ಸುದ್ದಿಗಳು

ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಸಹಕಾರ ಸದಾ ಇರುತ್ತದೆ, ಕಾಂಗ್ರೆಸ್ ಗ್ಯಾರಂಟಿ ಭರವಸೆಯನ್ನು ಜಾರಿಗೆ ತರಬೇಕು: ಬಿ ಎಸ್ ಯಡಿಯೂರಪ್ಪ

Sumana Upadhyaya

ಬೆಂಗಳೂರು: ಸೋಲು-ಗೆಲುವು ಬಿಜೆಪಿಗೆ ಹೊಸದೇನಲ್ಲ, ಕೇವಲ ಎರಡು ಸ್ಥಾನಗಳಿಂದ ಆರಂಭಿಸಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದ್ದೆವು. ಇಂದಿನ ಫಲಿತಾಂಶದಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನಪ್ರಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿಪರ ಆಡಳಿತ ನೀಡಿದ್ದರೂ ಪಕ್ಷಕ್ಕೆ ಹಿನ್ನಡೆಯಾಗಿರುವುದಕ್ಕೆ ಆತ್ಮವಿಮರ್ಶೆ ಮಾಡಿಕೊಳ್ಳಲಾಗುವುದು ಎಂದರು.

ರಾಜ್ಯದ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರುತ್ತದೆ. ರಾಜ್ಯದ ಜನತೆ ಕೊಟ್ಟಿರುವ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ರಾಜ್ಯದ ಮತದಾರರಿಗೆ ಧನ್ಯವಾದಗಳು, ಕಾಂಗ್ರೆಸ್ ಗ್ಯಾರಂಟಿಯನ್ನು ತಕ್ಷಣ ಈಡೇರಿಸಬೇಕು ಎಂದರು.

ಪಕ್ಷ ನನ್ನನ್ನು ಕಡೆಗಣಿಸಿಲ್ಲ: ಲೋಕಸಭೆ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. 

ಬಿಜೆಪಿ ಹೈಕಮಾಂಡ್ ಪಕ್ಷ ನನಗೆ ಎಲ್ಲ ಅಧಿಕಾರವನ್ನು, ಗೌರವವನ್ನು ನೀಡಿದೆ. ಪಕ್ಷ ನನ್ನನ್ನು ಕಡೆಗಣಿಸಿದೆ ಎಂಬುದು ಸುಳ್ಳು. ಸಿಎಂ ಸ್ಥಾನದಿಂದ ನಿರ್ಗಮಿಸಿದ ನಂತರವೂ ನಾನು ವಿಶ್ರಾಂತಿ ತೆಗೆದುಕೊಳ್ಳದೆ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದೆ. ನಾವು ಸಾಕಷ್ಟು ಶ್ರಮ ಹಾಕಿದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ, ದುರದೃಷ್ಟಕರ ಎಂದರು.

SCROLL FOR NEXT