ಆರೋಗ್ಯ

ಪೌಷ್ಟಿಕಾಂಶದ ಕೊರತೆ, ಬಡತನದಿಂದ ರಾಜ್ಯದಲ್ಲಿ ಮಕ್ಕಳ ಅಂಧತ್ವ ಹೆಚ್ಚಳ

Srinivas Rao BV

ಕರ್ನಾಟಕದ ಗ್ರಾಮೀಣ ಭಾಗದ ಮಕ್ಕಳು, ಪ್ರಮುಖವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದ ಮಕ್ಕಳು ಕೋವಿಡ್-19 ಕಾಲದಿಂದ ಪೌಷ್ಟಿಕಾಂಶದ ಕೊರತೆಯನ್ನು ಎದುರಿಸುತ್ತಿದ್ದು  ಬಾಲ್ಯದ ಅಂಧತ್ವ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. 

ನೇತ್ರಶಾಸ್ತ್ರಜ್ಞರ ಪ್ರಕಾರ, 1,000 ಮಕ್ಕಳ ಪೈಕಿ 0.8 ಮಕ್ಕಳು ಹಾಗೂ ದೇಶದಲ್ಲಿ 1,000 ಮಕ್ಕಳ ಪೈಕಿ ಒಂದು ಮಗುವಿಗೆ ಬಾಲ್ಯದ ಅಂಧತ್ವ ಸಮಸ್ಯೆ ಕಾಡುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

ಇನ್ನೂ ನಿಖರವಾದ ಡೇಟಾ ಸಂಗ್ರಹಿಸುವುದಕ್ಕೆ ತಳಮಟ್ಟದಲ್ಲಿ ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ. ನಮ್ಮ ಅನುಭವದಲ್ಲಿ ರಾಯಚೂರು, ಕೊಪ್ಪಳ, ಕಲಬುರಗಿ ಹಾಗೂ ಬೀದರ್ ಗಳಲ್ಲಿ ಹೆಚ್ಚಿನ ಮಕ್ಕಳಿದ್ದಾರೆ. ಈ ಭಾಗಗಳಲ್ಲಿ ಮಕ್ಕಳಲ್ಲಿ ಹಾಗೂ ತಾಯಂದಿರಲ್ಲಿ ಅಪೌಷ್ಟಿಕತೆ ಹೆಚ್ಚಾಗಿರುತ್ತದೆ ಎಂದು ಡಾ. ಬಿಂದ್ಯಾ ಹಪಾನಿ, ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ನೇತ್ರಶಾಸ್ತ್ರಜ್ಞರು ಹೇಳಿದ್ದಾರೆ. 

ವರ್ಚ್ಯುಯಲ್ ಪ್ರೆಸ್ ಮೀಟ್ ನಲ್ಲಿ ಮಾತನಾಡಿರುವ ಬಿಂದ್ಯ, ಭಾರತದಲ್ಲಿ ಬಾಲ್ಯದ ಅಂಧತ್ವಕ್ಕೆ ಚಿಕಿತ್ಸೆ ನೀಡದ ವಕ್ರೀಕಾರಕ ದೋಷಗಳು, ದಡಾರದಿಂದ ಉಂಟಾಗುವ ಕಾರ್ನಿಯಲ್ ಅಪಾರದರ್ಶಕತೆ, ವಿಟಮಿನ್ ಎ ಕೊರತೆ, ನೇತ್ರ ಸೋಂಕುಗಳಾದ ಕಣ್ಣಿನ ಸೋಂಕುಗಳು ಅಥವಾ ಸಾಂಪ್ರದಾಯಿಕ ಕಣ್ಣಿನ ಪರಿಹಾರಗಳ ವಿಷತ್ವ, ಜನ್ಮಜಾತ ಕಣ್ಣಿನ ಪೊರೆಗಳು, ಜನ್ಮಜಾತ ಗ್ಲುಕೋಮಾ ಮತ್ತು ಪ್ರಿಟ್ಯೂರಿಟಿಯ ರೆಟಿನೋಪತಿ (ROP).ಗಳು ಕಾರಣಗಳಾಗಿವೆ.

