘು ಪಾನೀಯ ಎಲ್ಲವೂ ಅಪಾಯಕಾರಿಯಾಗಿದ್ದು ಪ್ರತಿ ಎಂಟು ಔನ್ಸಿನಲ್ಲಿ 50 ಕಿಲೋಕ್ಯಾಲರಿ ಇರುತ್ತದೆ ಎಂಬ ಮಾಹಿತಿಯನ್ನು ಅವರು ಬಯಲು ಮಾಡಿದ್ದಾರೆ. 2010ರಿಂದ ಈ ಬಗ್ಗೆ ತಂಡ ಅಧ್ಯಯನಕ್ಕೆ ತೊಡಗಿಕೊಂಡಿದ್ದು, ಹಲವು ಆತಂಕಕಾರಿ ವಿಷಯಗಳನ್ನು ಪ್ರಸ್ತುತಪಡಿಸಿದೆ. ಈ ಪಾನೀಯಗಳಿಂದ ಆರೋಗ್ಯಕ್ಕೆ ನಯಾಪೈಸೆ ಪ್ರಯೋಜನವಿಲ್ಲದಿದ್ದು, ಅಪಾಯವೇ ಹೆಚ್ಚಿದೆ ಎನ್ನುವ ತಜ್ಞರು, ಸಕ್ಕರೆ ಮಿಶ್ರಿತ ಪಾನೀಯಗಳಿಂದಾದ ಹಾನಿಗಳ ಕುತೂಹಲಕಾರಿ ಅಂಕಿಅಂಶಗಳನ್ನು ನೀಡಿದ್ದಾರೆ.