ಬೆಂಗಳೂರು ಮಹಾನಗರ ಪಾಲಿಕೆ ಎಷ್ಟು ಭಾಗವಾಗುತ್ತೆ ಅನ್ನುವುದರ ಬಗ್ಗೆಯಾಗಲಿ ಅಥವಾ ಯಾವ ಪಕ್ಷದವರು ಮೇಯರ್ ಆಗುತ್ತಾರೆ ಎಂಬುದರ ಬಗ್ಗೆ ಜನ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಜನ ಉತ್ತಮ ಸರ್ಕಾರ ಬಯಸುತ್ತಾರೆ ಎಂದು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ ಅವರು ಬಿಬಿಎಂಪಿಯನ್ನು ಮೂರು ಭಾಗವಾಗಿ ವಿಭಜನೆ ಮಾಡುವ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವಿಶೇಷ ಸಂದರ್ಶನ ನೀಡಿದ್ದು, ಬೆಂಗಳೂರು ಅಭಿವೃದ್ಧಿ ವಿಭಜನೆಯೇ ಪರಿಹಾರ ಎಂದಿದ್ದಾರೆ.
ಬಿಬಿಎಂಪಿ ವಿಭಜನೆಗೆ ಯಾಕಿಷ್ಟು ಆತರು?
ಆತುರ ಏನಿಲ್ಲ. ವಿಧಾನಸಭೆ ಚುನಾವಣೆ ವೇಳೆ ನಮ್ಮ ಪ್ರಾಣಾಳಿಕೆಯಲ್ಲೇ ಈ ಭರವಸೆ ನೀಡಲಾಗಿತ್ತು. ಅಲ್ಲದೆ ಈ ಸಂಬಂಧ ನಾನು ಒಂದುವರೆ ವರ್ಷಗಳ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೆಹಲಿ ಮತ್ತು ಲಂಡನ್ ಮಹಾನಗರ ಪಾಲಿಕೆ ಸೇರಿದಂತೆ ಹಲವು ಮಹಾನಗರ ಪಾಲಿಕೆಗಳ ಉದಾಹರಣೆಯೊಂದಿಗೆ ಪತ್ರ ಬರೆದಿದ್ದೆ. ಇದು ಹೊಸ ವಿಚಾರ ಏನಲ್ಲ.
ನಿಮ್ಮ ಪ್ರಣಾಳಿಕೆಯಲ್ಲೇ ಇದ್ದರೂ, ಕೊನೆ ಕ್ಷಣದಲ್ಲಿ ಮಾಡಿದ್ದು ಏಕೆ?
ಒಂದು ವೇಳೆ ನಾವು ಇದಕ್ಕೂ ಮೊದಲೇ ಮಾಡಿದ್ದರೆ ಬಿಬಿಎಂಪಿಯ ಅಧಿಕಾರ ಅವಧಿಯನ್ನು ಮೊಟಕುಗೊಳಿಸಿದಂತಾಗುತ್ತಿತ್ತು. ಹೀಗಾಗಿ ನಾವು ಅವಧಿ ಮುಗಿಯುವರೆಗೆ ಕಾದು, ಈಗ ಪ್ರಕ್ರಿಯೆ ಆರಂಭಿಸಿದ್ದೇವು. ಆದರೆ ಪ್ರತಿಪಕ್ಷ ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ನೀವು ಬಿಬಿಎಂಪಿ ವಿಭಜನೆಯನ್ನು ಪ್ರಣಾಳಿಕೆಯಲ್ಲೇ ಪ್ರಕಟಿಸಿದ್ದರಿಂದ ಬೆಂಗಳೂರಿಗರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ನಗರದಲ್ಲಿ ಬಿಜೆಪಿ, ಜೆಡಿಎಸ್‌ಗೆ ಹೆಚ್ಚು ಸ್ಥಾನಗಳು ದೊರೆತಿವೆ?
ಇಲ್ಲ. ಅದು ಸುಳ್ಳು. ಮತ ಪ್ರಮಾಣವನ್ನು ಗಮನಿಸಿದರೆ, ನಗರದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಮತ ಗಳಿಸಿದೆ. ನಾನು 50 ಸಾವಿರ ಮತಗಳ ಅಂತರದಿಂದ ಹಾಗೂ ಕೃಷ್ಣ ಬೈರೇಗೌಡ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಇದ್ದಿದ್ದರಿಂದ ನಮಗೆ ಸ್ವಲ್ಪ ಹಿನ್ನೆಡೆಯಾಯಿತು.
ಮಹಾನಗರ ಪಾಲಿಕೆ ವಿಭಜನೆ ದೆಹಲಿಯಲ್ಲಿ ಪರಿಣಾಮಕಾರಿಯಾಗಿಲ್ಲ?
