ರೊಬೋಟಿಕ್‌ ಸರ್ಜರಿ 
ಆರೋಗ್ಯ

ರೊಬೋಟಿಕ್‌ ಸರ್ಜರಿ ಬಗ್ಗೆ ಭಯ ಬೇಡ, ಸಂಪೂರ್ಣ ಅರಿವು ಇರಲಿ

ನಿಖರತೆಯೊಂದಿಗೆ ಶೀಘ್ರ ಚೇತರಿಕೆ: ರೋಬೋಟಿಕ್ ಶಸ್ತ್ರಚಿಕಿತ್ಸೆ

ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಎಂದರೆ ಸಾಕು, ಬಹುತೇಕರು ಹೆದರುತ್ತಾರೆ. ಪಾರ್ಶ್ವವಾಯು, ದೀರ್ಘಕಾಲದ ಆಸ್ಪತ್ರೆ ವಾಸ ಮತ್ತು ಅನಿರೀಕ್ಷಿತ ಫಲಿತಾಂಶಗಳ ಉದಾಹರಣೆಗಳು ಅನೇಕ ರೋಗಿಗಳನ್ನು ಸಕಾಲದಲ್ಲಿ ಚಿಕಿತ್ಸೆ ಪಡೆಯದಂತೆ ತಡೆದಿವೆ. ಆದರೆ, ರೋಬೋಟಿಕ್ ನೆರವಿನ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯ ವಿಧಾನದ ಆಗಮನದಿಂದ ಈ ಕಲ್ಪನೆ ವೇಗವಾಗಿ ಬದಲಾಗುತ್ತಿದೆ. ಇಂದು, ಸುಧಾರಿತ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳು ಬೆನ್ನುಮೂಳೆಯ ಆರೈಕೆಯನ್ನು ಉತ್ತಮಗೊಳಿಸುತ್ತಿವೆ. ನಿಖರತೆ, ಸುರಕ್ಷತೆ, ಮತ್ತು ಶೀಘ್ರ ಚೇತರಿಕೆ ನೀಡುವ ಮೂಲಕ, ಮೌನವಾಗಿ ನರಳುತ್ತಿದ್ದ ರೋಗಿಗಳಿಗೆ ಹೊಸ ಭರವಸೆ ಮೂಡಿಸುತ್ತಿವೆ.

ರೋಬೋಟಿಕ್‌ ತಂತ್ರಜ್ಞಾನ ಶಸ್ತ್ರಚಿಕಿತ್ಸೆಯ ನಿಖರತೆಯನ್ನು ಹೆಚ್ಚಿಸುತ್ತದೆ

ಬೆನ್ನು ನೋವು ಭಾರತದ ವಯಸ್ಕ ವ್ಯಕ್ತಿಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ, ಶಸ್ತ್ರಚಿಕಿತ್ಸೆಯ ಭಯದಿಂದ ಹೆಚ್ಚಿನ ರೋಗಿಗಳು ರೋಗದ ಮೂಲ ಕಾರಣಕ್ಕೆ ಚಿಕಿತ್ಸೆ ಪಡೆಯುವುದಿಲ್ಲ. ಈ ಹಿಂಜರಿಕೆಗೆ ಕಾರಣಗಳಿದ್ದು, ಸಂಪೂರ್ಣವಾಗಿ ಆಧಾರರಹಿತವಾಗಿಲ್ಲ. ಸಾಂಪ್ರದಾಯಿಕ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗಳು ಸೀಮಿತ ಗೋಚರತೆ ಮತ್ತು ಸ್ಕ್ರೂ ಅಳವಡಿಕೆಯಲ್ಲಿ ಮಾನವ ಸಹಜ ತಪ್ಪುಗಳಿಂದಾಗಿ ಹೆಚ್ಚಿನ ಅಪಾಯಗಳನ್ನು ಹೊಂದಿದ್ದವು. ಆದರೆ, ರೋಬೋಟಿಕ್ ತಂತ್ರಜ್ಞಾನವು ಶಸ್ತ್ರಚಿಕಿತ್ಸೆಯ ನಿಖರತೆಯನ್ನು ಹೆಚ್ಚಿಸುವ ಮೂಲಕ ಮತ್ತು ತೊಡಕುಗಳ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ ಈ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತಿದೆ.

ರೋಬೋಟಿಕ್ ನೆರವಿನ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯು ಶಸ್ತ್ರಚಿಕಿತ್ಸಕರಿಗೆ ನೈಜ-ಸಮಯದ 3ಡಿ ಚಿತ್ರಗಳನ್ನು ಬಳಸಿ ಕಾರ್ಯವಿಧಾನಗಳನ್ನು ಯೋಜಿಸಲು ಅನುವು ಮಾಡಿಕೊಡುತ್ತದೆ. ಇದು ಸ್ಕ್ರೂಗಳು ಮತ್ತು ಇಂಪ್ಲಾಂಟ್‌ಗಳನ್ನು ಸೂಕ್ಷ್ಮವಾದ ನಿಖರತೆಯೊಂದಿಗೆ ಇರಿಸುವುದನ್ನು ಖಚಿತಪಡಿಸುತ್ತದೆ. ಹೀಗೆ ಸಣ್ಣ ಛೇದನಗಳು, ಅಂಗಾಂಶಗಳಿಗೆ ಕಡಿಮೆ ಹಾನಿಯಿಂದಾಗಿ ರೋಗಿಗಳು ಬಹುಬೇಗ ಗುಣವಾಗಿ ಸಾಮಾನ್ಯ ಜೀವನಕ್ಕೆ ಬೇಗನೆ ಮರಳಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ನೈಜ ಉದಾಹರಣೆ

