ವಿಶ್ಲೇಷಣೆ

ಕರ್ನಾಟಕ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಸುನಾಮಿ ನಡುವೆಯೂ ಸಿಲಿಕಾನ್ ಸಿಟಿಯಲ್ಲಿ ಸ್ಥಾನ ಉಳಿಸಿಕೊಂಡ ಬಿಜೆಪಿ

Ramyashree GN

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಸರಳ ಬಹುಮತದೊಂದಿಗೆ ಬಿಜೆಪಿಯನ್ನು 66 ಸ್ಥಾನಗಳಿಗೆ ಇಳಿಯುವಂತೆ ಮಾಡಿದೆ. 

ಬೆಂಗಳೂರಿನಲ್ಲಿ ಮತದಾನದ ದಿನದಂದು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹದಗೆಟ್ಟ ರಸ್ತೆಗಳು, ಟ್ರಾಫಿಕ್ ಸಮಸ್ಯೆ, ಮೆಟ್ರೋ ಕಾಮಗಾರಿ ವಿಳಂಬದಂತಹ ಸಮಸ್ಯೆಗಳಿದ್ದರೂ, ಕಾಂಗ್ರೆಸ್ ಅಲೆಯ ನಡುವೆಯೂ ಕೇಸರಿ ಪಾಳಯ ನಗರದಲ್ಲಿ ಒಂದಷ್ಟು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 16 ಮತ್ತು ಕಾಂಗ್ರೆಸ್ 12ರಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ ಮತ್ತು ಆಪ್ ಖಾತೆ ತೆರೆಯಲು ವಿಫಲವಾಗಿದೆ. 2018ರಲ್ಲಿ ಕಾಂಗ್ರೆಸ್ 15, ಬಿಜೆಪಿ 11, ಜೆಡಿಎಸ್ 2 ಸ್ಥಾನ ಗೆದ್ದಿದ್ದವು. ಆದಾಗ್ಯೂ, ಬಿಜೆಪಿ ಸರ್ಕಾರ ರಚಿಸಲು ಸಹಾಯ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಗೆ ಸೇರುವ ಮೂಲಕ 2019 ರ ಉಪಚುನಾವಣೆಯ ನಂತರ ಸಮೀಕರಣಗಳು ಬದಲಾದವು. 

ಬೆಂಗಳೂರಿನಲ್ಲಿ ಮೇ 6 ಮತ್ತು 7 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೋಡ್‌ಶೋ ನಡೆಸಿದರು. ಕೇಂದ್ರ ಮತ್ತು ರಾಜ್ಯದ ನಾಯಕರ ಮಿಂಚಿನ ಪ್ರಚಾರವು ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಆಢಳಿತ ವಿರೋಧಿ ಅಲೆಯನ್ನು ನಿವಾರಿಸಲು ಸಹಾಯ ಮಾಡಿತು. ವಿಶೇಷವಾಗಿ ಮಹದೇವಪುರ, ಆರ್‌ಆರ್ ನಗರ, ಕೆಆರ್ ಪುರಂ ಮತ್ತು ಯಲಹಂಕದಲ್ಲಿ ನೆರವಾಯಿತು.

ಕಡಿಮೆ ಮತದಾನದ ಪ್ರಮಾಣ ಮತ್ತು ಕಾಸ್ಮೊಪಾಲಿಟನ್ ಜನಸಂಖ್ಯೆಯು ವಿಜೇತರನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ. ಅನುಭವಿ ನಾಯಕರಾದ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ (ಮಲ್ಲೇಶ್ವರಂ), ಆರ್.ಅಶೋಕ (ಪದ್ಮನಾಭನಗರ), ಎಸ್.ಆರ್. ವಿಶ್ವನಾಥ್ (ಯಲಹಂಕ), ರವಿ ಸುಬ್ರಹ್ಮಣ್ಯ (ಬಸವನಗುಡಿ), ಎಸ್.ಟಿ. ಸೋಮಶೇಖರ್ (ಯಶವಂತಪುರ) ಮತ್ತು ಸುರೇಶ್ ಕುಮಾರ್ (ರಾಜಾಜಿನಗರ) ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್), ಬಿ.ಜೆಡ್. ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಎಂ ಕೃಷ್ಣಪ್ಪ (ವಿಜಯನಗರ), ದಿನೇಶ್ ಗುಂಡೂರಾವ್ (ಗಾಂಧಿನಗರ), ಕೆಜೆ ಜಾರ್ಜ್ (ಸರ್ವಜ್ಞ ನಗರ), ಎನ್‌ಎ ಹ್ಯಾರಿಸ್ (ಶಾಂತಿನಗರ) ಮತ್ತು ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ) ಕಾಂಗ್ರೆಸ್‌ನಿಂದ ಗೆದ್ದ ಪ್ರಮುಖರಾಗಿದ್ದಾರೆ.

SCROLL FOR NEXT