ಅಲ್ಲಿ ಆರ್ಥಿಕ ಸಮಸ್ಯೆಗಳಿರಬಹುದು. ಆದರೆ ಕಳೆದ 15 ವರ್ಷಗಳಲ್ಲಿ ದೆಹಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಶೀಲಾ ದಿಕ್ಷಿತ್ ಅವರು ಚುನಾವಣೆಯಲ್ಲಿ ಸೋತಿರಬಹುದು. ಆದರೆ ದೆಹಲಿಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೆಹಲಿ ಅಭಿವೃದ್ಧಿಯಾಗಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.
ಬಿ.ಎಸ್.ಪಾಟೀಲ್ ಸಮಿತಿ ಇನ್ನು ಅಂತಿಮ ವರದಿ ನೀಡಿಲ್ಲ. ಆದರೂ ಇಷ್ಟೊಂದು ಆತರು ಏಕೆ?
ಅವರು ಎರಡು ಮಧ್ಯಂತರ ವರದಿ ನೀಡಿದ್ದಾರೆ. ನಾವು ಅವರ ವರದಿಯನ್ನು ಪರಿಶೀಲಿಸಿ, ಅದರಲ್ಲಿನ ಕೆಲವು ಅಂಶಗಳನ್ನು ಪರಿಗಣಿಸಿದ್ದೇವೆ. ಅಲ್ಲದೆ ಅಂತಿಮ ವರದಿ ನೀಡಲು ಅವರಿಗೆ ಜೂನ್ ವರೆಗೆ ಕಾಲಾವಕಾಶ ನೀಡಿದ್ದೇವೆ. ಅಂತಿಮ ವರದಿ ಬಂದ ಬಳಿಕ, ಆ ವರದಿಯ ಶಿಫಾರಸುಗಳನ್ನು ಆಧರಿಸಿ ನಾವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ.
ಬಿಬಿಎಂಪಿ ವಿಭಜನೆ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಆದರೆ ಪರಿಷತನ್‌ನಲ್ಲಿ ನಿಮಗೆ ಬಹುಮತ ಇಲ್ವಲ್ಲ?
ಒಂದು ವೇಳೆ ಮಸೂದೆ ಪರಿಷತ್‌ನಲ್ಲಿ ಪಾಸ್ ಆಗದಿದ್ದರೆ. ಅದು ಮತ್ತೆ ವಿಧಾನಸಭೆಗೆ ಬರುತ್ತೆ. ಆಗ ನಾವು ಮತ್ತೆ ಪಾಸ್ ಮಾಡಿಕೊಳ್ಳುತ್ತೇವೆ.
ಒಂದು ವೇಳೆ ಆ ಮಸೂದೆಗೆ ರಾಜ್ಯಪಾಲರು ಸಹಿ ಹಾಕದೇ ಹಾಗೆ ಇಟ್ಟುಕೊಂಡರೆ?
ರಾಜ್ಯಪಾಲರು ಮಸೂದೆಯನ್ನು ಹೆಚ್ಚು ದಿನ ಇಟ್ಟಕೊಳ್ಳಲು ಬರುವುದಿಲ್ಲ.
ಸೋಲಿನ ಭಯದಿಂದ ಕಾಂಗ್ರೆಸ್ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಿದೆಯೇ?
ನಾವು ಏಕೆ ಚುನಾವಣೆಯಲ್ಲಿ ಸೋಲುತ್ತೇವೆ? ಲೋಕಸಭೆ ಚುನಾವಣೆಯಲ್ಲಿ ಜನ ಬಿಜೆಪಿ ಮತ ನೀಡಿರಬಹುದು. ಆದರೆ ಬಳಿಕ ನಡೆದ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅತಿ ಹೆಚ್ಚಿನ ಅಂತದಿಂದ ಗೆಲುವು ಸಾಧಿಸಿದ್ದಾರೆ.
ಮಹಾನಗರ ಪಾಲಿಕೆ ವಿಚಾರ ಸ್ಥಳೀಯ ವಿಷಯ. ಸಾಮಾನ್ಯ ಜನರು ಯಾರೂ ಬಿಬಿಎಂಪಿ ಎಷ್ಟು ಭಾಗವಾಗುತ್ತೆ ಎಂಬುದರ ಬಗ್ಗೆ ಯೋಚನೆ ಮಾಡಲ್ಲ. ಆದರೆ ಅವರು ಉತ್ತಮ ಸರ್ಕಾರ, ಸ್ವಚ್ಛ ನಗರ, ಸುಂದರ ರಸ್ತೆಗಳನ್ನು ಬಯಸುತ್ತಾರೆ ಎಂದರು.