ಆರೋಗ್ಯ

ಹಾಲುಣಿಸುವ ತಾಯಂದಿರೇ ಎಚ್ಚರ: ಎದೆಹಾಲಿನಲ್ಲಿ ಪೌಷ್ಟಿಕಾಂಶ ಕೊರತೆಯಿಂದ ನವಜಾತ ಶಿಶುಗಳಿಗೆ ಅಪಾಯ!

Manjula VN

ಬೆಂಗಳೂರು: 6 ತಿಂಗಳ ಒಳಗಿರುವ ಮಕ್ಕಳಿಗೆ ಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ಎದುರಾಗುವ ಪೌಷ್ಟಿಕಾಂಶ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. 

ವಿಷಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಿಂದ ಈ ಮಾಹಿತಿ ಬಹಿರಂಗಗೊಂಡಿದೆ. 

ಮಕ್ಕಳ ಹೃದ್ರೋಗ ತಜ್ಞರಾದ ಡಾ. ಉಷಾ, ಡಾ. ಜಯರಂಗನಾಥ್ ನೇತೃತ್ವದ ವೈದ್ಯರ ತಂಡವು ‘ಪಾಲಿಶ್ ಮಾಡಲಾದ ಅಕ್ಕಿ, ಆಹಾರ ಸೇವನೆ ನಿರ್ಬಂಧ ಮತ್ತು ಶಿಶುಗಳಲ್ಲಿ ಹೃದಯ ವೈಫಲ್ಯ’ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ.

ಈ ಪ್ರಕಾರ, ದೇಶದ ದಕ್ಷಿಣ ಹಾಗೂ ಈಶಾನ್ಯ ಭಾಗಗಳಲ್ಲಿ ಪಾಲಿಶ್ ಮಾಡಿದ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಪಾಲಿಶ್ ಮಾಡಿದ ಬಳಿಕ ಅಕ್ಕಿಯ ಮೇಲ್ಪದರ ನಾಶವಾಗುತ್ತದೆ. ಆ ಮೇಲ್ಪದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ1 ಪ್ರಮಾಣ ಇರುತ್ತದೆ ಎಂಬ ಅಂಶವನ್ನು ಸಂಸ್ಥೆಯು ವರದಿಯಲ್ಲಿ ಉಲ್ಲೇಖಿಸಿದೆ.

ವಿಟಮಿನ್ಸ್ ಗಳ ಕೊರತೆಯಿಂದಾಗಿ ಆಸ್ಪತ್ರೆಗೆ ಈ ವರೆಗೂ ಒಟ್ಟಾರೆ 250 ನವಜಾತ ಶಿಶುಗಳು ದಾಖಲಾಗಿದ್ದು, ಈ ಕುರಿತು ಅಧ್ಯಯನ ನಡೆಸಿದ ವೈದ್ಯರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ. 

ಮಕ್ಕಳು ಶ್ವಾಸಕೋಶದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ವಾಂತಿ, ಉಸಿರಾಟ, ಕಿರಿಕಿರಿಯಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ. ಮಕ್ಕಳು ಎಲೆಹಾಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿರುವುದೂ ಕೂಡ ಕಂಡು ಬಂದಿದೆ. ಹಾಲುಣಿಸಿವ ತಾಯಿಯಂದಿರು ಪಾಲಿಶ್‌ ಮಾಡಿದ ಅಕ್ಕಿಯನ್ನು ಸೇವನೆ ಮಾಡುತ್ತಿರುವುದರಿಂದ ವಿಟಮಿನ್ ಬಿ 1 (ಥಯಾಮಿನ್) ಕೊರತೆ ಎದುರಾಗಿದ್ದು, ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಸಂಶೋಧನೆ ಮಾಹಿತಿ ನೀಡಿದೆ. 

ಬಾಣಂತಿಯರಿಗೆ ರಾಜ್ಯದಲ್ಲಿ ಸಂಪ್ರದಾಯದಂತೆ ಆರೈಕೆ ಮಾಡಲಾಗುತ್ತದೆ. ಪ್ರತೀಯೊಂದು ರಾಜ್ಯದಲ್ಲಿ ವಿವಿಧ ರೀತಿಯಲ್ಲಿ ವಿವಿಧ ಸಂಪ್ರದಾಯಗಳಂತೆ ಆರೈಕೆ ಮಾಡಲಾಗುತ್ತದೆ. ಬಾಣಂತಿಯರಿಗೆ ಪಾಲಿಶ್ ಮಾಡಿಕ ಅಕ್ಕಿಯಿಂದ ಮಾಡಿದ ಅನ್ನ, ತರಕಾರಿಗಳಿಲ್ಲದೆಯೇ ಮಾಡಿದ ಬೇಳೆ ಸಾರು/ರಸವನ್ನು ನೀಡಲಾಗುತ್ತದೆ. ಮಗು ಹುಟ್ಟಿದ ಬಳಿಕ 2-3 ತಿಂಗಳು ಇದೇ ರೀತಿಯ ಆಹಾರವನ್ನು ನೀಡಲಾಗುತ್ತದೆ. ಇದರಿಂದ ಹಾಲುಣಿಸುವ ತಾಯಿಯಂದಿರಲ್ಲಿ ಪೌಷ್ಟಿಕಾಂಶ ಕೊರತೆ ಎದುರಾಗುತ್ತಿದೆ ಎಂದು ಅಧ್ಯಯನದ ಪ್ರಮುಖ ಸಂಶೋಧಕರಲ್ಲಿ ಒಬ್ಬರಾದ ಜಯದೇವ ಆಸ್ಪತ್ರೆಯ ಪೀಡಿಯಾಟ್ರಿಕ್ ಕಾರ್ಡಿಯಾಲಜಿ ವಿಭಾಗದ ವೈದ್ಯೆ ಉಷಾ ಎಂ ಕೆ ಶಾಸ್ತ್ರಿಯವರು ಹೇಳಿದ್ದಾರೆ. 

ಆಸ್ಪತ್ರೆಗೆ ದಾಖಲಾದ 250 ಶಿಶುಗಳ ಪೈಕಿ 230 ಶಿಶುಗಳು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದು, ಉಳಿದ ಮಕ್ಕಳು ಅಸುನೀಗಿವೆ. ಸಾಕಷ್ಟು ಮಕ್ಕಳನ್ನು ಐಸಿಯುವಿನ ಅಗತ್ಯವಿದ್ದು, ಐಸಿಯುವಿನಲ್ಲಿ ಇರಿಸಲಾಗಿದೆ. ಹಲವು ಮಕ್ಕಳಿಗೆ ಕೃತಕ ಉಸಿರಾಟವನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. 

"ಥಯಾಮಿನ್ ಕೊರತೆಯು ಶ್ವಾಸಕೋಶದಲ್ಲಿ ಅಧಿಕ ರಕ್ತದೊತ್ತಡ ಎದುರಾಗುವಂತೆ ಮಾಡುತ್ತದೆ, ಹೃದಯದ ಬಲಭಾಗವು ಹಿಗ್ಗುವಂತೆ ಮಾಡುತ್ತದೆ. ಇದರಿಂದ ಹೃದಯದ ಬಲಭಾಗದಲ್ಲಿ ಮತ್ತು ಶ್ವಾಸಕೋಶದ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಾಗುತ್ತದೆ. ಇದು ಶಿಶುಗಳಲ್ಲಿ ಹೃದಯ ಸ್ತಂಭನವಾಗುವಂತೆ ಮಾಡುತ್ತದೆ ಎಂದಿದ್ದಾರೆ. 

SCROLL FOR NEXT