ರಾತ್ರಿ ವೇಳೆ ಕೇಳಿಬರುವ ಗೊರಕೆಯನ್ನು ಹೆಚ್ಚಿನವರು ಕೇವಲ ದಣಿದ ನಿದ್ರೆಯ ಸಾಮಾನ್ಯ ಶಬ್ದ ಎಂದು ನಿರ್ಲಕ್ಷಿಸುತ್ತಾರೆ. ಆದರೆ, ನಿಮ್ಮ ಈ ಗೊರಕೆಯ ಹಿಂದೆ ಉಸಿರಾಟವನ್ನು ಸ್ತಬ್ಧಗೊಳಿಸುವ ಮಾರಕ ಸ್ಲೀಪ್ ಅಪ್ನಿಯಾ ಕಾಯಿಲೆ ಅಡಗಿರಬಹುದು ಎಂಬುದು ನಿಮಗೆ ಗೊತ್ತೇ? ಇದು ಕೇವಲ ನಿಮ್ಮ ಹೃದಯದ ಆರೋಗ್ಯವಷ್ಟೇ ಅಲ್ಲ, ಪುರುಷರ ಫಲವತ್ತತೆ ಮತ್ತು ವೀರ್ಯಾಣುಗಳ ಗುಣಮಟ್ಟದ ಮೇಲೂ ತೀವ್ರ ದುಷ್ಪ್ರಣಾಮ ಬೀರುತ್ತಿದೆ. ಹಾಗಾದರೆ, ಗೊರಕೆಗೂ ಪುರುಷತ್ವಕ್ಕೂ ಏನು ಸಂಬಂಧ? ಆ ಕುರಿತ ವರದಿ ಇಲ್ಲಿದೆ:
ಹೃದಯ ಮಾತ್ರವಲ್ಲ...
ಗೊರಕೆಯನ್ನು ಸಾಮಾನ್ಯವಾಗಿ ಹಾನಿಕರವಲ್ಲದ ನಿದ್ರೆಯ ತೊಂದರೆ ಎಂದು ಕಡೆಗಣಿಸಲಾಗುತ್ತದೆ. ಆದರೆ ನಿರಂತರವಾದ, ಜೋರಾದ ಗೊರಕೆಯೊಂದಿಗೆ ಉಸಿರಾಟದಲ್ಲಿ ವಿರಾಮಗಳೂ ಇದ್ದರೆ, ಅದು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ(OSA)ಯ ಸೂಚನೆಯಾಗಿರಬಹುದು. ಈ ಸ್ಥಿತಿಯಲ್ಲಿ ನಿದ್ರೆಯ ಸಮಯದಲ್ಲಿ ಉಸಿರಾಟವು ಪದೇ ಪದೇ ಸ್ಥಗಿತಗೊಳ್ಳುತ್ತದೆ. ಇದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತದೆ, ವಿಶ್ರಾಂತಿ ಛಿದ್ರವಾಗುತ್ತದೆ ಮತ್ತು ದೇಹದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹೃದಯ ಮತ್ತು ಚಯಾಪಚಯ ಆರೋಗ್ಯದ ಮೇಲೆ ಇದರ ಪರಿಣಾಮ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದರೂ, ಪುರುಷರ ಫಲವತ್ತತೆಯೊಂದಿಗೆ ಇದರ ಸಂಭಾವ್ಯ ಸಂಬಂಧಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ನೋವಾ ಐವಿಎಫ್ ಫರ್ಟಿಲಿಟಿ ಹಿರಿಯ ಫಲವತ್ತತೆ ತಜ್ಞ ಡಾ. ಮಹೇಶ್ ಕೋರೆಗೋಲ್ ತಿಳಿಸಿದ್ದಾರೆ.
ನಿದ್ರೆ ಕೆಟ್ಟರೆ ಟೆಸ್ಟೋಸ್ಟೆರಾನ್ ಕೂಡ ಡೌನ್!
