ಆರೋಗ್ಯ

ಮಗುವಿನ ಎಡಗೈ-ಬಲಗೈ ಬಳಕೆಗೂ ತಾಯಿಯ ಸ್ತನ್ಯಪಾನಕ್ಕೂ ಸಂಬಂಧವಿದೆ!

Manjula VN
ನ್ಯೂಯಾರ್ಕ್: ತಾಯಿಯ ಸ್ತನಪಾನಕ್ಕೂ ಮಗುವಿನ ಎಡಗೈ-ಬಲಗೈ ಬಳಕೆಗೂ ಒಂದಕ್ಕೊಂದು ಸಂಬಂಧವಿದೆ ಎಂದು ಸಂಶೋಧನೆಯೊಂದು ಹೇಳಿದೆ. 
 ಕಡಿಮೆ ಪ್ರಮಾಣದಲ್ಲಿ ಎದೆಹಾಲು ಕುಡಿದ ಮಕ್ಕಳಲ್ಲಿ ಎಡಗೈ ಬಳಕೆ ಹೆಚ್ಚಾಗಿರುತ್ತದೆ ಹಾಗೂ 9 ತಿಂಗಳಿಗಿಂತ ಹೆಚ್ಚು ಕಾಲ ಎದೆಹಾಲನ್ನು ಕುಡಿದ ಮಕ್ಕಳು ಬಲಗೈಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆಂದು ವಾಷಿಂಗ್ಟನ್'ನ ವಿಶ್ವವಿದ್ಯಾಲಯವೊಂದು ಹೇಳಿದೆ. 
ಇನ್ನು ಬಾಟಲಿ ಹಾಲನ್ನು ಕುಡಿದ ಮಕ್ಕಳೂ ಹೆಚ್ಚು ಎಡಗೈ ಸಾಮರ್ಥ್ಯವನ್ನೇ ಹೊಂದಿರುತ್ತಾರೆಂದು ವರದಿಯಲ್ಲಿ ತಿಳಿಸಲಾಗಿದೆ. ಇದಕ್ಕೆ ಕಾರಣ ನಡವಳಿಕೆಯನ್ನು ನಿಯಂತ್ರಿಸುವ ತಲೆಯಲ್ಲಿನ ಮಿದುಳು ಎಡಗೈ ಹಾಗೂ ಬಲಗೈಯನ್ನೂ ನಿಯಂತ್ರಿಸುತ್ತಿರುತ್ತದೆ. ಹಾಲುಣಿಸುವ ವೇಳೆ ಇದು ಎಡ ಹಾಗೂ ಬಲಗೈ ಬಳಕೆ ಕ್ರಿಯೆಗಳನ್ನೂ ನಿರ್ಧರಿಸುತ್ತಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಿದುಳು ಘನೀಕರಿಸುವ ಸಂದರ್ಭದಲ್ಲಿ ಸ್ತನಪಾನವು ಎಡ ಹಾಗೂ ಬಲಗೈನ ಪ್ರಭುತ್ವದ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಹೀಗಾಗಿ ಮಗುವಿಗೆ 6-9 ತಿಂಗಳ ಕಾಲ ಸ್ತನಪಾನ ಮಾಡಿಸುವುದು ಅತ್ಯಂತ ಮುಖ್ಯವಾಗಿರುತ್ತದೆ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಫಿಲಿಪ್ ಹುಜೋಯೆಲ್ ಅವರು ಹೇಳಿದ್ದಾರೆ. 
ಸಂಶೋಧನೆಗೆ ಒಟ್ಟು 62,129 ತಾಯಿ-ಮಗು ಜೋಡಿಗಳನ್ನು ಬಳಸಿಕೊಳ್ಳಲಾಗಿದೆ. ಈ ವೇಳೆ ಮಕ್ಕಳ ಮಿದುಳಿನ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಲಾಗಿದೆ. ಸಂಶೋಧನೆಯಲ್ಲಿ 1-6 ತಿಂಗಳಿಗಿಂದಲೂ ಕಡಿಮೆ ಅವಧಿಯಲ್ಲಿ ತಾಯಿಯ ಹಾಲನ್ನು ಕುಡಿದ ಮಕ್ಕಳಲ್ಲಿ ಎಡಗೈ ಪ್ರಭುತ್ವತೆ ಹೆಚ್ಚಾಗಿರುವುದು, 9 ತಿಂಗಳಿಗಿಂತ ಹೆಚ್ಚು ಕಾಲ ಹಾಲು ಕುಡಿದ ಮಕ್ಕಳಲ್ಲಿ ಬಲಗೈ ಪ್ರಭುತ್ವತೆ ಹೆಚ್ಚಾಗಿರುವುದು ಕಂಡು ಬಂದಿದೆ. ಬಾಟಲಿ ಹಾಲು ಕುಡಿದ ಶೇ.15ರಿಂದ 22 ರಷ್ಟು ಮಕ್ಕಳಲ್ಲಿಯೂ ಎಡಗೈ ಪ್ರಭುತ್ವತೆ ಹೆಚ್ಚಾಗಿರುವುದು ಕಂಡು ಬಂದಿದೆ. 
ಸ್ತನಪಾನದಿಂದಲೇ ಬಲಗೈ ಅಥವಾ ಎಡಗೈ ಪ್ರಭುತ್ವ ನಿರ್ಧರಿತಗೊಳ್ಳುತ್ತದೆ ಎಂಬುದು ಅಧ್ಯಯನದ ಅರ್ಥವಲ್ಲ. ಬಲ ಅಥವಾ ಎಡಗೈ ಎಂಬುದು ಮಗುವಿನ ಜನ್ಮ ಪಡೆಯುವುದಕ್ಕೂ ಮೊದಲೇ ಹೊಂದಿಕೊಂಡು ಬಂದಿರುತ್ತದೆ. ವಂಶವಾಹಿಯಿಂದಲೂ ಭಾಗಶಃ ಇದನ್ನು ನಿರ್ಧರಿಸಲಾಗುತ್ತದೆ ಎಂದು ಫಿಲಿಪ್ ಹುಜೋಯೆಲ್ ಅವರು ತಿಳಿಸಿದ್ದಾರೆ. 
SCROLL FOR NEXT