ಗ್ರಾಮೀಣ ಭಾಗದಲ್ಲಿ ಕೋವಿಡ್-19 ಬಡತನವನ್ನು ಹೆಚ್ಚಿಸಿದೆ ಎಂಬುದನ್ನು ಒಪ್ಪಿಕೊಂಡಿರುವ ಮಿಂಟೋ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಜಾತ ರಾಥೋಡ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದು, ಪೌಷ್ಟಿಕಾಂಶದ ಕಾರಣದಿಂದ ಬಾಲ್ಯದ ಅಂಧತ್ವದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಜನ್ಮಜಾತ ರೆಟಿನಾ ಪ್ರಕರಣಗಳು ಬಳ್ಳಾರಿಯಿಂದ ಹೆಚ್ಚು ವರದಿಯಾಗುತ್ತಿವೆ. ಆದರೆ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇ.20-30 ರಷ್ಟು ಏರಿಕೆ ಕಂಡಿದ್ದೇವೆ. ಇನ್ನು ಆನ್ ಲೈನ್ ತರಗತಿಗಳು ಹೆಚ್ಚಾಗಿರುವುದರಿಂದ ವಕ್ರೀಕಾರಕ ದೋಷ (Refractive error) ಪ್ರಕರಣಗಳ ಸಂಖ್ಯೆಗಳಲ್ಲಿ ಏರಿಕೆ ಕಾಣುತ್ತಿದ್ದೇವೆ ಎಂದು ಹೇಳಿದ್ದಾರೆ. 

ಜನನದ ಸಮಯದಲ್ಲಿ ಅಸಮಂಜಸವಾದ ಕಣ್ಣುಗಳು ಅಥವಾ ಅಡ್ಡ ಕಣ್ಣುಗಳು, ಕಣ್ಣಿನಲ್ಲಿ ಯಾವುದೇ ಅಸ್ವಸ್ಥತೆ, ಕೆಂಪು ಅಥವಾ ಕಣ್ಣಿನ ನಿರಂತರ ಉಜ್ಜುವಿಕೆ, ತಲೆನೋವು, ರೆಟಿನಾದ ಮೇಲೆ ಬಿಳಿ ಕಲೆಗಳು ಇತ್ಯಾದಿ ಸಮಸ್ಯೆಗಳನ್ನು ಪೋಷಕರು ಮಕ್ಕಳಲ್ಲಿ ಕಂಡು ಬಂದರೆ ಅದನ್ನು ನಿರ್ಲಕ್ಷ್ಯಿಸದೇ ವೈದ್ಯರನ್ನು ಸಂಪರ್ಕಿಸಬೇಕಾಗಿದೆ. 

ಇನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ವಿಷನ್ ಹೆಲ್ತ್ ಪಾಲಿಸಿ ನೀಡಿದ್ದ ವರದಿಯನ್ನು ಸರ್ಕಾರ ಜಾರಿಗೊಳಿಸದೇ ನೆನೆಗುದಿಗೆ ಬಿದ್ದಿದೆ. 

ಬಾಲ್ಯದ ಅಂಧತ್ವಕ್ಕೆ ಕಾರಣವಾಗುವ ಅಂಶಗಳು 

  1. ಹತ್ತಿರದ ಸಂಬಂಧಗಳಲ್ಲಿನ ವಿವಾಹ 
  2. ಗರ್ಭಾವಸ್ಥೆಯಲ್ಲಿ ತಾಯಿಯಿಂದ ಮದ್ಯ ಸೇವನೆ
  3. ಗರ್ಭಿಣಿಯಾಗಿದ್ದಾಗ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಯುಕ್ತ ಆಹಾರ ಸೇವನೆ 
  4. ಕಡಿಮೆ ತೂಕವಿರುವ ಅವಧಿಗೂ ಮುನ್ನ ಜನಿಸಿದ ಮಕ್ಕಳು, 

ಮುನ್ನೆಚ್ಚರಿಕಾ ಕ್ರಮ ಹಾಗೂ ಚಿಕಿತ್ಸೆ 

  1. ಸಂಬಂಧಗಳಲ್ಲಿ ವಿವಾಹವಾಗುವ ಜೋಡಿಗಳಿಗೆ ಜೆನೆಟಿಕ್ ಪರೀಕ್ಷೆ 
  2. ಗ್ರಾಮೀಣ ಭಾಗದ ಮಂದಿಗೆ ಕಣ್ಣಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಉತ್ತೇಜನ ಹಾಗೂ ನೇತ್ರದಾನಕ್ಕೆ ಉತ್ತೇಜನ
  3. 6 ತಿಂಗಳಿನಿಂದ 5 ವರ್ಷಗಳ ಮಕ್ಕಳಿಗೆ ವಿಟಮಿನ್ ಎ ಕ್ಯಾಪ್ಸೂಲ್ ಗಳ ಎರಡು ಹೈ ಡೋಸೇಜ್
SCROLL FOR NEXT