ಆರೋಗ್ಯ

ಬೆಂಗಳೂರು: ಮೆದುಳು ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ನುಡಿಸಿದ ರೋಗಿ!

Srinivas Rao BV
ಬೆಂಗಳೂರು: ಗಿಟಾರ್ ಡಿಸ್ಟೋನಿಯಾ ಸಮಸ್ಯೆ ಎದುರಿಸುತ್ತಿದ್ದ ಗಿಟಾರ್ ವಾದಕರಿಗೆ ಬೆಂಗಳೂರಿನ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಪರೇಷನ್ ಟೇಬಲ್ ಮೇಲೆ ರೋಗಿ ಗಿಟಾರ್ ನುಡಿಸುತ್ತಿರುವಾಗ ಮೆದುಳಿನ ಶಸ್ತ್ರಚಿಕಿತ್ಸೆ ನಡೆದ ದೇಶದ ಮೊದಲ ಪ್ರಕರಣ ಇದಾಗಿದೆ. 
ಇಂಥದ್ದೊಂದು ಅಪರೂಪದ ಶಸ್ತ್ರಚಿಕಿತ್ಸೆ ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ನಡೆದಿದ್ದು, 37 ವರ್ಷದ ಅಭಿಷೇಕ್ ಪ್ರಸಾದ್ ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿಯಾಗಿದ್ದಾರೆ. ಗಿಟಾರ್ ನುಡಿಸುವ ಹವ್ಯಾಸ ಹೊಂದಿದ್ದ ಅಭಿಷೇಕ್ ಹೆಚ್ಚಿನ ಅಭ್ಯಾಸ ಮಾಡಿದ್ದರಿಂದ ಗಿಟಾರ್ ಡಿಸ್ಟೋನಿಯಾ, ಇದರಿಂದ ಬೆರಳುಗಳ ಚಲನೆಯಲ್ಲಿ ವ್ಯತ್ಯಯ ಉಂಟಾಗಿ ಗಿಟಾರ್ ನುಡಿಸಲು ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಭಿಷೇಕ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಶಸ್ತ್ರಚಿಕಿತ್ಸೆ ವೇಳೆ ಅವರು ಸಂಪೂರ್ಣ ಎಚ್ಚರವಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. 
ಎಂಆರ್‌ಐ ಯಂತ್ರದ ಸಹಾಯದಿಂದ ಅಭಿಷೇಕ್ ಅವರ ತಲೆಯಲ್ಲಿ ಸಣ್ಣ ರಂಧ್ರ ಕೊರೆದು, ನರಗಳಲ್ಲಿನ ದೋಷವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.  ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಚಲನೆಯನ್ನು ಕಳೆದುಕೊಂಡಿದ್ದ ಅವರ ಕಿರುಬೆರಳು ಹಾಗೂ ಉಂಗುರ ಬೆರಳು ಚೇತರಿಸಿಕೊಂಡಿವೆ ಎಂದು ವೈದ್ಯರು ಹೇಳಿದ್ದಾರೆ. ಇಂಥಹದ್ದೇ ಶಸ್ತ್ರಚಿಕಿತ್ಸೆ 2015 ರಲ್ಲಿ ಬ್ರೆಜಿಲ್ ನಲ್ಲಿ ನಡೆದಿತ್ತು.
SCROLL FOR NEXT