60ರ ದಶಕದ ಗೃಹಿಣಿ ಶ್ರೀಮತಿ ಪ್ರಮೋದಾ ಶೆಟ್ಟಿ ಅವರು 35 ವರ್ಷಗಳಿಂದ ದೀರ್ಘಕಾಲದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಎಲ್5-ಎಸ್1 ರಲ್ಲಿ ಗ್ರೇಡ್ II ಸ್ಪಾಂಡಿಲೋಲಿಸ್ಥೆಸಿಸ್ (ಒಂದು ಬೆನ್ನುಮೂಳೆಯು ಇನ್ನೊಂದರ ಮೇಲೆ ಜಾರುವ ಮೂಲಕ ನರಗಳನ್ನು ಸಂಕುಚಿತಗೊಳಿಸುವ ಸ್ಥಿತಿ) ಎಂದು ಅವರಿಗೆ ರೋಗನಿರ್ಣಯ ಮಾಡಲಾಗಿತ್ತು. ಇದು ಅವರು ಚಲಿಸುವುದಕ್ಕೆ ಸಮಸ್ಯೆ ಉಂಟುಮಾಡಿತ್ತಲ್ಲದೇ, ಆರೋಗ್ಯವನ್ನು ತೀವ್ರವಾಗಿ ಕುಂಠಿತಗೊಳಿಸಿತ್ತು. ಅನೇಕ ವರ್ಷಗಳಿಂದ ಅನೇಕ ವೈದ್ಯರನ್ನು ಸಂಪರ್ಕಿಸಿದ್ದರೂ, ಅಪಾಯಗಳಿರುವ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಂತೆ ಅವರಿಗೆ ಸಲಹೆ ನೀಡಲಾಗಿತ್ತು. ಆದರೆ ರೋಗಲಕ್ಷಣಗಳು ಉಲ್ಬಣಗೊಂಡು ಹೆಚ್ಚಿನ ತಪಾಸಣೆಗೆ ಒಳಗಾದ ನಂತರ ಶಸ್ತ್ರಚಿಕಿತ್ಸೆಯನ್ನು ಮಾಡಿಸಲೇಬೇಕಾದ ಪರಿಸ್ಥಿತಿ ಉಂಟಾಯಿತು.

ರೋಬೋಟಿಕ್-ನೆರವಿನ ಪೋಸ್ಟೀರಿಯರ್ ಇನ್‌ಸ್ಟ್ರುಮೆಂಟೆಡ್ ಇಂಟರ್‌ಬಾಡಿ ಫ್ಯೂಷನ್ ಶಸ್ತ್ರಚಿಕಿತ್ಸೆಯ ನಡೆಸಿ ಅಗತ್ಯವಿರುವ ಸ್ಥಳದಲ್ಲಿ ಟೈಟಾನಿಯಂ ಇಂಪ್ಲಾಂಟ್‌ಗಳನ್ನು ಅತ್ಯಂತ ನಿಖರವಾಗಿ ಇರಿಸಲಾಯಿತು. ಇದರ ಪರಿಣಾಮ, ಪ್ರಮೋದಾ ಶೆಟ್ಟಿ ಅವರು ಮರುದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಹಲವಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ನೋವು ಇಲ್ಲದೆ ನಡೆಯಲು, ತಮ್ಮ ಮೊಮ್ಮಗುವನ್ನು ಕೈಯಲ್ಲಿ ಎತ್ತಿಕೊಳ್ಳಲು ಸಾಧ್ಯವಾಯಿತು. ಅಲ್ಲದೇ, ತಮ್ಮ ದೀರ್ಘಕಾಲದ ಅನಾರೋಗ್ಯದಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಡಲು ಈ ಶಸ್ತ್ರಚಿಕಿತ್ಸೆಯು ಕಾರಣವಾಯಿತು.

