ಮಳೆಗಾಲ ಬಂತೆಂದರೆ ಹಲವರಿಗೆ ತಲೆ ಬಿಸಿಯಾಗುವುದುಂಟು... ಇದಕ್ಕೆ ಕಾರಣ ಹವಾಮಾನ ಬದಲಾವಣೆಯಿಂದ ಎದುರಾಗುವ ಅನಾರೋಗ್ಯ. ಮಳೆಗಾಲದಲ್ಲಿ ಅನಾರೋಗ್ಯ ಎದುರಾಗುವುದು ಸಾಮಾನ್ಯ. ಆದರೆ, ಅದರಿಂದ ದೂರ ಉಳಿಯಬೇಕೆಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ.
ರೋಗನಿರೋಧಕ ಶಕ್ತಿಯು ನಮ್ಮ ದೇಹವನ್ನು ಸಾಂಕ್ರಾಮಿಕ ಜೀವಿಗಳಿಂದ ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿಯ ಹೊರತು ನಮ್ಮ ದೇಹಕ್ಕೆ ಹಲವಾರು ರೀತಿಯ ಬ್ಯಾಕ್ಟೀರಿಯಗಳು, ವೈರಸ್ಗಳು ಮತ್ತು ಇತರ ರೋಗಕಾರಕಗಳು ನಮ್ಮ ದೇಹವನ್ನು ಆಕ್ರಮಣ ಮಾಡುತ್ತವೆ. ಅಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯು ಉತ್ತಮ ಮಟ್ಟದಲ್ಲಿ ಇದ್ದರೆ, ಪದೇಪದೇ ಕಾಯಿಲೆಗೆ ಬೀಳುವ ಸಂದರ್ಭ ಎದುರಾಗುವುದಿಲ್ಲ. ಆದ್ದರಿಂದ ಒಬ್ಬ ವ್ಯಕ್ತಿಯು ಆರೋಗ್ಯಯುತವಾಗಿ ಇರಬೇಕೆಂದರೆ ಆ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿಯ ಮಟ್ಟ ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗುತ್ತದೆ.
ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಆಗಾಗ್ಗೆ ಜ್ವರ, ಕೆಮ್ಮು ಮತ್ತು ಶೀತ, ಅತಿಯಾದ ಆಯಾಸ, ಗಾಯಗಳು ಒಣಗದೆ ಇರುವುದು, ಸೋಮಾರಿತನ, ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ.
ಈ ಲಕ್ಷಣಗಳು ಇರುವವರು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಇಲ್ಲದಿದ್ದರೆ, ಅವುಗಳೊಂದಿಗೆ ಅನೇಕ ರೋಗಗಳು ಶುರುವಾಗುವ ಅಪಾಯವಿರುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ.
ದೇಹದ ಎಲ್ಲಾ ಜೀವಕೋಶಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಪೌಷ್ಟಿಕಾಂಶದ ಅಗತ್ಯ ಹೆಚ್ಚಾಗಿರುತ್ತದೆ. ದೇಹಕ್ಕೆ ಸೋಂಕು ತಗುಲಿದ ಸಂದರ್ಭದಲ್ಲಿ ಈ ಪೌಷ್ಟಿಕಾಂಶ ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅತ್ಯಗತ್ಯವಾಗಿರುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮೊದಲು ನಮ್ಮ ಆಹಾರದ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಜಂಕ್ ಫುಡ್ ಗಳನ್ನು ತೊರೆದು, ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಮಾಡಬೇಕು.
- ಇವಷ್ಟೇ ಅಲ್ಲದೆ, ಶುಂಠಿ, ಲವಂಗ, ಕರಿಮೆಣಸು, ದಾಲ್ಚಿನ್ನಿ ಮತ್ತು ಅರಿಶಿನವನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
- ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ನಿಂಬೆಹಣ್ಣು, ದ್ರಾಕ್ಷಿ ಹಣ್ಣುಗಳನ್ನು ಸೇವನೆ ಮಾಡಬೇಕು. ಹುಳಿ ಮತ್ತು ಸಿಹಿ ಮಿಶ್ರಣದ ಈ ಹಣ್ಣುಗಳು ನಮ್ಮ ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಪಡೆದುಕೊಂಡಿರುತ್ತದೆ. ಇದರ ಸೇವನೆಯಿಂದ ನಮಗೆ ಕೆಮ್ಮು, ಕಫ, ಶೀತ, ನೆಗಡಿ ಆದಂತಹ ಸಂದರ್ಭದಲ್ಲಿ ಅಥವಾ ಮಳೆಗಾಲ ಜೊತೆಗೆ ಚಳಿಗಾಲದ ಸಮಯದಲ್ಲಿ ನಮ್ಮ ದೇಹದ ತಾಪಮಾನವನ್ನು ಹೆಚ್ಚು ಮಾಡಿ ಸೋಂಕುಗಳಿಗೆ ದೇಹದಲ್ಲಿ ಜಾಗ ಇಲ್ಲದಂತೆ ಮಾಡುತ್ತದೆ.