ಸ್ಲೀಪ್ ಅಪ್ನಿಯಾ ಹಲವು ಮಾರ್ಗಗಳ ಮೂಲಕ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆಮ್ಲಜನಕದ ಮಟ್ಟ ಪದೇ ಪದೇ ಕುಸಿಯುವುದರಿಂದ ಆಕ್ಸಿಡೇಟಿವ್ ಸ್ಟ್ರೆಸ್ ಮತ್ತು ಉರಿಯೂತ ಹೆಚ್ಚಾಗಬಹುದು, ಇದು ವೀರ್ಯಾಣು ಉತ್ಪಾದನೆ, ಚಲನಶೀಲತೆ ಮತ್ತು ಡಿಎನ್ಎ ಸಮಗ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಗುಣಮಟ್ಟದ ನಿದ್ರೆಯ ಕೊರತೆಯು ಟೆಸ್ಟೋಸ್ಟೆರಾನ್ ಸ್ರವಿಸುವಿಕೆ ಸೇರಿದಂತೆ ಹಾರ್ಮೋನ್ ನಿಯಂತ್ರಣವನ್ನೂ ಅಸ್ತವ್ಯಸ್ತಗೊಳಿಸಬಹುದು; ವೀರ್ಯಾಣು ಉತ್ಪಾದನೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಟೆಸ್ಟೋಸ್ಟೆರಾನ್ ಪ್ರಮುಖ ಪಾತ್ರ ವಹಿಸುತ್ತದೆ. ಚಿಕಿತ್ಸೆ ಪಡೆಯದ OSA ಇರುವ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುವುದು, ಆಯಾಸ ಮತ್ತು ಚಯಾಪಚಯ ಅಸಮತೋಲನ ಕಂಡುಬರಬಹುದು. ಇವೆಲ್ಲವೂ ಪರೋಕ್ಷವಾಗಿ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು.
ಆದರೆ, ಕೇವಲ ಗೊರಕೆಯಿಂದ ಸ್ಲೀಪ್ ಅಪ್ನಿಯಾ ಇದೆ ಎಂದು ನಿರ್ಧರಿಸಲಾಗುವುದಿಲ್ಲ, ಹಾಗೂ OSA ಮತ್ತು ಬಂಜೆತನದ ನಡುವಿನ ನೇರ ಸಂಬಂಧದ ಬಗ್ಗೆ ಸಾಕ್ಷ್ಯಗಳು ಇನ್ನೂ ಬೆಳೆಯುತ್ತಿವೆ ಎಂಬುದನ್ನು ಗಮನಿಸುವುದು ಮುಖ್ಯ. ಜೋರಾದ ಹಾಗೂ ಪದೇ ಪದೇ ಬರುವ ಗೊರಕೆ, ನಿದ್ರೆಯಲ್ಲಿ ಏದುಸಿರು ಬಿಡುವುದು, ಬೆಳಗಿನ ತಲೆನೋವು ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆಯ ಭಾವನೆ ಇರುವ ಪುರುಷರು ತಪಾಸಣೆ ಮಾಡಿಸಿಕೊಳ್ಳಬೇಕು. ಲಕ್ಷಣಗಳನ್ನು ಅವಲಂಬಿಸಿ, ಸ್ಲೀಪ್ ಸ್ಟಡಿ (ನಿದ್ರಾ ಅಧ್ಯಯನ) ಮಾಡಿಸಲು ಸೂಚಿಸಬಹುದು.
ಹಾಗಾದ್ರೆ, ಇದಕ್ಕೆ ಪರಿಹಾರವೇನು?
ಸ್ಲೀಪ್ ಅಪ್ನಿಯಾವನ್ನು ಗುರುತಿಸಿ ಚಿಕಿತ್ಸೆ ನೀಡುವುದು, ಜೊತೆಗೆ ತೂಕ ನಿಯಂತ್ರಣ, ನಿಯಮಿತ ವ್ಯಾಯಾಮ ಮತ್ತು ಇತರ ಚಯಾಪಚಯ ಸಮಸ್ಯೆಗಳ ನಿರ್ವಹಣೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು. ಫಲವತ್ತತೆಯ ಸಮಸ್ಯೆ ಎದುರಿಸುತ್ತಿರುವ ಪುರುಷರು, ವಿಶಾಲವಾದ ಸಂತಾನೋತ್ಪತ್ತಿ ಆರೋಗ್ಯ ಮೌಲ್ಯಮಾಪನದ ಭಾಗವಾಗಿ ತಮ್ಮ ನಿದ್ರೆಯ ಗುಣಮಟ್ಟದ ಬಗ್ಗೆಯೂ ವೈದ್ಯರೊಂದಿಗೆ ಚರ್ಚಿಸಬೇಕು; ಅದನ್ನು ಕಡೆಗಣಿಸಬಾರದು.