ಆರೋಗ್ಯ

ಕೊರೊನಾ ವಾಸಿಯಾದವರಲ್ಲಿ ಕೂದಲು ಉದುರುವಿಕೆ ಅಡ್ಡ ಪರಿಣಾಮ ಪತ್ತೆ

Harshavardhan M

ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಹಲವು ಅಡ್ಡಪರಿಣಾಮಗಳು ಕಂಡುಬಂದಿದ್ದವು. ಸುಸ್ತು ಮತ್ತು ತೂಕ ಇಳಿಕೆ ಕಂಡುಬರುವುದಾಗಿ ಈ ಹಿಂದೆಯೇ ಹೇಳಲಾಗುತ್ತಿತ್ತು. ಇದೀಗ ತಲೆಗೂದಲು ಉದುರುವಿಕೆ ಸಮಸ್ಯೆ ಎದುರಿಸುತ್ತಿರುವುದಾಗಿ ವೈದ್ಯರ ಬಳಿ ಬರುತ್ತಿರುವ ಕೊರೊನಾ ಗುಣಮುಖರ ಸಂಖ್ಯೆ ಹೆಚ್ಚುತ್ತಿದೆ. 

46 ವರ್ಷದ ರೋಹಿಣಿ ಕೂಡ ಅವರಲ್ಲೊಬ್ಬರು. ಮೇ ತಿಂಗಳಲ್ಲಿ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಕೊರೊನಾದಿಂದ ಗುಣಮುಖರಾಗಿ ಒಂದು ತಂಗಳು ಕಳೆದ ನಂತರವೂ ಅವರು ಹಲವು ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದರು. ಅಗಸ್ಟ್ ತಿಂಗಳಲ್ಲಿ ತಲೆಗೂದಲು ಉದುರುವುದು ಹೆಚ್ಚಾಯಿತು ಎಂದವರು ವೈದ್ಯರ ಬಳಿ ತೆರಳಿದ್ದರು. 

ಈ ಬಗ್ಗೆ ವೈದ್ಯರು ಹೇಳುವುದಿಷ್ಟು. ಗಂಭೀರ ಕಾಯಿಲೆಗಳಿಂದ ಗುಣಮುಖರಾದಾಗ ತಲೆಗೂದಲು ಉದುರುವುದು ಸಾಮಾನ್ಯ. ತಲೆಗೂದಲು ಉದುರುವಿಕೆ ಕೊರೊನಾಗೆ ಸೀಮಿತವಲ್ಲ. ಮಲೇರಿಯ ಮತ್ತು ಟೈಫಾಯಿಡ್ ಬಂದಾಗಲೂ ರೋಗಿಗಳಲ್ಲಿ ತಲೆಗೂದಲು ಉದುರುವಿಕೆ ಕಾಣಬಹುದು ಎಂದು ವೈದ್ಯರು ಹೇಳಿದ್ದಾರೆ. 

ಗಂಭೀರ ಕಾಯಿಲೆಗಳಿಂದ ಕೂದಲಿನ ಬೇರುಗಳು ಬಲಹೀನಗೊಳ್ಳುತ್ತವೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆಯನ್ನು ಟೆಲೊಜನ್ ಎಫ್ಲುವಿಯುಂ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ತಾತ್ಕಾಲಿಕವಾದುದು ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಕೂದಲು ಬೆಳವಣಿಗೆಯಲ್ಲಿ ಎರಡು ಬಗೆಯ ಹಂತಗಳನ್ನು ಗುರುತಿಸಲಾಗುತ್ತದೆ. ಬೆಳೆಯುವ ಹಂತ(growing phase), ವಿರಾಮದ ಹಂತ(resting phase). ವಿರಾಮದ ಹಂತದಲ್ಲಿ ಕೂದಲು ಉದುರುವಿಕೆ ಕಂಡುಬರುತ್ತದೆ. ಕೊರೊನಾ ಅಥವಾ ಇತರೆ ಗಂಭೀರ ಕಾಯಿಲೆ ನಂತರ ಗುಣಮುಖರಾದಾಗ ಕೂದಲು ವಿರಾಮ ಸ್ಥಿತಿಯಲ್ಲಿರುತ್ತದೆ. ಈ ಸಮಯದಲ್ಲಿ ದಿನಕ್ಕೆ ೧೦೦ ಕೂದಲು ಉದುರುವುದು ಸಾಮಾನ್ಯ. ಅದಕ್ಕಿಂತ ಹೆಚ್ಚಾಗಿ ಉದುರುತ್ತಿದ್ದರೆ ವೈದ್ಯರನ್ನು ಕಾಣಬೇಕು ಹಾಗೂ ಅದಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.  

SCROLL FOR NEXT