- ಇದರ ಜೊತೆಗೆ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿ ಜೊತೆಗೆ ಬಿಳಿ ರಕ್ತಕಣಗಳ ಸಂಖ್ಯೆಯನ್ನು ಅಭಿವೃದ್ಧಿಪಡಿಸಿ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ
- ಮೊಟ್ಟೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಮೀನು ಮತ್ತು ಚಿಕನ್ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಈ ಮೂರೂ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತವೆ.
- ಮೊಳಕೆ ಕಾಳುಗಳು, ಬಾದಾಮಿ, ವಾಲ್ನಟ್ಸ್, ಗೋಡಂಬಿ, ಕುಂಬಳಕಾಯಿ ಬೀಜಗಳು, ಚಿಯಾ ಬೀಜಗಳು, ಅಗಸೆ ಬೀಜಗಳ ಸೇವನೆ ಮೂಲಕವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
- ಹೂಕೋಸು, ಎಲೆಕೋಸು ಜಾತಿಗೆ ಸೇರಿದ ಬ್ರೊಕೋಲಿ ರೋಗನಿರೋಧಕ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖವಾಗಿ ಕೆಲಸ ಮಾಡಲಿದೆ. ಮುಖ್ಯವಾಗಿ ಇದರಲ್ಲಿ ವಿಟಮಿನ್ ಎ ಅಂಶ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಅನೇಕ ಬಗೆಯ ದೇಹಕ್ಕೆ ಉಪಯುಕ್ತವಾದ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಇದರಲ್ಲಿ ಹೇರಳವಾಗಿರುತ್ತದೆ.
- ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಇದು ಹೆಚ್ಚಿಸುತ್ತದೆ. ಇದರೊಂದಿಗೆ, ಹಸಿರು ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದಕ್ಕಾಗಿ, ಶತಾವರಿ ಮತ್ತು ಸಲಾಡ್ ಅನ್ನು ನಿಯಮಿತವಾಗಿ ಸೇವಿಸಬೇಕು.
- ವಿಟಮಿನ್ ಸಿ ಅಂಶದ ಪ್ರಮಾಣ ಮಾವಿನಹಣ್ಣು ಮತ್ತು ಸ್ಟ್ರಾಬೆರಿ ಹಣ್ಣುಗಳಲ್ಲಿ ಹೆಚ್ಚು ಸಿಗುವುದರಿಂದ ಜೊತೆಗೆ ಆಂಟಿಆಕ್ಸಿಡೆಂಟ್ ಅಂಶಗಳು ಸಹ ಇದರಲ್ಲಿ ಇರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಯಲ್ಲಿ ಮ್ಯಾಂಗನೀಸ್, ಫೋಲೆಟ್, ಪೊಟ್ಯಾಶಿಯಂ ಮತ್ತು ಇನ್ನಿತರ ಅಗತ್ಯವಾದ ಪೌಷ್ಟಿಕ ಸತ್ವಗಳು ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಕ್ರಮೇಣವಾಗಿ ಹೆಚ್ಚಾಗುತ್ತದೆ.
- ಅಗತ್ಯವಾದ ವಿಟಮಿನ್ ಅಂಶಗಳು ಮತ್ತು ಪೌಷ್ಟಿಕ ಸತ್ವಗಳನ್ನು ಜೊತೆಗೆ ಪೊಟ್ಯಾಷಿಯಂ, ವಿಟಮಿನ್ ಡಿ, ವಿಟಮಿನ್ ಕೆ, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶಗಳು ಎಲ್ಲರೂ ಸೇವನೆ ಮಾಡಲು ಬಯಸುವ ಹಸಿರೆಲೆ ತರಕಾರಿಗಳಲ್ಲಿ ಹೇರಳವಾಗಿ ಸಿಗುತ್ತದೆ.
- ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರು ಮಸಾಲೆಯುಕ್ತ ಆಹಾರ, ಎಣ್ಣೆಯುಕ್ತ ಆಹಾರ, ಕರಿದ ಆಹಾರವನ್ನು ಸೇವಿಸದಿರುವುದು ಉತ್ತಮ. ಇದರ ಬದಲಿಗೆ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದು ಉತ್ತಮ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos