ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಾಳೆ ಆಶಾ ಕಿರಣ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂಧತ್ವ ಹಾಗೂ ದೃಷ್ಟಿ ದುರ್ಬಲತೆಯನ್ನು ನಿಯಂತ್ರಣ ಮಾಡುವುದಕ್ಕೆ ರಾಷ್ಟ್ರೀಯ ಯೋಜನೆಯ ಆಶ್ರಯದಲ್ಲಿ ಈ ಆಶಾ ಕಿರಣ ಯೋಜನೆ ಹಾವೇರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಂಡಿರುವ ಆಶಾ ಕಿರಣ ಯೋಜನೆಯಡಿ ಎಲ್ಲಾ ವಯೋಮಾನದವರಿಗೆ ಸಮಗ್ರ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.
ದೃಷ್ಟಿ ದೋಷವುಳ್ಳವರಿಗೆ ಉಚಿತ ಕನ್ನಡಕ ನೀಡಲಾಗುತ್ತದೆ ಹಾಗೂ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ತಪ್ಪಿಸಲು ಸಾಧ್ಯವಿರುವ ಅಂಧತ್ವಕ್ಕೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಉದ್ದೇಶದಿಂದ, 'ಆಶಾ ಕಿರಣ'ವನ್ನು ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಎರಡು ಹಂತಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ ಮತ್ತು ಚಾಮರಾಜನಗರ, ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಶಾ ಕಿರಣ ಯೋಜನೆಯನ್ನು ಜಾರಿಗೊಳಿಸಲಾಗಿದೆ. "ಈ ಉಪಕ್ರಮಗಳು ಭರವಸೆಯ ಫಲಿತಾಂಶಗಳನ್ನು ನೀಡಿವೆ, ಲಕ್ಷಾಂತರ ವ್ಯಕ್ತಿಗಳು ಕಣ್ಣಿನ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಎಲ್ಲಾ ವಯೋಮಾನದ ವ್ಯಕ್ತಿಗಳಿಗೆ ಪ್ರಾಥಮಿಕ ಕಣ್ಣಿನ ತಪಾಸಣೆಯನ್ನು ನೇರವಾಗಿ ಅವರ ಮನೆಗಳಲ್ಲಿ ನಡೆಸುತ್ತಾರೆ" ಎಂದು ಸರ್ಕಾರ ತಿಳಿಸಿದೆ.
"ಸ್ಕ್ರೀನಿಂಗ್ ಸಮಯದಲ್ಲಿ ಕಣ್ಣಿನ ತೊಂದರೆ ಇರುವವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ದ್ವಿತೀಯ ತಪಾಸಣೆಗಾಗಿ ಕಳುಹಿಸಲಾಗುತ್ತದೆ. ಕನ್ನಡಕ ಅಗತ್ಯವಿರುವ ವ್ಯಕ್ತಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಅವರ ದೃಷ್ಟಿ ದುರ್ಬಲತೆಯ ಮಟ್ಟವನ್ನು ಆಧರಿಸಿ ಉಚಿತವಾಗಿ ಚಿಕಿತ್ಸೆ, ಕನ್ನಡಕ ಪಡೆಯುತ್ತಾರೆ. ಸರ್ಕಾರಿ ಆಸ್ಪತ್ರೆಗಳು ಮತ್ತು ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ಕಣ್ಣಿನ ಪೊರೆ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.