ಆರೋಗ್ಯ-ಜೀವನಶೈಲಿ

ಬೊಜ್ಜು: ಇಲ್ಲಿದೆ ಸರಳ ಪರಿಹಾರ

Sumana Upadhyaya

ದೇಹ ತೂಕ ಸ್ವಲ್ಪ ಹೆಚ್ಚಾದರೆ  ಸಾಕು, ಆತಂಕಗೊಂಡು ತೂಕವನ್ನು ಇಳಿಸಲು ನಾನಾ ಕಸರತ್ತುಗಳನ್ನು ಮಾಡುತ್ತೇವೆ. ಕೈಯಲ್ಲಿ ಸಾಕಷ್ಟು ಹಣವಿದ್ದರೆ ಜಿಮ್‍ಗಳಿಗೆ ಎಡತಾಕುತ್ತಾರೆ, ಇಲ್ಲವೇ ಬ್ಯೂಟ್‍ಪಾರ್ಲರ್‍ಗೆ ಹೋಗಿ, ಸೌಂದರ್ಯತಜ್ಞರನ್ನು, ವೈದ್ಯರನ್ನು ಸಂಪರ್ಕಿಸಿ ಅನೇಕ ಸಲಹೆಗಳನ್ನು ಪಡೆದು ಸಾವಿರಾರು ರೂಪಾಯಿ ಸುರಿಯುತ್ತಾರೆ. ಇನ್ನು ಕೆಲವರು ವಾಕಿಂಗ್, ಜಾಗಿಂಗ್, ವ್ಯಾಯಾಮ ಎಂದು ಕೆಲ ದಿನಗಳವರೆಗೆ ಮಾಡುತ್ತಾರೆ. ಅದನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಮುಂದುವರಿಸಿ ದೇಹ ತೂಕವನ್ನು ಸಮತೋಲದಲ್ಲಿಟ್ಟುಕೊಳ್ಳುವವರು ಅಪರೂಪ.

ದೇಹದಲ್ಲಿ ಬೊಜ್ಜು ಉಂಟಾಗದಂತೆ, ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಮನೆಯಲ್ಲಿಯೇ ಸರಳ ಪರಿಹಾರಗಳನ್ನು ಕಂಡುಕೊಳ್ಳಬಹುದು.

-ಹಿತ, ಮಿತ ಆಹಾರ ಸೇವನೆಯೇ ಬೊಜ್ಜು ಬಾರದಂತೆ ನೋಡಿಕೊಳ್ಳಲು ಇರುವ ಮುಖ್ಯ ಪರಿಹಾರ. ನಾವು ಆಹಾರವನ್ನು ತಿನ್ನುತ್ತಿರುವಾಗ ಇನ್ನು ಸ್ವಲ್ಪ ಬೇಕು ಅನ್ನಿಸಿದಾಗ ತಿನ್ನುವುದನ್ನು ನಿಲ್ಲಿಸಬೇಕು.
ಪದೇ ಪದೇ ಆಹಾರ ಸೇವನೆ ಒಳ್ಳೆಯದಲ್ಲ. ಬೆಳಿಗ್ಗಿನ ಉಪಹಾರವಾದ ಮೇಲೆ ಮಧ್ಯಾಹ್ನದ ಊಟ ಮಾಡಬೇಕು. ಮಧ್ಯೆ ಏನನ್ನೂ ತಿನ್ನಬಾರದು. ಆಗಾಗ ನೀರು ಕುಡಿಯುತ್ತಿದ್ದರೆ ಒಳ್ಳೆಯದು.
-ಕಾಫಿ, ಟೀ ಸೇವಿಸದಿದ್ದರೆ ಉತ್ತಮ. ಸಂಜೆಯ ಹೊತ್ತು ಸಹ ಹೊಟ್ಟೆ ತುಂಬಾ ತಿನ್ನಬಾರದು.
-ರಾತ್ರಿ ವೇಳೆ ಚಪಾತಿ, ಮೊಳಕೆ ಬಂದ ಕಾಳುಗಳು, ಹಸಿ ತರಕಾರಿ ಸೇವನೆ ಉತ್ತಮ. ಅನ್ನ ಸೇವನೆ ಕಡಿಮೆ ಮಾಡಿದರೆ ದೇಹದ ತೂಕ ಕಡಿಮೆಯಾಗುತ್ತದೆ.
-ಹೊರಗಡೆಯ ತಿಂಡಿ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಅಧಿಕವಾಗಿ ತಿನ್ನುವುದು ಒಳ್ಳೆಯದಲ್ಲ. ಖಾರ ಮತ್ತು ಉಪ್ಪಿನ ಅಂಶವನ್ನೂ ಆಹಾರ ಪದಾರ್ಥಗಳಲ್ಲಿ ಕಡಿಮೆ ಮಾಡಬೇಕು.
- ವಾರದಲ್ಲಿ ಒಂದು ದಿನ ಉಪವಾಸ ಅಥವಾ ಹಸಿ ತರಕಾರಿ, ಹಣ್ಣು, ಕಾಳುಗಳನ್ನು ಮಾತ್ರ ತಿನ್ನುವುದರಿಂದ ಬೊಜ್ಜು ಅತಿಯಾಗಿ ಬೆಳೆಯುವುದನ್ನು ಕಡಿಮೆ ಮಾಡಬಹುದು.
-ಬೊಜ್ಜು ನಿವಾರಣೆಯ, ದೇಹ ತೂಕವನ್ನು ಕಡಿಮೆ ಮಾಡುವ ಜಾಹೀರಾತುಗಳಿಗೆ ಮರುಳಾಗದೆ
-ಮನೆಯ ಸರಳ ಆಹಾರವನ್ನು ಹಿತ-ಮಿತವಾಗಿ ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

SCROLL FOR NEXT