ಆರೋಗ್ಯ

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರೇ, ನಿಮ್ಮ ಡಿಎನ್ಎ ಹಾನಿ ಬಗ್ಗೆ ಎಚ್ಚರವಿರಲಿ!

Srinivas Rao BV
ಹಾಂಕ್ ಕಾಂಗ್: ನಿರಂತರವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದರೆ ನಿದ್ದೆಯ ವೇಳೆ ಮಾತ್ರವೇ ಬದಲಾವಣೆಯಾಗುವುದಿಲ್ಲ, ಬದಲಾಗಿ ದೇಹದಲ್ಲಿ ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆಗಳು ಬದಲಾವಣೆಯಾಗುತ್ತದೆ ಎಂಬುದು ಗೊತ್ತೇ ಇದೆ. ಈ ಪಟ್ಟಿಗೆ ಈಗ ಡಿಎನ್ ಎ ಸಹ ಸೇರ್ಪಡೆಯಾಗಿದೆ. 
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ನಿದ್ದೆಯ ವೇಳೆ ಬದಲಾವಣೆಯಾಗುವುದರಿಂದ ಡಿಎನ್ಎ ರಚನೆಯಲ್ಲಿಯೂ ಬದಲಾವಣೆಗಳಾಗಿ ಅಂತಿಮವಾಗಿ ಮಧುಮೇಹ, ಹೃದಯರಕ್ತನಾಳ, ನರವೈಜ್ಞಾನಿಕ, ಮತ್ತು ಶ್ವಾಸಕೋಶದ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
ಅರಿವಳಿಕೆ ಶೈಕ್ಷಣಿಕ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಡಿಎನ್ ಎ ಸರಿಪಡಿಸುವ ವಂಶವಾಹಿ ಲಕ್ಷಣಗಳು ಕುಗ್ಗುತ್ತವೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವವರಲ್ಲಿ ನಿದ್ದೆ ಕಡಿಮೆಯಾದಷ್ಟೂ ಈ ಗುಣಲಕ್ಷಣಗಳು ಕ್ರಮೇಣ ಕುಗ್ಗುತ್ತವೆ. ಇದರಿಂದಾಗಿ ಡಿಎನ್ಎ ಹಾಳಾಗಿ ಅನೇಕ ಸಮಸ್ಯೆಗಳು ಎದುರಾಗುವುದಕ್ಕೆ ದಾರಿ ಮಾಡಿಕೊಡುತ್ತವೆ. 
ರಾತ್ರಿ ಪಾಳಿಯಲ್ಲಿ ಕೆಲಸ ಮಾಡದೇ ಇರುವವರಿಗೆ ಹೋಲಿಕೆ ಮಾಡಿದರೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಡಿಎನ್ಎ  ಶೇ.30 ರಷ್ಟು ಹಾಳಾಗಿರುತ್ತದೆ. ಇನ್ನು ನಿದ್ದೆ ಕಡಿಮೆಯಾಗಿರುವ ಪ್ರಾರಂಭದ ಹಂತದಲ್ಲಿ ಇನ್ನೂ ಶೇ.25 ರಷ್ಟು ಡಿಎನ್ಎ ಹಾಳಾಗುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ. 
ಡಿಎನ್ ಎ ಡ್ಯಾಮೇಜ್ ಅಂದರೆ ಡಿಎನ್ಎ ಮೂಲ ರಚನೆಯಲ್ಲಿಯೇ ಬದಲಾವಣೆಯಾಗುತ್ತದೆ ಎನ್ನುತ್ತಾರೆ ಹಾಂಕ್ ಕಾಂಗ್ ನ ವಿವಿಯ ಸಂಶೋಧಕರಾದ ಎಸ್ ಡಬ್ಲ್ಯೂ ಚೋಯ್. ವೈದ್ಯರ ಮೇಲೆಯೇ ಈ ಅಧ್ಯಯನವನ್ನು ಪ್ರಯೋಗಿಸಲಾಗಿದ್ದು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಿದ್ದ 28-33 ಹರೆಯದ ವೈದ್ಯರ ರಕ್ತವನ್ನು ಸಂಗ್ರಹಿಸಲಾಗಿದೆ. 
SCROLL FOR NEXT