ಆರೋಗ್ಯ

ಹದಿಹರೆಯದಲ್ಲಿ ತಾಯ್ತನದಿಂದ ಇಳಿ ವಯಸ್ಸಿನಲ್ಲಿ ಹೃದ್ರೋಗ ಅಪಾಯ ಹೆಚ್ಚು: ಅಧ್ಯಯನ ವರದಿ

Sumana Upadhyaya
ನ್ಯೂಯಾರ್ಕ್: ಹದಿಹರೆಯದ ವಯಸ್ಸಿನಲ್ಲಿ ಮೊದಲ ಬಾರಿಗೆ ತಾಯಂದಿರಾಗುವ ಮಹಿಳೆಯರು ಜೀವನದಲ್ಲಿ ಮುಂದೆ ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳಿಂದ ಬಳಲುವ ಅಪಾಯ ಹೆಚ್ಚು ಎಂದು ಹೊಸ ಸಂಶೋಧನೆಯೊಂದು ಹೇಳುತ್ತದೆ.
ಮಹಿಳೆಯರು 20 ವರ್ಷಕ್ಕಿಂತ ಮೊದಲು ಮೊದಲ ಹೆರಿಗೆಯಾದರೆ ಫ್ರಿಮಿಂಗ್ಹ್ಯಾಮ್ ರಿಸ್ಕ್ ಸ್ಕೋರ್ ಎಂಬ ಹೃದಯರಕ್ತನಾಳದ ಅಪಾಯವನ್ನು ವಯಸ್ಸಾದ ನಂತರ ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಸಂಶೋಧನೆ ಹೇಳುತ್ತದೆ.
ಇದಕ್ಕೆ ಬದಲಾಗಿ 20 ವರ್ಷ ಕಳೆದ ನಂತರ ಮೊದಲ ಹೆರಿಗೆಯಾದ ಮಹಿಳೆಯರಲ್ಲಿ ಹೃದಯ ಮತ್ತು ರಕ್ತನಾಳಗಳ ಸಮಸ್ಯೆ ಕಡಿಮೆ. ಹೆರಿಗೆಯಾಗದಿರುವ ಮಹಿಳೆಯರಲ್ಲಿ ಹೃದ್ರೋಗ ಸಮಸ್ಯೆಗಳು ಬಹಳ ಕಡಿಮೆ ಎಂದು ಅಧ್ಯಯನ ಹೇಳುತ್ತದೆ.
ಜೀವನಶೈಲಿಯ ವಿಚಾರದಲ್ಲಿ ಹದಿಹರೆಯದ ತಾಯಂದಿರು ಹೆಚ್ಚು ಜಾಗರೂಕರಾಗಿರಬೇಕು. ದೇಹತೂಕ ಅಧಿಕವಾಗದಂತೆ ನೋಡಿಕೊಳ್ಳುವುದು, ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು, ಸಾಕಷ್ಟು ಶಾರೀರಿಕ ಚಟುವಟಿಕೆ ನಡೆಸಬೇಕಾಗಿರುವುದು ಅತ್ಯಗತ್ಯ ಎಂದು ಹವೈ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧನೆಯ ಪ್ರಮುಖ ಲೇಖಕ ಕ್ಯಾಥರೀನ್ ಪಿರ್ಕ್ಲೆ ಹೇಳಿದ್ದಾರೆ.
ಇಂತಹ ಹದಿಹರೆಯದ ಮಹಿಳೆಯರ ಹೆರಿಗೆ ಮೇಲೆ ವೈದ್ಯರು ಹೆಚ್ಚು ಎಚ್ಚರಿಕೆಯಿಂದ ಗಮನ ನೀಡಬೇಕಾಗುತ್ತದೆ. ಅಮೆರಿಕಾದ ಹೃದಯ ಸಂಸ್ಥೆಯ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದ್ದು ಅಧ್ಯಯನಕ್ಕಾಗಿ 65ರಿಂದ 74 ವರ್ಷದೊಳಗಿನ 1,047 ಮಹಿಳೆಯರನ್ನು ಪರೀಕ್ಷೆಗೊಳಪಡಿಸಲಾಯಿತು. ಕೆನಡಾ, ಅಲ್ಬೇನಿಯಾ, ಕೊಲಂಬಿಯಾ ಮತ್ತು ಬ್ರೆಜಿನ್ ಲ ಇಳಿ ವಯಸ್ಸಿನ ಮಹಿಳೆಯರನ್ನು ಪರೀಕ್ಷೆಗೊಳಪಡಿಸಲಾಯಿತು.
SCROLL FOR NEXT