ಅದೇ ರೀತಿ, ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಗುರುರಾಜ ಸಿ. ಎಸ್. ಅವರು ತೀವ್ರವಾದ ಬೆನ್ನು ನೋವನ್ನು ಅನುಭವಿಸಿ, ಸುಮಾರು ಎರಡು ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು. ಅವರ ಎಂಆರ್‌ಐ ಸ್ಕ್ಯಾನ್ ಎಲ್5-ಎಸ್1 ರಲ್ಲಿ ಶೇ. 80ರಷ್ಟು ನರ ಸಂಕುಚನ ಉಂಟಾಗಿ ಲಂಬಾರ್ ಡಿಸ್ಕ್ ಪ್ರೊಲ್ಯಾಪ್ಸ್‌ಗೆ ಕಾರಣವಾಗಿತ್ತು. ಶಸ್ತ್ರಚಿಕಿತ್ಸೆಯ ಅಗತ್ಯದ ಬಗ್ಗೆ ಸಂಶಯವಿದ್ದರೂ, ಪ್ರಯೋಜನಗಳನ್ನು ಅರಿತುಕೊಂಡ ನಂತರ ಗುರುರಾಜ್ ಅವರು ರೋಬೋಟಿಕ್ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ರೋಬೋಟಿಕ್ ಮಾರ್ಗದರ್ಶನದಲ್ಲಿ ಟ್ರಾನ್ಸ್‌ಫೋರಾಮಿನಲ್ ಲಂಬಾರ್ ಇಂಟರ್‌ಬಾಡಿ ಫ್ಯೂಷನ್‌ನ್ನು (TLIF) ಮಾಡಲಾಯಿತು. ಶಸ್ತ್ರಚಿಕಿತ್ಸೆಯ ಮರುದಿನವೇ ಸಹಾಯಕರ ಬೆಂಬಲದಿಂದ ನಡೆಯಲಾರಂಭಿಸಿದರು. ಅಲ್ಲದೇ, ಒಂದು ವಾರದೊಳಗೆ ಫಿಸಿಯೋಥೆರಪಿಯನ್ನು ಪುನರಾರಂಭಿಸಿದರು.

ಹೀಗೆ ರೋಬೋಟಿಕ್ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯಿಂದ ಕೆಲವೇ ವಾರಗಳಲ್ಲಿ ಇಬ್ಬರೂ ರೋಗಿಗಳು ನೋವಿನಿಂದ ಮುಕ್ತವಾದರು. ಸಂತಸದ ಬದುಕಿನ ಸ್ವಾತಂತ್ರ್ಯವನ್ನು ಮರಳಿ ಪಡೆದು, ಬಹುತೇಕ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸಿದರು.

ತಿಳಿದುಕೊಳ್ಳಲೇ ಬೇಕಾದ ಅಂಶಗಳು

ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ಬಗ್ಗೆ ಭಯಪಡುವುದು ಸಹಜ. ಆದರೆ, ಅದು ಸಾಮಾನ್ಯವಾಗಿ ಹಳೆಯ ಕಾಲದ ಕಲ್ಪನೆ. ರೋಬೋಟಿಕ್ ನೆರವಿನ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯು ಕೇವಲ ತಾಂತ್ರಿಕ ಸುಧಾರಣೆಯಷ್ಟೇ ಆಗದೇ, ಬೆನ್ನುಮೂಳೆ ಸಮಸ್ಯೆಗಳನ್ನು ಎದುರಿಸುವ ವಿಧಾನದಲ್ಲಿ ಒಂದು ಪ್ರಮುಖ ಆವಿಷ್ಕಾರವಾಗಿದೆ. ಶ್ರೀಮತಿ ಪ್ರಮೋದಾ ಮತ್ತು ಡಾ. ಗುರುರಾಜ ಅವರ ಅನುಭವಗಳ ಪ್ರಕಾರ, ರೋಬೋಟಿಕ್ ನಿಖರತೆಯನ್ನು ಬಳಸಿಕೊಂಡು ನಡೆಸುವ ಸಮಯೋಚಿತ ಶಸ್ತ್ರಚಿಕಿತ್ಸೆಯು ವೇಗವಾಗಿ, ಸುರಕ್ಷಿತವಾಗಿ ಮತ್ತು ಸಂಪೂರ್ಣ ಚೇತರಿಕೆಗೆ ಕಾರಣವಾಗಬಹುದು. ನೀವು ಅಥವಾ ನಿಮ್ಮ ಪ್ರೀತಿಪಾತ್ರರು ದೀರ್ಘಕಾಲದ ಬೆನ್ನುನೋವಿನಿಂದ ಬಳಲುತ್ತಿದ್ದರೆ, ಪರಿಣಾಮಕಾರಿ ಮತ್ತು ಸುಧಾರಿತ ಪರಿಹಾರಗಳು ಈಗ ಲಭ್ಯವಿವೆ ಎಂಬುದನ್ನು ನೆನಪಿಡಿ. ಅಲ್ಲದೇ, ಯಾವುದೇ ಹಂತದಲ್ಲೂ ನಿಮ್ಮ ಸಂತಸದ ಜೀವನವನ್ನು ಮರಳಿ ಪಡೆಯಲು ತಡವಾಗಿಲ್ಲ ಎಂದು ಮರೆಯಬೇಡಿ.

ಡಾ. ಎಸ್. ವಿದ್ಯಾಧರ, ಅಧ್ಯಕ್ಷರು ಮತ್ತು ವಿಭಾಗ ಮುಖ್ಯಸ್ಥರು- ಸ್ಪೈನ್ ಸರ್ಜರಿ ಹಾಗೂ ಕನ್ಸಲ್ಟೆಂಟ್ ರೊಬೊಟಿಕ್ ಸ್ಪೈನ್ ಸರ್ಜರಿ, ಮಣಿಪಾಲ್ ಆಸ್ಪತ್ರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT