ಆರೋಗ್ಯ

ಹೃದಯ, ಕ್ಯಾನ್ಸರ್, ಮಧುಮೇಹ ಸಮಸ್ಯೆಗಳಿಗೆ ಈ 'ನೀಲಿ ಆಲೂಗಡ್ಡೆ' ರಾಮಬಾಣ!

Srinivasamurthy VN

ಪಾಟ್ನಾ: ಹೃದಯ, ಕ್ಯಾನ್ಸರ್, ಮಧುಮೇಹ ರೋಗಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾದ ನೀಲಿ ಆಲೂಗಡ್ಡೆ ಈ ಮೂರು ರೋಗಗಳಿಗೆ ರಾಮಬಾಣವಾಗಬಲ್ಲದು ಎಂದು ಹೇಳಲಾಗಿದೆ.

ಪಾಟ್ನಾದ ಕೇಂದ್ರ ಆಲೂಗಡ್ಡೆ ಸಂಶೋಧನಾ ಕೇಂದ್ರದಲ್ಲಿ ಹೊಸ ಬಗೆಯ ಆಲೂಗಡ್ಡೆ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಬಿಹಾರದ ವೈಶಾಲಿ ಜಿಲ್ಲೆಯ ಹಳ್ಳಿಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಬೆಳೆಸಲಾಗುತ್ತಿದೆ. ‘ನೀಲಿ ಗಿಡಮೂಲಿಕೆ ಆಲೂಗಡ್ಡೆ’ ಎಂದು ಕರೆಯಲ್ಪಡುವ ಈ ತಳಿಯು ಕ್ಯಾನ್ಸರ್, ಮಧುಮೇಹ ಮತ್ತು  ಹೃದಯ ರೋಗಿಗಳಿಗೆ ಪ್ರಯೋಜನಕಾರಿಯಾದ ಗಿಡಮೂಲಿಕಾ ಗುಣಗಳನ್ನು ಹೊಂದಿದೆ ಎನ್ನಲಾಗಿದೆ. ಈ ಕುರಿತಂತೆ ಕೇಂದ್ರ ಆಲೂಗಡ್ಡೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಶಂಭು ಕುಮಾರ್ ಅವರು ಮಾಹಿತಿ ನೀಡಿದ್ದು, ಇತರೆ ಆಲೂಗೆಡ್ಡೆಗಳಿಗೆ ಹೋಲಿಕೆ ಮಾಡಿದರೆ  'ನೀಲಕಂತ್' ಎಂಬ ಈ ನೀಲಿ-ಆಲೂಗಡ್ಡೆ  ವೈವಿಧ್ಯಮಯ ಗುಣಗಳನ್ನು ಹೊಂದಿದೆ. ಇತರ ವಿಧದ ಆಲೂಗಡ್ಡೆಗಳಿಗಿಂತ ಹೆಚ್ಚು ಪ್ರಯೋಜನಕಾರಿ ಗಿಡಮೂಲಿಕೆ ಗುಣಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ವೈಶಾಲಿ ಜಿಲ್ಲೆಯ ನಮೀಡಿಹ್‌ನ ಪ್ರಗತಿಪರ ರೈತ ಜಿತೇಂದ್ರ ಕುಮಾರ್ ಸಿಂಗ್ ಈ ತಳಿ ಆಲೂಗಡ್ಡೆಯನ್ನು ಬೆಳೆಸುತ್ತಿದ್ದು, ಈ ಹೊಸ ಆಲೂಗಡ್ಡೆಯ ವಿಶೇಷ ವಿಷಯವೆಂದರೆ ಅದರ ಒಳ ಮತ್ತು ಹೊರ ಭಾಗಗಳ ಸೇವನೆಯು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು  ಸಹಾಯ ಮಾಡುತ್ತದೆ. ಅಲ್ಲದೆ ಆಲೂಗಡ್ಡೆ ಆಂಟಿ-ಆಕ್ಸಿಡೆಂಟ್ ಫೈಬರ್, ಮೆಗ್ನೀಸಿಯಮ್ ಮತ್ತು ತಾಮ್ರದಿಂದ ಸಮೃದ್ಧವಾಗಿದೆ. ಆಲೂಗೆಡ್ಡೆಯ ಈ ಗುಣಗಳೇ ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ರೋಗಿಗಳಿಗೆ ವರದಾನವಾಗಬಲ್ಲದು. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ ನ ಹೆಚ್ಚಿನ ಸೇವನೆಯು ಆರೋಗ್ಯಕರ  ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ದೃಷ್ಟಿ ಸಾಮರ್ಥ್ಯವನ್ನು ಮತ್ತು ಕಣ್ಣಿನ ಆರೋಗ್ಯ ವೃದ್ಧಿ ಸೇರಿದಂತೆ ಹಲವಾರು ಪ್ರಯೋಜನಗಳಿಗೆ ಸಂಬಂಧಿಸಿದ ಗುಣಲಕ್ಷಣಗಳನ್ನು ಹೊಂದಿದೆ. ಅಂತೆಯೇ ಹೃದ್ರೋಗ, ಕೆಲವು ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಿಂಗ್ ಹೇಳಿದರು.

ವರ್ಷಗಳ ಪ್ರಯೋಗದ ನಂತರ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ವಿಧದ ಒಂದು ಆಲೂಗಡ್ಡೆ ಸುಮಾರು 60 ರಿಂದ 80 ಗ್ರಾಂ ತೂಗುತ್ತದೆ. ನೀಲಿ ಗಿಡಮೂಲಿಕಾ ಆಲೂಗಡ್ಡೆಯನ್ನು ಬೇಯಿಸಿದ ನಂತರ ಸೇವಿಸಬಹುದು. ನಾವು ನಿತ್ಯ ಸೇವಿಸುವ ಸಾಲಾಡ್ನ ಭಾಗವಾಗಿಯೂ ಈ ಆಲೂಗೆಡ್ಡೆಯನ್ನು ಸೇವಿಸಬಹುದು.  ಇದರ ಹೆಚ್ಚಿನ ಇಳುವರಿ ನೀಡುವ ಗುಣವು ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ಗಳಿಕೆಯ ಅವಕಾಶವನ್ನು ನೀಡುತ್ತದೆ. ಈ ಹೊಸ ಬಗೆಯ ಆಲೂಗೆಡ್ಡೆಗೆ ಇನ್ನೂ ವಿಜ್ಞಾನಿಗಳು ಹೆಸರು ನೀಡಿಲ್ಲ. ಕೃಷಿ ವಿಜ್ಞಾನಿಗಳು, ಕೃಷಿ ಪ್ರಯೋಗ ಉದ್ದೇಶಗಳಿಗಾಗಿ ಕೋಡ್ ನೀಡಿದ್ದಾರೆ ಎಂದು  ಕೃಷಿ ಮಾಡುತ್ತಿರುವ ರೈತ  ಜಿತೇಂದ್ರ ಕುಮಾರ್ ಸಿಂಗ್ ಹೇಳಿದರು.
 

SCROLL FOR NEXT